Advertisement

ಮಲೆಗೆ ಸ್ತ್ರೀ ಪ್ರವೇಶ: ಉದ್ವಿಗ್ನ

12:30 AM Jan 03, 2019 | Team Udayavani |

ತಿರುವನಂತಪುರ/ಶಬರಿಮಲೆ: ಶಬರಿ ಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧವಿದ್ದ ಹೊರತಾಗಿಯೂ ನಲವತ್ತು ಆಸುಪಾಸು ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ಬೆಳಗಿನ ಜಾವ ದೇಗುಲ ಪ್ರವೇಶ ಮಾಡಿದ್ದಾರೆ. ಬೆಳಗಿನ ಜಾವ 3.45ಕ್ಕೆ ಕನಕದುರ್ಗಾ (42) ಮತ್ತು ಬಿಂದು (42)ಎಂಬವರು ದೇಗುಲದ ಸನ್ನಿಧಾನಂ ಪ್ರವೇಶಿಸಿದ್ದಾರೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಯುಡಿಎಫ್ನಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆ ಆರಂಭವಾಗಿದೆ. ಈ ಘಟನೆ ಖಂಡಿಸಿ ಶಬರಿಮಲೆ ಕರ್ಮ ಸಮಿತಿ ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಹರತಾಳಕ್ಕೆ ಕರೆ ನೀಡಿದೆ. ಆದರೆ ವ್ಯಾಪಾರಿಗಳ ಒಕ್ಕೂಟ ಅದನ್ನು ಬೆಂಬಲಿಸದಿರಲು ನಿರ್ಧರಿಸಿದೆ. ತಿರುವನಂತಪುರದಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗಿದೆ.

Advertisement

ಪೊಲೀಸರ ಭದ್ರತೆ
ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿರುವನಂತಪುರದಲ್ಲಿ ಖಚಿತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಿರುವುದು ನಿಜ. ಪೊಲೀಸರು ಅವರಿಗೆ ಭದ್ರತೆ ನೀಡಿದ್ದರು. ಅವರಿಗೆ ಯಾವುದೇ ರೀತಿಯಲ್ಲಿ ಸವಾಲು ಎದುರಾಗಲಿಲ್ಲ ಎಂದು ಹೇಳಿದ್ದಾರೆ. ಸಿಎಂ ಸುದ್ದಿಗೋಷ್ಠಿಗೂ ಮೊದಲೇ ಮಲಯಾಳ ಸುದ್ದಿವಾಹಿನಿಗಳು ಈ ಸುದ್ದಿ ಪ್ರಸಾರ ಮಾಡಿದ್ದವು. ಬಿಜೆಪಿ, ಆರ್‌ಎಸ್‌ಎಸ್‌, ಕಾಂಗ್ರೆಸ್‌ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆಯತ್ತ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ನುಗ್ಗಲು ಪ್ರಯತ್ನಿಸಿದರು. ಕಣ್ಣೂರಿನಲ್ಲಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘೇರಾವ್‌ ಹಾಕಿದ್ದಾರೆ.

ಇಬ್ಬರು ಮಹಿಳೆಯರ ಭೇಟಿ
ಕಳೆದ ವರ್ಷದ ಸೆ.28ರಂದು ಸುಪ್ರೀಂ ಕೋರ್ಟ್‌ ಎಲ್ಲ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶ ಮಾಡಬಹುದು ಎಂದು ತೀರ್ಪು ನೀಡಿದ ಬಳಿಕ ಹಲವು ಬಾರಿ ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದ್ದರೂ  ತೀವ್ರ ಪ್ರತಿಭಟನೆಯಿಂದಾಗಿ ಅದು ಕೈಗೂಡಿರಲಿಲ್ಲ. ಆದರೆ ಕನಕದುರ್ಗಾ ಮತ್ತು ಬಿಂದು ಅವರು ಮಂಗಳವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ಪಂಪಾ ನದಿ ತೀರದಿಂದ ನಡೆದುಕೊಂಡು ಯಾತ್ರೆ ಆರಂಭಿಸಿದ್ದರು. ಇಬ್ಬರು ಮಹಿಳೆಯರು ಕಪ್ಪು ವಸ್ತ್ರ ಧರಿಸಿ ಮುಖ ಮುಚ್ಚಿಕೊಂಡಿದ್ದರು. ಇಬ್ಬರೂ ಅಯ್ಯಪ್ಪನ ದರ್ಶನ ಪಡೆದು 3.48ರ ಸುಮಾರಿಗೆ ವಾಪಸಾಗಿದ್ದಾರೆ.

ಆಕ್ರೋಶ, ಪ್ರತಿಭಟನೆ
ಮುಖ್ಯಮಂತ್ರಿ ಅಧಿಕೃತವಾಗಿ ಪ್ರಕಟಿಸಿದ ಬಳಿಕ ಮತ್ತು ಸುದ್ದಿ ವಾಹಿನಿಗಳಲ್ಲಿ ಈ ವಿಚಾರ ಪ್ರಸಾರವಾದ ಬಳಿಕ ಕೇರಳದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಯಿತು. ತಿರುವನಂತಪುರದಲ್ಲಿರುವ ಕೇರಳ ಸಚಿವಾಲಯದ ಮುಂದೆ ಭಾರೀ ಪ್ರತಿಭಟನೆ ನಡೆದಿದೆ. ಉದ್ರಿಕ್ತರನ್ನು ತಡೆಯಲು ಪೊಲೀಸರು ಜಲಫಿರಂಗಿ, ಅಶ್ರುವಾಯು, ಭಾರೀ ಪ್ರಮಾಣದಲ್ಲಿ ಶಬ್ದ ಹೊರಸೂಸಿ ಗುಂಪನ್ನು ಚದುರಿಸುವ  ಸ್ಟನ್‌ ಗ್ರೆನೇಡ್‌ ಅನ್ನು ಬಳಕೆ ಮಾಡಲಾಗಿದೆ. ಈ ಘಟನೆಯ ಬಳಿಕ ಕೇರಳ ರಾಜಧಾನಿಯಲ್ಲಿ ಬಿಗುವಿನ ಪರಿಸ್ಥಿತಿ ಇದೆ.

ಶಬರಿಮಲೆ ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ, ಕೇರಳ ಸರಕಾರ ಅದರ ಬಗ್ಗೆ ಕ್ರಮ ಕೈಗೊಳ್ಳಲಿದೆ. ನಮ್ಮ ರಾಜ್ಯದ ಭಕ್ತರಿಗೆ ತೊಂದರೆಯಾದರೆ ಅವರ ರಕ್ಷಣೆಗೆ ಸರಕಾರ ಬದ್ಧ.
– ಎಂ.ಬಿ.ಪಾಟೀಲ್‌, ಗೃಹ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next