Advertisement
ಹೆಜ್ಜೆ ಹೆಜ್ಜೆಗೂ ಹೆಣ್ಣು ಮಕ್ಕಳನ್ನು ನಿಯಂತ್ರಿಸುತ್ತಿದ್ದ ಅಂದಿನ ದಿನಗಳನ್ನು ನೆನಪಿಸಿಕೊಳ್ಳುವಾಗ ನನ್ನದೇ ಬದುಕಿನ ಹಲವು ಚಿತ್ರಗಳು ನಾ ಮುಂದು ತಾಮುಂದು ಎಂದು ಮುನ್ನುಗ್ಗಿ ಬರುತ್ತಿವೆ. ಬಾಯಿ ತೆರೆದರೆ ಸ್ವಲ್ಪ ಗಟ್ಟಿಯಾಗಿ ಮಾತಾಡುವುದನ್ನೇ ಅಭ್ಯಾಸವಾಗಿಸಿ ಕೊಂಡ ನನ್ನನ್ನು ಅಮ್ಮ ಜಂಕಿಸಿ , ‘ದೊಂಡೆ ಬಿಚ್ಚಬ್ಯಾಡ. ಆಚೆ ಮನಿಗ್ ಕೇಳತ್ತ್ . ಮರಾಣಿ ಗಂಟ್ಲ ನಿಂದ್. ಸ್ವಲ್ಪ ನಿಧಾನ ಮಾತಾಡ್ಬಾರ್ದಾ’ಎಂದು ಬಾಯಿ ಮುಚ್ಚಿಸುತ್ತಿದ್ದರೆ, ನನ್ನಪ್ಪ , ‘ನನ್ನ ಮಗಳ ಸ್ವರ ಅಂದ್ರೆ ಜಾಗಟೆ….ಜಾಗಟೆ ಬಾರ್ಸಿದ ಹಾಂಗೆ’ ಎಂದು ಅಮ್ಮನ ಮಾತನ್ನು ಕತ್ತರಿಸಿ ಬಿಡುತ್ತಿದ್ದರು.
Related Articles
Advertisement
ದುಡಿದ್ದನ್ನೆಲ್ಲ ತಮ್ಮ ಕುಡಿತಕ್ಕೆ, ಶೋಕಿಗೆ ವ್ಯಯಿಸಿ, ಜವಾಬ್ದಾರಿಯನ್ನೇ ಮರೆತು ಭಂಡತನದಿಂದ ಬದುಕುವ ಗಂಡಸರ ನೆರಳಿನಲ್ಲಿ ಮನೆ ಮಕ್ಕಳ ಉದ್ಧಾರವನ್ನೇ ಏಕ ಮಾತ್ರ ಧ್ಯೇಯವಾಗಿಸಿಕೊಂಡು ಹಗಲಿರುಳು ದುಡಿಯುತ್ತಿರುವ ಹೆಂಗಸರನ್ನು ಕಂಡಾಗ ಯಜಮಾನ್ಯತೆಯ ಉರುಳಿನಲ್ಲಿ ಈ ಹೆಣ್ಣು ಮಕ್ಕಳು ಇನ್ನಷ್ಟು ಕಾಲ ತೆವಳಬೇಕು ಎಂಬು ಪ್ರಶ್ನೆ ಕಾಡುತ್ತದೆ. ಕುಟುಂಬದೊಳಗೆ ಅನುಭವಿಸುತ್ತಿರುವ ನೋವು, ಅವಮಾನಗಳನ್ನು ಶೋಷಣೆಯೆಂದು ತಿಳಿಯದೆ ಅದಕ್ಕೆ ಒಗ್ಗಿಕೊಳ್ಳುತ್ತಾ ಬದುಕು ಇರುವುದೇ ಹೀಗೆ ಎಂದು ಒಪ್ಪಿಕೊಂಡು ಸಾಗುತ್ತಿರುವ ಹೆಣ್ಣು ಮಕ್ಕಳ ದಂಡೇ ನಮ್ಮ ಮುಂದಿದೆ.
ದುಡಿದು ಹೈರಾಣಾಗುವ ಇಂತಹ ಹೆಣ್ಣು ಮಕ್ಕಳು ರಾತ್ರಿ ಸತ್ತು ನೆಲಕ್ಕಂಟಿ ಅಪ್ಪಚ್ಚಿಯಾದ ಗರಿಕೆ ಹುಲ್ಲು ಮತ್ತೆ ತಲೆಎತ್ತಿ ಚಿಗುರಿ ನಿಲ್ಲುವಂತೆ ಬೆಳಗಾಗಿ ಎದ್ದು ಬದುಕಿಗೆ ಒಡ್ಡಿಕೊಳ್ಳುವುದನ್ನು ಕಂಡಾಗ ಅಸಮಾನತೆಯ ಬುನಾದಿ ಮೇಲೆ ಕಟ್ಟಲಾದ ವ್ಯವಸ್ಥೆಯ ಬಗೆಗೆ ಹೇಸಿಗೆ ಎನಿಸುತ್ತದೆ. ನಮ್ಮ ಸುತ್ತ ಮುತ್ತ ಇರುವ ಇಂತಹ ಹೆಣ್ಣು ಮಕ್ಕಳ ಬದುಕನ್ನು ಸಾಕ್ಷಿಪ್ರಜ್ಞೆಯಿಂದ ನೋಡಿದರೆ ಒಬ್ಬೊಬ್ಬರಲ್ಲೂ ಒಂದೊಂದು ಕತೆ ಹುಟ್ಟಿಕೊಳ್ಳಬಹುದು.
ಮೊದಲಿನಿಂದಲೂ ಹೆಣ್ಣು ಶಾರೀರಿಕವಾಗಿ, ಮಾನಸಿಕವಾಗಿ ಹಲ್ಲೆಗೊಳಗಾಗುತ್ತಲೆ ಬಂದವಳು. ಇತ್ತೀಚಿಗಂತೂ ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಕಾಣೆಯಾಗಿದ್ದಾಳೆ, ಹೆಣವಾಗಿ ಸಿಕ್ಕಿದ್ದಾಳೆ, ಮಾರ್ಯಾದೆ ಹತ್ಯೆಗೊಳಗಾಗಿದ್ದಾಳೆ, ಅತ್ಯಾಚಾರಕ್ಕೀಡಾಗಿದ್ದಾಳೆ, ಇಂತಹ ಎದೆಯೊಡೆಯುವ ಸುದ್ದಿಗಳೇ ರಾರಾಜಿಸುತ್ತಿರುತ್ತವೆ. ಇದು ಎಲ್ಲೋ ದೂರದ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಲ್ಲ. ನಮ್ಮ ಕರಾವಳಿ ಕರ್ನಾಟಕದಲ್ಲೇ ಮತ್ತೆ ಮತ್ತೆ ಕೇಳಿ ಬರುವ ಸುದ್ದಿಗಳು.
ಇವತ್ತು ಹೆಣ್ಣು ಮಕ್ಕಳು ಜನಿಸುವುದೆಂದರೆ ಅವರಿಗೆ ಶಿಕ್ಷಣ ನೀಡುವುದು, ಮದುವೆ ಮಾಡುವುದು ಹೆತ್ತವರಿಗೆ ಸಮಸ್ಯೆಯಲ್ಲ. ಅವರನ್ನು ಪೋಷಿಸಿಕೊಂಡು ಹೋಗುವುದೇ ಸವಾಲೆನಿಸಿ ಬಿಟ್ಟಿದೆ. ಹದಿಹರೆಯದ ವಯಸ್ಸಿನಲ್ಲಿ ಮಾತ್ರವಲ್ಲ, ಪುಟ್ಟ ಹೆಣ್ಣು ಮಕ್ಕಳನ್ನು ಕೂಡ ಅವರ ಪಾಡಿಗೆ ಅವರನ್ನು ಶಾಲೆಗೆ ಕಳುಹಿಸುವುದಾಗಲಿ, ಆಟವಾಡಿಕೊಂಡು ಬಾ ಎನ್ನುವುದಾಗಲಿ ಸಾಧ್ಯವಾಗದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೆಣ್ಣು ಮಕ್ಕಳನ್ನು ಸಲಹುದೆಂದರೆ ಉಡಿಯಲ್ಲಿ ಕೆಂಡದಂತೆ, ಸ್ವಲ್ಪ ಎಚ್ಚರ ತಪ್ಪಿದರೂ ಭಾರಿ ಬೆಲೆ ತೆರಬೇಕಾದಂತಹ ಪರಿಸ್ಥಿತಿ. ಅಲ್ಲದೆ ಮಕ್ಕಳ ಮನಸ್ಥಿತಿ ರೂಪುಗೊಳ್ಳುವಲ್ಲೂ ಕುಟುಂಬದೊಂದಿಗೆ ನಮ್ಮ ಸುತ್ತಮುತ್ತಲಿನ ಸಮಾಜ ಪ್ರಭಾವ ಕೂಡ ಸಮ ಪ್ರಮಾಣದಲ್ಲಿರುತ್ತದೆ. ಟಿವಿ ಸಿನಿಮಾ ಜಾಹಿರಾತುಗಳನ್ನು ನೋಡಿ ಅದನ್ನೇ ಆಧುನಿಕ ಜೀವನ ಕ್ರಮವೆಂದು ಭಾವಿಸಿ ಮೈಮರೆತು ನಡೆಯುವವರನ್ನು ಕಂಡರೆ ದಿಗಿಲಾಗುತ್ತದೆ.
ಮೇಲಿನ ಒಂದೊಂದು ಘಟನೆಗಳನ್ನು ಕುರಿತು ಯೋಚಿಸುವಾಗ ಮತ್ತೆ ಮತ್ತೆ ನನಗೆ ನನ್ನ ಬಾಲ್ಯದ ದಿನಮಾನಗಳು ನೆನಪಾಗುತ್ತವೆ. ಹಾಲಕ್ಕಿ ಎನ್ನುವ ಒಂದು ಪುಟ್ಟ ಊರಿನಲ್ಲಿ ಅಭಯಾರಣ್ಯದ ನಡುವೆ ಮನೆ ಮಾಡಿಕೊಂಡಿದ್ದ ನಾವು ಪ್ರತಿ ದಿನ ಕಾಡು ಹಾದಿಯಲ್ಲಿಯೇ ಶಾಲೆ ಕಾಲೇಜಿಗೆ ಹೋಗಬೇಕಾಗಿತ್ತು. ಅಂತಹ ಆ ದಿನಗಳಲ್ಲಿ ಹಗಲು ಹೊತ್ತಲ್ಲಿ ಕಾಡುಕೋಣ, ಹಂದಿ ಮುಂತಾದ ಪ್ರಾಣಿಗಳು ದಾರಿಗೆ ಇದಿರಾಗಿ ಬಂದಾಗ ಹೆದರಿ ನಾವು ಮರಳಿ ಓಡಿ ಬಂದ ಸಂದರ್ಭ ನೂರಾರು. ಅಂತಹ ದಿನಗಳಲ್ಲಿ ನಮಗೆ ಇದ್ದ ಭಯವೊಂದೆ, ಅದು ಕಾಡು ಪ್ರಾಣಿಗಳದ್ದು ಮಾತ್ರ. ಮುನುಷ್ಯರ ಭಯ ಯಾವತ್ತೂ ನಮ್ಮನ್ನು ಕಾಡಿರಲಿಲ್ಲ. ದೌರ್ಜನ್ಯ, ಅತ್ಯಾಚಾರ ಇಂತಹ ಪದಗಳನ್ನು ಕೇಳಿಯೇ ಇರಲಿಲ್ಲ. ಹದಿಹರೆಯದ ಹೆಣ್ಣು ಮಕ್ಕಳನ್ನು ಕಾಡು ದಾರಿಯಲ್ಲಿ ಕಳುಹಿಸುತ್ತಿದ್ದೆವೆಂಬ ಭಯ ಯಾವತ್ತೂ ನಮ್ಮ ಅಪ್ಪ ಅಮ್ಮನನ್ನು ಕಾಡಿರಲಿಲ್ಲ. ಸುರಕ್ಷತೆಯಿಂದ ನಮ್ಮ ಮಕ್ಕಳು ಬಂದೇ ಬರುತ್ತಾರೆಂಬ ವಿಶ್ವಾಸ ಅವರಲ್ಲಿತ್ತು. ಅದು ಲೋಕದ ಬಗ್ಗೆ ಅವರಿಟ್ಟ ನಂಬಿಕೆಯೂ ಹೌದು. ಹಾಗಾದರೆ ಇವತ್ತು ಪ್ರಪಂಚ ಹೀಗೇಕಾಗಿದೆ ? ಅದಕ್ಕೆ ಹೊಣೆ ಯಾರು ? ಈ ಕುರಿತು ಆತ್ಮಾವಲೋಕನ ಮಾಡಿಕೊಕೊಳ್ಳಬೇಕಾಗಿದೆ. ಮಹಿಳಾ ದಿನಾಚರಣೆಯನ್ನೆವುದು ಮಹಿಳಾ ಸಾಧನೆಗಳನ್ನು ಬಣ್ಣಿಸುವುದು ಸಾಧಕರನ್ನು ಗುರುತಿಸುವ ಕೆಲಸಕ್ಕಷ್ಟೆ ಸೀಮಿತಗೊಳ್ಳದೆ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿ.
ರೇಖಾ ವಿ.ಬನ್ನಾಡಿ
ಪ್ರಾಧ್ಯಾಪಕರು, ಭಂಡಾರ್ ಕಾರ್ಸ್ ಕಾಲೇಜು, ಕುಂದಾಪುರ