ಪ್ರೊಡಕ್ಷನ್ ಮ್ಯಾನೇಜರ್ ಗಂಗಾಧರ್ ಅಲಿಯಾಸ್ ಗಂಗು, ಬಹಳ ದಿನಗಳಿಂದ ಒಂದು ಚಿತ್ರ ಮಾಡಬೇಕು ಅಂತ ಹೇಳುತ್ತಲೇ ಇದ್ದರಂತೆ. ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು ಇತ್ತೀಚೆಗೆ. “ವುಮೆನ್ಸ್ ಡೇ’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿರುವ ಅವರು, ಸದ್ಯದಲ್ಲೇ ಅದನ್ನು ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ. ಈ ಮಧ್ಯೆ ಜನಕ್ಕೆ ಚಿತ್ರದ ಬಗ್ಗೆ ಗೊತ್ತಿರಲಿ ಎಂದು ಚಿತ್ರದ ಪ್ರೋಮೋಗಳನ್ನು ಬಿಡುಗಡೆ ಮಾಡಲಾಯಿತು.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಈ ಸಮಾರಂಭಕ್ಕೆ ಪ್ರೋಮೋ ಬಿಡುಗಡೆ ಮಾಡುವುದಕ್ಕೆ ನಟಿ ರಾಗಿಣಿ, ನಿರ್ಮಾಪಕರಾದ ಪತ್ತಿಕೊಂಡ ಕುಮಾರಸ್ವಾಮಿ, ಆರ್.ಎಸ್. ಗೌಡ ಮುಂತಾದವರು ಬಂದಿದ್ದರು.ಆರ್.ಎಸ್. ಗೌಡ ನಿರ್ಮಾಣದ ಎಂಟು ಚಿತ್ರಗಳಿಗೆ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರಂತೆ ಗಂಗು. ಆರು ತಿಂಗಳ ಹಿಂದೆ ಕಥೆ ಹೇಳಿದರಂತೆ. ಗೌಡರು ಕಥೆ ಕೇಳಿ, ಚೆನ್ನಾಗಿದೆ ಎಂದು ಹೇಳುತ್ತಲೇ, ಚಿತ್ರ ಮಾಡಿ ಮುಗಿಸಿದ್ದಾರೆ.
ಈ ಚಿತ್ರದಿಂದ ದೊಡ್ಡ ಭಡ್ತಿ ಸಿಕ್ಕಿ, ಗಂಗು ದೊಡ್ಡ ನಿರ್ಮಾಪಕರಾಗಲಿ ಎಂದು ಆರ್.ಎಸ್. ಗೌಡ ಹಾರೈಸಿದರು. ಇನ್ನು ಗಂಗು ನಿರ್ಮಾಪಕರಾಗಿದ್ದು ರಾಗಿಣಿಗೆ ಬಹಳ ಖುಷಿಯಾಯಿತಂತೆ. ಈ ಸಿನಿಮಾ ಆದ ಮೇಲೆ, ಇನ್ನೂ ಸಿನಿಮಾ ಮಾಡಲಿ ಮತ್ತು ನಮ್ಮ ಜೊತೆಗೂ ಮಾಡಲಿ ಎಂದರು ರಾಗಿಣಿ. ಪತ್ತಿಕೊಂಡ ಕುಮಾರಸ್ವಾಮಿ ಸಹ ಅದೇ ಹೇಳಿದರು. “ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ನಿರ್ಮಾಣ ಮಾಡುವ ಹಂತಕ್ಕೆ ಬೆಳೆದಿದ್ದು ಖುಷಿಯ ವಿಷಯ’ ಎಂದರು.
ಈ ಚಿತ್ರವನ್ನು ಈಶ್ವರ್ ಬಾಳೇಗುಂದಿ ನಿರ್ದೇಶಿಸಿದ್ದಾರೆ. ಈ ಹಿಂದೆ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ಅವರು, ಈಗ ಈಶ ಎಂಬ ಹೆಸರಿನಲ್ಲಿ ಚಿತ್ರ ಮಾಡಿದ್ದಾರೆ. ಚಿತ್ರಕ್ಕೆ ಕೌಶಿಕ್ ಹರ್ಷ ಅವರ ಸಂಗೀತ ಸಂಯೋಜನೆ ಮತ್ತು ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣವಿದೆ. ಸಾಯಿಕುಮಾರ್, ತಿಮ್ಮೇಗೌಡ, ಜೊತೆಗೆ ನಾಲ್ವರು ಹೊಸ ಹುಡುಗಿಯರು ಸಹ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.