ಮಡಿಕೇರಿ: ಮಹಿಳೆಯರ ಶೋಷಣೆಗೆ ಕೇವಲ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ಮಾತ್ರ ಕಾರಣವಲ್ಲ, ಬದಲಾಗಿ ಪುರುಷ ಪ್ರಾಧಾನ್ಯತೆಯನ್ನು ಪೋಷಿಸುವ ಮಹಿಳೆಯರೂ ಕಾರಣ ಎಂಬ ಅಭಿಪ್ರಾಯ ನಗರದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಮಾಜದಲ್ಲಿ ಸಹಬಾಳ್ವೆ; ಮಹಿಳೆ ಮತ್ತು ಪುರುಷರ ಪಾತ್ರ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಮಹಿಳೆಯರ ಹಕ್ಕು ಸ್ವಾತಂತ್ರ್ಯ ಕೇವಲ ಸಾಂವಿಧಾನಿಕವಾಗಿ ಮಾತ್ರ ಉಳಿದುಕೊಂಡಿದೆ ಅದು ಪ್ರಾಯೋಗಿಕವಾಗಿ ಆಚರಣೆಯಲ್ಲಿಲ್ಲ ಎಂದು ಕನ್ನಡ ವಿಭಾಗದ ಉಪನ್ಯಾಸಕಿ ಲಕ್ಷ್ಮೀದೇವಿ ಅವರು ಪ್ರತಿಪಾದಿಸಿದರೆ, ಅದಕ್ಕೆ ದನಿಗೂಡಿಸಿದ ಕಲಾವಿದೆ ಶೋಭಾ ಸುಬ್ಬಯ್ಯ, ಮಹಿಳೆಯರ ಶೋಷಣೆಯನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಮಹಿಳೆಯರು ಒಂದಾಗಬೇಕು. ಅವರ ಹಕ್ಕೊತ್ತಾಯವನ್ನು ಪ್ರಬಲವಾಗಿ ಮಂಡಿಸುವ ಶಕ್ತಿಯನ್ನು ಮಹಿಳೆಯರೆಲ್ಲರೂ ರೂಢಿಸಿಕೊಳ್ಳಬೇಕು. ಒಗ್ಗಟ್ಟಾಗಿ ಒಕ್ಕೊರಳಿನಿಂದ ಪ್ರತಿಭಟಿಸಿ ಸ್ವತಂತ್ರರಾಗಬೇಕು ಎಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ದುಡಿದು ನಮ್ಮ ಕಾಲ ಮೇಲೆ ನಾವು ನಿಂತು ಸಾಧನೆಯ ಮೆಟ್ಟಿಲೇರಬೇಕು ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಉಪನ್ಯಾಸಕಿ ಕಾವೇರಿ ಪೊನ್ನಪ್ಪ ಅವರು ಮಾತನಾಡಿ, ಪುರುಷ ಗಂಡನಾಗಿ, ಅಪ್ಪನಾಗಿ, ಮಗನಾಗಿ ಎಲ್ಲ ಸಂಬಂಧಗಳಲ್ಲೂ ಹೆಣ್ಣಿನೊಂದಿಗೆ ಬದುಕು ಹಂಚಿಕೊಂಡಿರುವುದರಿಂದ ಇಲ್ಲಿ ಪುರುಷರನ್ನು ವಿರೋಧಿಸುವ ಬದಲಾಗಿ ಮಹಿಳೆಯರೂ ಪುರುಷರಿಗೆ ಸಮಾನವಾಗಿ ದುಡಿದು ಆರ್ಥಿಕವಾಗಿ ಸಬಲರಾಗಿ ಸಂಸಾರವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ಹೊರಬೇಕಿದೆ. ಇಂದು ಎಲ್ಲ ಮನೆಗಳಲ್ಲೂ ಬಹುತೇಕ ಶೇಕಡಾ 75 ರಷ್ಟು ಕೆಲಸವನ್ನು ನಿಭಾಯಿಸುತ್ತಿರುವುದು ಮಹಿಳೆಯರೇ ಆದರೂ ಕೌಟುಂಬಿಕ ನಿರ್ಣಯಗಳಲ್ಲಿ ಪುರುಷರ ನಿಲುವೇ ಅಂತಿಮವಾಗುತ್ತಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು. ಕಾನೂನಾತ್ಮಕವಾಗಿ ಮಹಿಳೆಗೆ ಸಾಕಷ್ಟು ರಕ್ಷಣಾ ಕವಚವಿದ್ದರೂ, ಮಹಿಳೆಯರ ವಿರುದ್ಧ ಮನೆಯಲ್ಲಾಗುವ ದೌರ್ಜನ್ಯ, ಕೆಲಸದ ಜಾಗಗಳಲ್ಲಾಗುವ ದೌರ್ಜನ್ಯಗಳ ವಿರುದ್ಧ ಕಾನೂನು ಮೊರೆ ಹೋಗಿದ್ದರೆ ಎಷ್ಟೋ ಪುರುಷರನ್ನು ಜೈಲಿಗೆ ಹಾಕಬಹುದಿತ್ತು. ಆದರೆ ಆಕೆ ಮೌನವಾಗಿಯೇ ಎಲ್ಲವನ್ನೂ ಸಹಿಸಿಕೊಂಡು ಕಾನೂನಿನ ಸದುಪಯೋಗ ಪಡೆಯದೆ ಯಾರ ಮೇಲೂ ಸೇಡು ತೀರಿಸಿಕೊಳ್ಳದೆ ಉಳಿದುಕೊಂಡಿರುವ ಬೆಳವಣಿಗೆಯನ್ನು ಗಮನಿಸಿದರೆ, ಆಕೆಯ ಹೃದಯ ವೈಶಾಲ್ಯತೆ ಎಷ್ಟಿದೆ ಎಂಬುದನ್ನು ಮನಗಾಣಬಹುದಾಗಿದೆ. ಅದನ್ನು ಪುರುಷರು ಅರ್ಥಮಾಡಿಕೊಳ್ಳಲು ವಿಫಲರಾಗಿರುವುದೇ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರೆಯಲು ಕಾರಣವಾಗಿದೆ ಎಂದರು.
ಕೊಡಗು ಚಾನಲ್‌ನ ಕಾರ್ಯಕ್ರಮ ನಿರ್ದೇಶಕ ಜೈರಸ್ ಥಾಮಸ್ ಅಲೆಕ್ಸಾಂಡರ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಪ್ರಾಂಶುಪಾಲೆ ಡಾ| ಪಾರ್ವತಿ ಅಪ್ಪಯ್ಯ ಮತ್ತು ಕಾಲೇಜಿನ ಕೌನ್ಸೆಲಿಂಗ್ ಘಟಕದ ಸಂಯೋಜಕರು ಹಾಗೂ ಇಂಗ್ಲೀಷ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ| ನಯನಾ ಕಶ್ಯಪ್ ಅವರು ಒಟ್ಟಾರೆ ಸಂವಾದದ ನೇತೃತ್ವ ವಹಿಸಿದರು.
ಕಾಲೇಜಿನ ಕೌನ್ಸಿಲರ್ ಆರತಿ ಸೋಮಯ್ಯ ಸಂವಾದಕ್ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೋಧಕ ಬೋಧಕೇತರ ಸಿಬಂದಿ ಸೇರಿದಂತೆ ಗ್ರಂಥಪಾಲಕರಾದ ವಿಜಯಲತಾ, ಉಪನ್ಯಾಸಕರಾದ ಡಾ| ಗಾಯತ್ರಿದೇವಿ, ಡಾ| ಸೌಮ್ಯಾ, ಡಾ| ಗಾಯತ್ರಿ ಎ ಎನ್, ಕಾಂಚನ, ಕ್ಷೇತ್ರ, ಕೃತಿಕಾ, ತೇಜಸ್ವಿ, ಅಶ್ವಿನಿ, ನಿವ್ಯಾ, ಅಪೂರ್ವ, ರಕ್ಷಿತಾ, ಸಚಿನ್, ಶ್ರೀನಿವಾಸ್, ಕಚೇರಿ ಸಿಬಂದಿ ಚಂದ್ರಾವತಿ, ಭಾರತಿ ಮತ್ತು ದ್ವಿತೀಯ ಎಂ. ಎಸ್. ಸಿ. ಭೌತಶಾಸ್ತ್ರ ವಿದ್ಯಾರ್ಥಿ ಶ್ರೀನಿ ಅವರು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕುಮಾರಿಯರಾದ ನೂರ್ ಹುದಾ ಮತ್ತು ನೂರ್ ಸಭಾ ತಯಾರಿಸಿದ ಮಹಿಳಾ ಸಾಧಕಿಯರ ಕುರಿತ ಅನ್ಸಂಗ್ ಶೀರೋಸ್ ಎಂಬ ಕಿರುಚಿತ್ರವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉಪನ್ಯಾಸಕರಾದ ಡೀನಾ ಮತ್ತು ಕಾಂಚನ ನಿರೂಪಿಸಿದರು.