Advertisement

ಮಹಿಳಾ ದಿನ: ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಲು ಕರೆ

03:01 PM Mar 10, 2017 | Team Udayavani |

ಮಡಿಕೇರಿ: ಮಹಿಳೆಯರು ವರದಕ್ಷಿಣೆಯ ವಿರುದ್ಧ ಸಿಡಿದೇ ಳುವ ಅನಿವಾರ್ಯತೆಯಿದ್ದು, ಈ ಸಾಮಾಜಿಕ ಪಿಡುಗನ್ನು ದೂರ ಮಾಡಲು ಮಹಿಳೆಯರ ಒಗ್ಗಟ್ಟಿನ ಶ್ರಮ, ಹೋರಾಟದ ಅಗತ್ಯವಿದೆ ಎಂದು ರಾಜ್ಯ ಬಿಜೆಪಿ ಸದಸ್ಯೆ ರೀನಾ ಪ್ರಕಾಶ್‌ ತಿಳಿಸಿದ್ದಾರೆ.

Advertisement

ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ವರದಕ್ಷಿಣೆ ಮಹಿಳೆಯರಿಗೆ ಶಾಪವಾಗಿದ್ದು, ಇದರ ವಿರುದ್ದ ಧ್ವನಿ ಎತ್ತಿ ವರದಕ್ಷಿಣೆ ಆಚರಣೆಯನ್ನು ತೊಡೆದು ಹಾಕಬೇಕು. ಪ್ರತಿಯೊಬ್ಬ ಮಹಿಳೆಯಲ್ಲಿಯೂ ಜೀವನದ ಕಲೆ ಅಡಗಿದ್ದು, ದೇಶ ಕಟ್ಟುವಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದೆ ಎಂದರು. ಪುರುಷ ಸಮಾಜದಲ್ಲಿ ಮಹಿಳೆಯರು ತಮ್ಮತನವನ್ನು ಉಳಿಸಿಕೊಂಡಿದ್ದು, ಆಟೋ ಚಾಲನೆಯಿಂದ ವಿಮಾನ ಚಾಲನೆಯವರೆಗೂ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾಳೆ. ರಾಮಾಯಣದ ಶಬರಿಯಿಂದ ಇಂದಿನ ಸಾಲು ಮರದ ತಿಮ್ಮಕ್ಕ ಮಹಿಳೆಯರಿಗೆ ಆದರ್ಶ ವ್ಯಕ್ತಿ. ಸಾವಿರಾರು ಮರಗಳನ್ನು ನೆಡುವ ಮೂಲಕ ಸಮಾಜಕ್ಕೆ ನೆರಳನ್ನು ನೀಡಿದ ತಿಮ್ಮಕ್ಕನ ಆದರ್ಶ ಸೇವೆ ಪ್ರತಿಯೊಬ್ಬ ಮಹಿಳೆಯರಲ್ಲೂ ಮೂಡಬೇಕು  ಎಂದರು. 

ಮನೆಯ ನಾಲ್ಕು ಗೋಡೆಯ ವಸ್ತುಗಳಾಗದೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರಾಬಲ್ಯ ಎತ್ತಿಹಿಡಿಯಬೇಕು. ಉಪ್ಪಿನಕಾಯಿ, ಜೇನು, ಮಸಾಲೆ ಪದಾರ್ಥಗಳಂತಹ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ ಮಹಿಳೆಯ ಸಾಧನೆಗಳು ದಾರಿ ದೀಪವಾಗಬೇಕು. ತಮ್ಮ ಪ್ರತಿಭೆ ಮತ್ತು ಶಕ್ತಿಯನ್ನು ಸಮಾಜದ ಉದ್ಧಾರಕ್ಕೆ ವಿನಿಯೋಗಿಸಬೇಕು ಎಂದು ರೀನಾಪ್ರಕಾಶ್‌  ಹೇಳಿದರು.

ಕಾವೇರಿ ನದಿ ಕಲುಷಿತಗೊಂಡಿದೆ. ಪ್ರತಿಯೊಬ್ಬ ಮಹಿಳೆಯೂ ಕುಡಿಯುವ ಕಾವೇರಿಯ ನೀರನ್ನು ಶುದ್ಧಿಯಾಗಿ ಇಡಲು ಕಾಳಜಿ ಹೊಂದಿರಬೇಕು. ಕಾವೇರಿ ನದಿಗೆ ತಮ್ಮ ಬಚ್ಚಲಿನ ನೀರು, ತ್ಯಾಜ್ಯ ನೀರುಗಳನ್ನು ಬಿಡದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಕಾವೇರಿ ಹುಟ್ಟುವ ಭಾಗಮಂಡಲದಲ್ಲಿ 300ಕ್ಕೂ ಹೆಚ್ಚು ಮನೆಗಳ ಶೌಚಾಲಯಗಳ ನೀರು ಕಾವೇರಿ ಒಡಲು ಸೇರುತ್ತಿದೆ. ಈ ನೀರನ್ನೆ ನಾವು ಕುಡಿಯಲು ಬಳಸುತ್ತಿದ್ದೇವೆ. ಮಹಿಳೆಯರು ಮನಸ್ಸು ಮಾಡಿದರೆ ಕಾವೇರಿಯ ಶುದ್ಧೀಕರಣ ಸಾಧ್ಯ. ನೀರನ್ನು ಹಿತವಾಗಿ, ಮಿತವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷರಾದ ಚೇಂದಂಡ ಸುಮಿ ಸುಬ್ಬಯ್ಯ, ದೇಶದ ಭವಿಷ್ಯ ರೂಪಿಸಲು ತಮ್ಮ ಮಕ್ಕಳಿಗೆ ಉತ್ತಮ ನಡತೆಯನ್ನು ತಿಳಿ ಹೇಳಲು ತಾಯಿಯ ಪಾತ್ರ ಮುಖ್ಯ. ತಮ್ಮಲ್ಲಿನ ಅಹಂ ಬಿಟ್ಟು ಮುಂದಿನ ಪೀಳಿಗೆಗೆ ದಾರಿ ದೀಪವಾಗಬೇಕು ಎಂದರು. ಮಹಿಳೆಯರ ಸಾಮರ್ಥ್ಯ ಅಗಾಧವಾದದ್ದು, ಪ್ರಪಂಚವನ್ನೇ ಆಳುವ ಶಕ್ತಿ ಹೊಂದಿ ದ್ದಾಳೆ ಎಂದರು.

Advertisement

ಪುರುಷ ಸಮಾಜದಲ್ಲಿ ಶೋಷಿತರಾಗುವ ಮಹಿಳೆಯರು ತಮ್ಮ ಶಕ್ತಿಯ ಮೂಲಕ ದೇಶದಲ್ಲಿ ಗುರುತಿಸಿಕೊಳ್ಳಬೇಕು. ಪುರುಷ ಹಾಗೂ ಮಹಿಳೆಯ ಸಮಾಜದ ಒಂದು ನಾಣ್ಯದ ಎರಡು ಮುಖಗಳು. ಮಹಿಳೆಯರು ಹೆಚ್ಚು ವಿದ್ಯಾವಂತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು. ಮಹಿಳೆಯರಲ್ಲಿ ಅಗಾಧವಾದ ಶಕ್ತಿ ಅಡಗಿದೆ. ವಿಭಿನ್ನ ಪಾತ್ರಗಳಲ್ಲಿ ಆಕೆಯ ಪ್ರಾಬಲ್ಯ ಹೆಚ್ಚು. ತಾಯಿಯಾಗಿ, ಹೆಂಡತಿಯಾಗಿ, ಅಕ್ಕತಂಗಿಯಾಗಿ ವಿವಿಧ ಜವಾಬ್ದಾರಿಯನ್ನು ನಿಭಾಯಿಸುವ ತಾಳ್ಮೆಯ ಮೂರ್ತಿಯಾಗಿದ್ದಾಳೆ. ಸಮಾಜ ಸೇವೆಯಲ್ಲಿಯೂ ತನ್ನನ್ನು ತೊಡಗಿಸಿಕೊಂಡ ಮಹಿಳೆ ಪುರುಷ ಸಮಾಜದಲ್ಲಿ ಪ್ರಾಬಲ್ಯತೆಯನ್ನು ಹೊಂದಿದ್ದಾಳೆ ಎಂದು ಚೇಂದಂಡ ಸುಮಿ ಸುಬ್ಬಯ್ಯ  ಹೇಳಿದರು. 

ಮಹಿಳೆಯರಿಗಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಉಪಾಧ್ಯಕ್ಷರಾದ ನೂರೇರಾ ರತಿ ಅಚ್ಚಪ್ಪ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ, ಕೋಶಾಧಿಕಾರಿ ರೀನಾ ರಾಜೀವ್‌ ಹಾಗೂ ಸಮಾಜದ ಸದಸ್ಯರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next