Advertisement

ಸಾಗರೋಲ್ಲಂಘನ ಪುರಾಣಿಕರ ಮಹಿಳಾ ಪ್ರಧಾನ ಸಿನಿಮಾ

12:20 PM Jan 26, 2018 | |

“ತುಂಬಾ ಚಿಕ್ಕದಾಗಿ ಪ್ರಾರಂಭವಾದ ಸಿನಿಮಾ ಈಗ ದೊಡ್ಡದಾಗಿ ಬೆಳೆದಿದೆ …’
ಹೀಗೆಂದರು ಸುನೀಲ್‌ ಪುರಾಣಿಕ್‌. ಅವರು ಹೇಳಿದ್ದು “ಕಪ್ಪು ಗುಲಾಬಿ’ ಚಿತ್ರದ ಬಗ್ಗೆ. ನೀವು ಕೆಂಪು ಗುಲಾಬಿಯ ಬಗ್ಗೆ ಕೇಳಿರಬಹುದು. ಇದ್ಯಾವುದು ಕಪ್ಪು ಗುಲಾಬಿ ಎಂದರೆ ಸುನೀಲ್‌ ಪುರಾಣಿಕ್‌ ನಿರ್ದೇಶನದ ಹೊಸ ಸಿನಿಮಾ. ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಾಕಷ್ಟು ಬಿಝಿಯಾಗಿದ್ದ ಸುನೀಲ್‌ ಪುರಾಣಿಕ್‌ ಈಗ ಚಿತ್ರರಂಗದ ಇಷ್ಟೂ ವರ್ಷಗಳ ಅನುಭವದೊಂದಿಗೆ ಸಿನಿಮಾವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅದಕ್ಕವರಿಟ್ಟ ಹೆಸರು “ಕಪ್ಪು ಗುಲಾಬಿ’. ಕಥೆಯ ಲೈನ್‌ ಹೊಳೆಯುತ್ತಿದ್ದಂತೆ ನಿರ್ಮಾಪಕರಿಗೆ ಹೇಳಿದರಂತೆ. ನಿರ್ಮಾಪಕರು ಕೂಡಾ ಖುಷಿಯಿಂದ ಒಪ್ಪಿಕೊಂಡ ಪರಿಣಾಮ ಈಗ ಸಿನಿಮಾ ಸೆಟ್ಟೇರುವ ಹಂತಕ್ಕೆ ಬಂದಿದೆ. 

Advertisement

“ನಿಜ ಹೇಳಬೇಕೆಂದರೆ ಒಂದು ತಿಂಗಳ ಪ್ಲ್ರಾನ್‌ನಲ್ಲಿ ಈ ಸಿನಿಮಾಕ್ಕೆ ಎಲ್ಲವೂ ಕೂಡಿ ಬಂತು. ಮುಖ್ಯವಾಗಿ ಈ ಸಿನಿಮಾದ ಪ್ರೊಡಕ್ಷನ್‌ ಡಿಸೈನ್‌ ಮಾಡಿರೋದು ನನ್ನ ಮಗ ಸಾಗರ್‌ ಪುರಾಣಿಕ್‌. ಅವನಿಗೆ ಮುಂಚಿನಿಂದಲೂ ತಾಂತ್ರಿಕ ಅಂಶಗಳ ಬಗ್ಗೆ ಆಸಕ್ತಿ ಇತ್ತು. ಯಾವ್ಯಾವ ವಿಭಾಗಕ್ಕೆ ಯಾರ್ಯಾರಿದ್ದರೆ ಚೆಂದ ಎಂದು ಅವನೇ ತೀರ್ಮಾನಿಸಿ, ಆಯ್ಕೆಯಾಗಿದೆ’ ಎಂದರು. 

ಅಂದಹಾಗೆ, ಈ ಚಿತ್ರದಲ್ಲಿ ಸುನೀಲ್‌ ಪುರಾಣಿಕ್‌ ಅವರ ಮಗ ಸಾಗರ್‌ ಹೀರೋ ಆಗಿ ನಟಿಸುತ್ತಿದ್ದಾರೆ. ಹಾಗಂತ ಈ ಕಥೆಯನ್ನು ಸಾಗರ್‌ ಅವರನ್ನು ಗಮನದಲ್ಲಿಟ್ಟು ಮಾಡಿದ್ದಲ್ಲವಂತೆ. “ಕಥೆ ರೆಡಿಯಾಗಿ ಹೀರೋ ಯಾರು ಎಂಬ ಚರ್ಚೆಯಲ್ಲಿದ್ದಾಗ, ನಿರ್ಮಾಪಕರು ಸಾಗರ್‌ ಅವರನ್ನೇ ಹೀರೋ ಮಾಡಿ ಎಂದರು. ಏಕೆಂದರೆ ಆತನ ಆಸಕ್ತಿ, ಎನರ್ಜಿ ಹಾಗೂ ಆ ಪಾತ್ರವನ್ನು ಆತ ಅರ್ಥ ಮಾಡಿಕೊಂಡಿರುವ ರೀತಿಯಿಂದ ಅವನೇ ಮಾಡಿದರೆ ಚೆಂದ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು’ ಎಂದರು. “ಕಪ್ಪು ಗುಲಾಬಿ’ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪ್ರೀತಿಯ ಮತ್ತೂಂದು ಮುಖದ ಅನಾವರಣ ಈ ಚಿತ್ರದಲ್ಲಿ ಆಗಲಿದೆಯಂತೆ. ಒಂದಷ್ಟು ನಿಜವಾದ ಘಟನೆಗಳನ್ನು ಆಧರಿಸಿ ಈ ಕಥೆ ಮಾಡಿದ್ದಾಗಿ ಹೇಳಿಕೊಂಡರು. ಸುನೀಲ್‌ ಪುರಾಣಿಕ್‌ ಅವರ ಕಥೆಗೆ ಪವನ್‌ ಒಡೆಯರ್‌ ಅವರ ಚಿತ್ರಕಥೆ, ಸಂಭಾಷಣೆ ಇದೆ. 

ಈ ಚಿತ್ರವನ್ನು ಆರ್‌.ವಿ.ರಮೇಶ್‌ ಯಾದವ್‌ ಅವರು ನಿರ್ಮಿಸುತ್ತಿದ್ದಾರೆ. ಕಥೆ ಇಷ್ಟವಾಗಿದ್ದರಿಂದ ಸಿನಿಮಾ ನಿರ್ಮಿಸುತ್ತಿರುವುದಾಗಿ ಹೇಳಿದರು. ಮೊದಲ ಬಾರಿಗೆ ನಾಯಕರಾಗಿ ನಟಿಸುತ್ತಿರುವ ಸಾಗರ್‌ ಅವರಿಗೆ ಆರಂಭದಲ್ಲಿ ಈ ಚಿತ್ರದಲ್ಲಿ ನಾಯಕನಾಗುತ್ತೇನೆಂಬುದು ಗೊತ್ತಿರಲಿಲ್ಲವಂತೆ. “ಆರಂಭದಲ್ಲಿ ನಾನು ಸಹಾಯಕ ನಿರ್ದೇಶಕರಾಗಿ ಈ ಸಿನಿಮಾದಲ್ಲಿ ಸೇರಿಕೊಳ್ಳಬೇಕೆಂದಿದ್ದೆ. ಆದರೆ, ಕೊನೆಗೆ ಹೀರೋ ಆಗುವ ಅವಕಾಶ ಸಿಕ್ಕಿತು. ನನಗೆ ಸ್ಟಾರ್‌ ಆಗಬೇಕೆಂಬ ಯಾವ ಆಸೆಯೂ ಇಲ್ಲ. ಮೊದಲಿಗೆ ಒಳ್ಳೆಯ ನಟ ಆಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ಈ ಪಾತ್ರದಲ್ಲೂ ನಟನೆಗೆ ಅವಕಾಶವಿದೆ’ ಎಂಬುದು ಅವರ ಮಾತು.

ಚಿತ್ರದಲ್ಲಿ ನಿಖೀತಾ ನಾರಾಯಣ್‌ ನಾಯಕಿ. ಇದು ನಾಯಕಿ ಪ್ರಧಾನ ಚಿತ್ರವಾದ್ದರಿಂದ ಅವರ ಪಾತ್ರಕ್ಕೆ ಹೆಚ್ಚು ಅವಕಾಶವಿದೆಯಂತೆ. “ಸುನೀಲ್‌ ಅವರು ಕಥೆ ಹೇಳಿದಾಗಲೇ ಖುಷಿಯಾಯಿತು. ಒಂದು ವೇಳೆ ಈ ಸಿನಿಮಾದಲ್ಲಿ ಅವಕಾಶ ಸಿಗದಿದ್ದರೆ ಮುಂದೊಂದು ಸಿನಿಮಾದಲ್ಲಾದರೂ ಕೆಲಸ ಮಾಡುವ ಎಂದಿದ್ದೆ. ಆದರೆ, ಈ ಸಿನಿಮಾದಲ್ಲೇ ನಟಿಸುವ ಅವಕಾಶ ಸಿಕ್ಕಿದೆ’ ಎಂದು ಖುಷಿಯಾದರು. ಚಿತ್ರದಲ್ಲಿ ಸುಚೇಂದ್ರ ಪ್ರಸಾದ್‌ ನಾಯಕಿಯ ತಂದೆಯ ಪಾತ್ರ ಮಾಡುತ್ತಿದ್ದು, ಸಮಾಜಕ್ಕೆ ಸಂದೇಶ ಕೊಡುವಂತಹ ಪಾತ್ರವಂತೆ. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದ ಪವನ್‌ ಒಡೆಯರ್‌ ಅವರಿಗೆ ಕಥೆ ಇಷ್ಟವಾಗಿದ್ದು, ಹೊಸ ಬಗೆಯಿಂದ ಕೂಡಿದೆಯಂತೆ. ಚಿತ್ರಕ್ಕೆ ಕಾರ್ತಿಕ್‌ ಶರ್ಮಾ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಪ್ರಮೋಶನಲ್‌ ಸಾಂಗ್‌ ಅನ್ನು ಆಲೋಕ್‌ ಸಂಯೋಜಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆಯಂತೆ. 

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next