ಬಾಗಲಕೋಟೆ: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಅಬಲೆಯಲ್ಲ ಸಬಲೆಯೆಂಬ ಮಾತು ಪ್ರಚಲಿತವಾಗಿದ್ದು, ಸಂಸಾರ ತೂಗಿಸುವಲ್ಲಿ ಮಹಿಳೆಯ ತ್ಯಾಗ ಅವಿಸ್ಮರಣೀಯವಾದುದು ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಂದು ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಷ್ಟೇ ಕಷ್ಟ ಬಂದರೂ ಎದುರಿಸುವ ಶಕ್ತಿ ಮಹಿಳೆಯರಲ್ಲಿದ್ದು, ಇಂದು ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿರದೇ ವಿವಿಧ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಹಿಳೆಯರು ತಾವು ಬೆಳೆಯುವ ಮೂಲಕ ಇತರರಿಗೆ ಸ್ಫೂರ್ತಿಯಾಗುವ ನಿಟ್ಟಿನಲ್ಲಿ ಕೆಲಸಮಾಡಬೇಕು. ಸರಕಾರ ಮಹಿಳೆ ಪುರುಷರೆನ್ನದೇ ಸಮಾನ ಅವಕಾಶ ಕಲ್ಪಿಸಿದ್ದು, ಮಹಿಳಾ ಸಬಲೀಕರಣಕ್ಕೆ ಸಾಕಷ್ಟುಯೋಜನೆಗಳನ್ನು ರೂಪಿಸಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ, ಮಹಿಳೆ ಅಸಹಾಯಕಿ ಅಲ್ಲ, ಸಬಲೆಯಾಗಿದ್ದು, ಅವರಿಗೆ ನೀಡಿರುವ ಸಮಾನತೆ, ಸೌಲಭ್ಯಗಳನ್ನು ಪಡೆದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಸುಧಾಮೂರ್ತಿ, ಸಾಲುಮರದ ತಿಮ್ಮಕ್ಕ ಹಾಗೂ ಗಂಗೂಬಾಯಿ ಹಾನಗಲ್ಲರಂತಹ ಮಹಿಳೆಯರು ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಶಿಕ್ಷಣ ಮತ್ತು ಪ್ರೋತ್ಸಾಹ ದೊರೆತಲ್ಲಿ ಹೆಚ್ಚಿನ ಸಾಧನೆಗೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಬುಡಾದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ ಮಾತನಾಡಿದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ, ಜಿಪಂ ಸದಸ್ಯೆ ಶಶಿಕಲಾ ಯಡಹಳ್ಳಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎ.ಕೆ.ಬಸಣ್ಣವರ ಸ್ವಾಗತಿಸಿದರು. ಜಿಪಂಉಪಾಧ್ಯಕ್ಷ ಮುತ್ತಪ್ಪ ಕೋಮಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಸಹಾಯಕ ನಿರ್ದೇಶಕಿ ಎನ್.ಹೇಮಾವತಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಗೌರಮ್ಮ ಸಂಕಿನ ಉಪಸ್ಥಿತರಿದ್ದರು.