ಶಿರಸಿ: ಹಿಂದಿನ ಕಾಲದಂತೆ ಮಹಿಳೆ ಈಗಿಲ್ಲ. ಅವಳು ಸಾಕಷ್ಟು ಮುಂದುವರೆದಿದ್ದಾಳೆ. ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ. ಇರುವ ವಿಫುಲ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತನ್ನ ಅಸ್ತಿತ್ವದ ಘನತೆ ಗೌರವವನ್ನು ತನ್ನ ಸಾಧನೆಯ ಮೂಲಕವೇ ಪರಿಚಯಿಸುತ್ತಿದ್ದಾಳೆ ಎಂದು ಸಾಹಿತಿ ಭಾಗೀರತಿ ಹೆಗಡೆ ಹೇಳಿದರು.
ಅವರು ಅರುಣೋದಯ ತರಬೇತಿ ಕೇಂದ್ರದಲ್ಲಿ ಕದಂಬ ಕಲಾ ವೇದಿಕೆ ಶಿರಸಿ ಹಾಗೂ ಶಿರಸಿ ಕರೋಕೆ ಸ್ಟುಡಿಯೋ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಅಮ್ಮ ನಿನ್ನ ಎದೆಯಾಳದಲ್ಲಿ ಶೀರ್ಷಿಕೆಯ ಸಂಗೀತ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂಥ ಸಂದರ್ಭದಲ್ಲಿ ನಾವು ಜಾತಿ ಮತ ಧರ್ಮ ಪಂಥಗಳಾಚೆ ನಿಂತು ಮಾನವತೆಯ ತತ್ವದೊಂದಿಗೆ ಮನುಷ್ಯ ಮನುಷ್ಯರನ್ನು ಪ್ರೀತಿಸುತ್ತಾ ಸಾಗಿದಾಗ ವಿಶ್ವ ಮಹಿಳಾ ದಿನಾಚರಣೆ ಸಂದೇಶ ವಿಶ್ವಕ್ಕೆ ಸಾರಿದಂತಾಗುವುದು. ಇಂದಿನ ಕಾರ್ಯಕ್ರಮದ ಉದ್ದೇಶ ಹಾಗೂ ಶೀರ್ಷಿಕೆ ಎರಡು ಅತ್ಯಂತ ಅರ್ಥಪೂರ್ಣವಾದುದು ಎಂದರು.
ಪತ್ರಕರ್ತ ಕೃಷ್ಣಮೂರ್ತಿ ಕೆರೆಗದ್ದೆ, ಮಹಿಳೆ ಸಾಮಾಜಿಕ ಸಾಂಸ್ಕೃತಿಕ ಶೈಕ್ಷಣಿಕ ಸಾಹಿತ್ಯಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಾಗೂ ಸಮಾಜಕ್ಕೆ ಮಹಿಳೆ ನೀಡಿದ ಕೊಡುಗೆಳನ್ನು ಸ್ಮರಿಸಿ ಸಂಭ್ರಮಿಸುವ ದಿನವೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಹೆಣ್ಣುಮಕ್ಕಳು ಇಂದು ಪುರುಷರಿಗೆ ಸಮಾನವಾಗಿ ಬದುಕನ್ನು ಕಟ್ಟಿಕೊಂಡು ಇಡೀ ಕುಟುಂಬವನ್ನ ಸಾಕುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ತಾಯಿಯಾಗಿ ತಂಗಿಯಾಗಿ ಪತ್ನಿಯಾಗಿ ಮಗಳಾಗಿ ನಮ್ಮ ಮನ ಮನೆಗಳನ್ನು ಬೆಳಗುವ ಮಹಿಳೆಯನ್ನು ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದರು.
ಅಧ್ಯಕ್ಷತೆಯನ್ನು ಅರಣ್ಯಾಧಿಕಾರಿ ಕಿರಣ್ ಬಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶಾಲಾ ಆರ್ ಕೆ ಹಾಗೂ ಶುಭ ಟಿ ಉಪಸ್ಥಿತರಿದ್ದರು. ಸಮಸ್ತ ಮಹಿಳೆಯರ ಪರವಾಗಿ ಸಾಹಿತಿ ಕಥೆಗಾರ್ತಿ ಭಾಗೀರಥಿ ಹೆಗಡೆಯವರನ್ನ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ಖುರ್ಚಿ ಹಾಗೂ ಸಂಗೀತ ರೆಟ್ರೋ ಸ್ಪರ್ಧೆಯಲ್ಲಿ ಮಹಿಳೆಯರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ಹಾಡಿ ನಲಿದು ಕುಣಿದು ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ಜ್ಯೋತಿ ಸತೀಶ್, ಉಷಾ ಕಿರಣ್ ಹಾಗೂ ಪದ್ಮಾ ಶೇಟ್ ವಿಜಯಿಯಾದರು ಕಾರ್ಯಕ್ರಮದ ಸಂಘಟಕ ನಿತ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರಸಿ ರತ್ನಾಕರ ಸ್ವಾಗತಿಸಿ ನಿರೂಪಿಸಿದರು. ಗೀತಾ ಸಂತೋಷ್ ಪ್ರಾರ್ಥಿಸಿದರು. ದಿವ್ಯಾ ಶೇಟ್ ಶೀರ್ಷಿಕೆ ಗೀತೆಯನ್ನ ಹಾಡಿದರು. ಅರುಣೋದಯ ಟ್ರಸ್ಟ್ ನ ಸತೀಶ್ ನಾಯ್ಕ ದಂಪತಿಗಳು ಸಹಕರಿಸಿದರು.