ಗಂಡು ಮಕ್ಕಳು ಮಾತ್ರವಲ್ಲ ಹೆಣ್ಣು ಮಕ್ಕಳೂ ಈಗ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡು ಅದನ್ನು ಉನ್ನತ ಶಿಖರಕ್ಕೇರಿಸಿದ್ದಾರೆ ಎಂಬುದು ನಿಸ್ಸಂಶಯ. ಗೃಹಿ ಣಿ ಯರು ಮಾತ್ರವಲ್ಲದೆ ಔದ್ಯೋಗಿಕ ಜಂಜಾಟದ ಒತ್ತಡದಲ್ಲಿರುವ ಮಹಿಳೆಯರೂ ಒಂದಿನಿತು ಸಮಯವನ್ನು ಯಕ್ಷಗಾನಕ್ಕೆ ಮೀಸಲಿಟ್ಟು ಅದ್ಭುತವಾದ ಪ್ರದರ್ಶನದಿಂದ ಜನಮನಸೂರೆಗೊಂಡಿದ್ದಾರೆ ಎಂದರೆ ಕಲೆಯ ಅನನ್ಯತೆಗೆ ಸಾಟಿಯಿಲ್ಲ ಎಂಬುದು ಸಾಬೀತಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕದ್ರಿ ರಾಜಾಂಗಣದಲ್ಲಿ ಪ್ರದರ್ಶನಗೊಂಡ ಮೇದಿನಿ ನಿರ್ಮಾಣ- ಮಹಿಷ ಮರ್ದಿನಿ ಯಕ್ಷಗಾನ.
ಆದಿಮಾಯೆಯಾಗಿ ಶಿಕ್ಷಕಿಯಾಗಿರುವ ಸುಚೇತ ಕದ್ರಿ ಕಾಣಿಸಿಕೊಂಡರೆ, ದೇವೇಂದ್ರನಾಗಿ ಎಲ್‌ಎಲ್‌ಬಿ ಪದವೀಧರೆ ಜಯಶ್ರೀ ಹೆಬ್ಟಾರ್ ರಂಗಪ್ರವೇಶಿಸಿದರು. ಬ್ರಹ್ಮನಾಗಿ ಪತ್ರಿಕಾ ಸುದ್ದಿ ಅನುವಾದಕಿಯಾಗಿರುವ ಇಂದಿರಾ ಎನ್. ಕೆ. ಕಾಣಿಸಿಕೊಂಡರೆ, ಈಶ್ವರನಾಗಿ ಮತ್ತು ಮಾಲಿನಿ ದೂತ ಪಾತ್ರದಲ್ಲಿ ಟೈಲರಿಂಗ್ ವೃತ್ತಿಯಲ್ಲಿರುವ ಸಂಧ್ಯಾ ಕುಂದೇಶ್ವರ ಕಾಣಿಸಿಕೊಂಡರು. ಮಾಲಿನಿಯಾಗಿ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶೈಲಜಾ ಶ್ರೀಕಾಂತ್ ರಾವ್ ಕಾಣಿಸಿಕೊಂಡರೆ, ಅದೇ ರೀತಿ ಮಹಿಷಾಸುರನಾಗಿ ತಾಳಮದ್ದಳೆ ಅರ್ಥಧಾರಿ ಪೂರ್ಣಿಮಾ ಪ್ರಶಾಂತ್ ರಾವ್ ಅದ್ಭುತ ಪ್ರದರ್ಶನ ನೀಡಿದರು. ಬಿಡಲಾಸುರ ಮತ್ತು ನಿಟಿಲಾಸುರನಾಗಿ ಗೃಹಿಣಿಯರಾದ ಸುನೀತ ಮತ್ತು ಮೀನ ಕದ್ರಿ ಕಾಣಿಸಿಕೊಂಡರು. ಅಷ್ಟಭುಜೆಯಾಗಿ ಗೃಹಿಣಿಯಾಗಿರುವ ವನಿತಾ ರಾಮಚಂದ್ರ ಎಲ್ಲೂರು ಉತ್ತಮ ಪ್ರದರ್ಶನ ನೀಡಿದರು. ಈ ಎಲ್ಲಾ ಮಹಿಳಾ ಮಣಿಗಳೊಂದಿಗೆ ಪುಟಾಣಿ ಕಲಾವಿದರೂ ಕಾಣಿಸಿಕೊಂಡಿದ್ದಾರೆ.
ಅಗ್ನಿ ಮತ್ತು ಸುಪಾರ್ಶ್ವಕನಾಗಿ ರಿಶಿಕಾ ಕುಂದೇಶ್ವರ ಅದ್ಭುತ ಪ್ರದರ್ಶನ ನೀಡಿದ್ದರೆ, ವಾಯು ಪಾತ್ರದಲ್ಲಿ ಹನ್ಸಿಕಾ ವೈ, ವರುಣ ಮತ್ತು ಕುಬೇರ ಪಾತ್ರದಲ್ಲಿ ಅಮೃತವರ್ಣ ಮತ್ತು ಅಮೃತವರ್ಷ ಉತ್ತಮವಾಗಿ ನಿರ್ವಹಿಸಿದರು. ಮಧು-ಕೈಟಭರು ಮತ್ತು ಶಂಖದುರ್ಗರಾಗಿ ರಂಜಿತಾ ಎಲ್ಲೂರು ಮತ್ತು ದುರ್ಗಾಶ್ರೀ ಅಬ್ಬರದ ಪ್ರದರ್ಶನ ನೀಡಿದರು. ವಿದ್ಯುನ್ಮಾಲಿ ಪಾತ್ರದಲ್ಲಿ ಪ್ರಕೃತಿ ಜೋಗಿ ಕಾಣಿಸಿಕೊಂಡರು. ಯಕ್ಷನಾಗಿ ರಕ್ಷಿತಾ ಎಲ್ಲೂರು ಅವರ ಪ್ರವೇಶ ಚೆನ್ನಾಗಿತ್ತು. ವಿಷ್ಣುವಿನ ಪಾತ್ರದಲ್ಲಿ ನಿಶಾ ದೇವಾಡಿಗ ಮಿಂಚಿದರು. ಈ ಪ್ರದರ್ಶನಕ್ಕೆ ಕದ್ರಿ ಬಾಲಯಕ್ಷಕೂಟದ ಸಂಸ್ಥಾಪಕರಾದ ರಾಮಚಂದ್ರ ಭಟ್ ಎಲ್ಲೂರು ಅವರ ದಕ್ಷ ನಿರ್ದೇಶನವಿತ್ತು.
ಹಿಮ್ಮೇಳದಲ್ಲಿ ವಾಸುದೇವ ಕಲ್ಲೂರಾಯ ಮತ್ತು ದಯಾನಂದ ಕೋಡಿಕಲ್ ಅವರ ಸುಮಧುರ ಕಂಠದ ಭಾಗವತಿಕೆಗೆ ಮದ್ದಳೆಯಲ್ಲಿ ಕೃಷ್ಣರಾಜ್ ಭಟ್ ನಂದಳಿಕೆ ಮತ್ತು ಅನಿರುದ್ª ಕದ್ರಿ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಚಿತ್ರಾಪುರ, ಚಕ್ರತಾಳದಲ್ಲಿ ವಿಕ್ರಮ್ ಮಾಯಿರ್ಪಾಡಿ ಸಾಥ್ ನೀಡಿದ್ದರು. ಒಟ್ಟಿನಲ್ಲಿ ಮಹಿಳಾಮಣಿಗಳ ಒಂದು ಅದ್ಭುತ ಪ್ರದರ್ಶನಕ್ಕೆ ಕದ್ರಿಯ ರಾಜಾಂಗಣ ವೇದಿಕೆ ಸಾಕ್ಷಿಯಾಯಿತು.
ಇಂದಿರಾ ಎನ್. ಕೆ. ಕೂಳೂರು