ಲಂಡನ್: ಮಹಿಳಾ ವಿಶ್ವಕಪ್ ಹಾಕಿಯಲ್ಲಿ ಐರೆಲಂಡ್ ತಂಡದ ಅಮೋಘ ಯಾತ್ರೆ ಬೇಸರದೊಂದಿಗೆ ಮುಕ್ತಾಯವಾಗಿದೆ. ಆದರೂ ಕೂಟದಲ್ಲೇ 2ನೇ ಕನಿಷ್ಠ ಶ್ರೇಯಾಂಕಿತ ತಂಡವಾಗಿ ಕಣಕ್ಕಿಳಿದಿದ್ದ ಅದು ಫೈನಲ್‌ವರೆಗೆ ಏರಿದ ಸಾಧನೆಗಾಗಿ ಇಡೀ ವಿಶ್ವ ಮೆಚ್ಚುಗೆ ಸೂಚಿಸಿದೆ. ಅಂತಿಮ ಪಂದ್ಯದಲ್ಲಿ ಐರೆಲಂಡ್ ತಂಡವನ್ನು ನೆದರೆಲಂಡ್ ತಂಡ 6-0 ಗೋಲುಗಳಿಂದ ಹೊಸಕಿ ಹಾಕಿತು. ದಾಖಲೆಯ 8ನೇ ಬಾರಿಗೆ ವಿಶ್ವಕಪ್ಪನ್ನು ಗೆದ್ದುಕೊಂಡಿತು.
ಆಸಕ್ತಿದಾಯಕ ಸಂಗತಿಯೆಂದರೆ 2016ರ ರಿಯೋ ಒಲಿಂಪಿಕ್ಸ್ ಫೈನಲ್ ನಂತರ ನೆದರೆಲಂಡ್ ಸೋತ ಸುದ್ದಿಯೇ ಇಲ್ಲ. ಅದೇ ಉತ್ಸಾಹವನ್ನು ಅಂತಿಮ ಪಂದ್ಯದಲ್ಲೂ ತೋರಿದ ನೆದರೆಲಂಡ್ ಎಲ್ಲೂ ಎಡವಲಿಲ್ಲ. ಆ ತಂಡದ ಪರ ಲಿಡ್‌ವಿಜ್ ವೆಲ್ಟನ್, ಕೆಲ್ಲಿ ಜಾಂಕರ್, ಕಿಟ್ಟಿ ವ್ಯಾನ್ ಮೇಲ್, ಮಾಲೂ ಫೆನಿಂಕ್ಸ್, ಮಾರೊÉàಸ್ ಕೀಟೆಲ್ಸ್, ಕೈಯಾ ವ್ಯಾನ್ ಮಾಸಾಕ್ಕರ್ ಗೋಲು ಬಾರಿಸಿದರು.
ಐರೆಲಂಡ್ ಅದ್ಭುತ ಸಾಧನೆ: ಫೈನಲ್‌ನಲ್ಲಿ ಐರೆಲಂಡ್ ಆಟಗಾರ್ತಿಯರು ಲೀಗ್‌ನಲ್ಲಿ ತೋರಿದ ಛಾತಿಯನ್ನು ತೋರಲಿಲ್ಲ. ಅಲ್ಲಿ ತನಗಿಂತ ಮೇಲಿನ ಶ್ರೇಯಾಂಕಿತ ತಂಡವನ್ನು ಸೋಲಿಸಿ ಅದು ಫೈನಲ್‌ಗೇರಿತ್ತು. ವಸ್ತುಸ್ಥಿತಿಯಲ್ಲಿ ಐರೆಲಂಡ್ ತಂಡದಲ್ಲಿ ಎಲ್ಲರೂ ವೃತ್ತಿಪರ ಆಟಗಾರ್ತಿಯರಲ್ಲ, ಅರೆಕಾಲಿಕ ಆಟಗಾರ್ತಿಯರು. ಜೊತೆಗೆ ತಂಡದ ಶ್ರೇಯಾಂಕ 16ಕ್ಕಿಳಿದಿತ್ತು. ಇಂತಹ ಸ್ಥಿತಿಯಲ್ಲಿ ಐರೆಲಂಡ್ ಫೈನಲ್ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಲೀಗ್‌ನಲ್ಲಿ ಭಾರತ, ಅಮೆರಿಕವನ್ನು ಸೋಲಿಸಿದ್ದ ಅದು ಕ್ವಾರ್ಟರ್‌ಫೈನಲ್‌ನಲ್ಲಿ ಮತ್ತೆ ಭಾರತವನ್ನು ಸೋಲಿಸಿತು. ಸೆಮಿಫೈನಲ್‌ನಲ್ಲಿ ಸ್ಪೇನನ್ನು ಸೋಲಿಸಿತ್ತು.
ಆದರೆ ಫೈನಲ್‌ನಲ್ಲಿ ಮಾತ್ರ ಅದರ ಎಲ್ಲ ಜಾದೂ, ಕೌಶಲ್ಯ, ಬಿರುಸು, ವೇಗ ಕೈಕೊಟ್ಟಂತೆ ಕಂಡಿತು. ಆಟಗಾರ್ತಿಯರ ನಡುವೆ ಸರಿಯಾಗಿ ಹೊಂದಾಣಿಕೆಯಿರಲಿಲ್ಲ. ಅಲ್ಲಲ್ಲಿ ಗೊಂದಲವಿತ್ತು. ಅದರ ಫಲಶೃತಿಯಾಗಿ ಐರೆಲಂಡ್ ಸೋಲನ್ನು ಅನುಭವಿಸಬೇಕಾಯಿತು.