ಕೋಲಾರ: ಅಗತ್ಯವಿರುವವರಿಗೆ ಅರ್ಜಿ ಬರೆದುಕೊಡುವುದರಿಂದ ಹಿಡಿದು ಸ್ತ್ರೀಶಕ್ತಿ ಸಂಘಗಳನ್ನು ಹುಟ್ಟು ಹಾಕಿ, ವೃತ್ತಿ ಕೌಶಲ್ಯ ತರಬೇತಿ ಕಲ್ಪಿಸುತ್ತಾ, ಸರಿದಾರಿಯ ಮಾರ್ಗದರ್ಶನ ನೀಡಿ ಆರ್ಥಿಕ ಸ್ವಾವಲಂಬನೆಗೆ ನೆರವಾಗುವವರೆಗೂ ಪ್ರತಿನಿತ್ಯವೂ ಸುತ್ತಮುತ್ತಲ ಮಹಿಳೆಯರ ಸೇವೆಗೆ ಸದಾ ಸಿದ್ಧ ಎನ್ನುತ್ತಾರೆ ಕೋಲಾರ ವಿನುತಾಕೃಷ್ಣ.
ಕೋಲಾರದ ದೊಡ್ಡಪೇಟೆಯ ತನ್ನ ಊದುಬತ್ತಿ ಅಂಗಡಿಯನ್ನೇ ಮಹಿಳೆಯರ ಮಾಹಿತಿ ಮಾರ್ಗ ದರ್ಶನ ಕೇಂದ್ರವನ್ನಾಗಿಸಿ ಕೊಂಡಿರುವ ವಿನುತಾಕೃಷ್ಣ, ಸರ್ಕಾರಿ ಸೇವೆಗಳ ಪಡೆಯಲು ಯಾರೇ ಯಾವಾಗ ಅರ್ಜಿ ಬರೆದು ಕೊಡುವಂತೆ ಬಂದರೂ ತನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅರ್ಜಿ ಬರೆದುಕೊಟ್ಟು ಅಗತ್ಯ ಸಲಹೆ ಸೂಚನೆ ನೀಡುತ್ತಾರೆ.
ಬ್ಯಾಂಕ್‌ಗಳಲ್ಲಿ ಖಾತೆ ಆರಂಭ, ಅನಕ್ಷರಸ್ಥ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ, ಅಂಚೆ ಕಚೇರಿಯಲ್ಲಿ ಆರ್‌ಡಿ ಖಾತೆ ಮಾಡಿಸುವ ಮೂಲಕ ಉಳಿತಾಯ ಮನೋಭಾವ ಬೆಳೆಸುವುದು, ವಿಮೆಯ ಮಹತ್ವ ತಿಳಿಸಿ ವಿಮಾ ಸೌಲಭ್ಯ ಕಲ್ಪಿಸುವುದು, ಮದುವೆ, ಮುಂಜಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾರಥ್ಯವಹಿಸಿ ನೆರವಾಗುವುದು ಇವರ ಮೆಚ್ಚಿನ ನಿತ್ಯದ ಹವ್ಯಾಸವಾಗಿದೆ.
ಹದಿನೈದು ವರ್ಷಗಳಿಂದಲೂ ಪ್ರಕೃತಿ ನಗರ ಸ್ತ್ರೀಶಕ್ತಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಇತರ ಮಹಿಳಾ ಸ್ವಸಹಾಯ ಸಂಘಗಳಿಗೆ ಜಿಲ್ಲೆಯಲ್ಲಿಯೇ ಮಾದರಿಯಾಗಿಸಿದ್ದಾರೆ. ಸಹಕಾರ ಬ್ಯಾಂಕ್‌ಗಳಿರಲಿ ಕೋಲಾರ ಜಿಲ್ಲೆಯ ಯಾವುದೇ ವಾಣಿಜ್ಯ ಬ್ಯಾಂಕ್ ಇವರ ಸಂಘಕ್ಕೆ ಸಾಲ ಸೌಲಭ್ಯ ಕಲ್ಪಿಸಲು ಪೈಪೋಟಿ ನಡೆಸುವುದು ಇವರ ಸಂಘ ನಡೆಸುವ ರೀತಿಗೆ ಸಿಗುತ್ತಿರುವ ಗೌರವವಾಗಿದೆ.
ಸುಮಾರು ಇಪ್ಪತ್ತೈದು ವರ್ಷಗಳಿಂದಲೂ ಕೋಲಾರ ದೊಡ್ಡಪೇಟೆ ಸುತ್ತಮುತ್ತಲ ವಾರ್ಡ್‌ಗಳಲ್ಲಿ ಮಹಿಳೆಯರ ಪ್ರೀತಿ ಪಾತ್ರ ಮಾರ್ಗದರ್ಶಕರಾಗಿದ್ದರೂ ವಿನೀತಭಾವ ಹೊಂದಿದ್ದಾರೆ. ಸಾಯಿಬಾಬಾರ ನಿಷ್ಠ ಭಕ್ತರಾಗಿರುವ ವಿನುತಾಕೃಷ್ಣ ಮಹಿಳೆಯರ ಸೇವೆ ಯಲ್ಲಿಯೇ ಬಾಬಾರನ್ನು ಕಾಣುತ್ತಾ ಇದು ವರೆಗೂ ಯಾವುದೇ ಸೇವೆಗೆ ಪ್ರಚಾರ ಫಲಾಪೇಕ್ಷೆ ಬಯಸದೆ ಎಲೆಮರೆಕಾಯಿ ಯಂತೆ ಕೈಲಾದ ಸೇವೆ ಸಲ್ಲಿಸುತ್ತಾ ಬದುಕುತ್ತಿದ್ದಾರೆ.
–ಕೆ.ಎಸ್.ಗಣೇಶ್