Advertisement

ಹುಬ್ಬಳಿಯಲ್ಲಿ ನಡೀತು ಮಹಿಳಾ ಕ್ರಿಕೆಟ್‌ ಹಬ್ಬ

12:40 PM Dec 16, 2017 | Team Udayavani |

ಕ್ರಿಕೆಟ್‌ ಪಂದ್ಯಗಳು ಮಹಾನಗರಗಳಲ್ಲಿ ಮಾತ್ರ ನಡೆಯುತ್ತವೆ ಎಂಬ ಹ  ಳೆಯ ನಂಬಿಕೆಯನ್ನು ಬದಿಗಿಟ್ಟು, ಹುಬ್ಬಳ್ಳಿಯಂತಥ ನಗರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯ ನಡೆಸಲಾಯಿತು. ಇಂತಹ ನಿರ್ಧಾರಗಳು ಎಂದೆಂದೂ ಸ್ವಾಗತಾರ್ಹ. 

Advertisement

ಮಹಿಳಾ ಕ್ರಿಕೆಟ್‌ಗೂ ಆದ್ಯತೆ ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಭಾರತೀಯ “ಎ’ ತಂಡ ಹಾಗೂ ಬಾಂಗ್ಲಾದೇಶ “ಎ’ ತಂಡದ ಮಧ್ಯೆ ಏಕದಿನ ಸರಣಿ ನಡೆಸಲಾಯಿತು. ಹಲವು ವರ್ಷಗಳ ನಂತರ ರಾಷ್ಟ್ರೀಯ ಮಹಿಳಾ “ಎ’ ತಂಡಗಳ ಮಧ್ಯೆ ಸರಣಿ ನಡೆದಿದೆ. ಕೇವಲ ದೊಡ್ಡ ನಗರಗಳಲ್ಲಿ ಮಹಿಳಾ ಕ್ರಿಕೆಟ್‌ ಆಯೋಜಿಸುವ ಬದಲಿಗೆ ಸಣ್ಣ ನಗರಗಳಲ್ಲಿ ಸರಣಿ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ.

ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳಾ ಕ್ರಿಕೆಟ್‌ ಪ್ರೋತ್ಸಾಹಿಸುವ ದಿಸೆಯಲ್ಲಿ ಹುಬ್ಬಳ್ಳಿಯಲ್ಲಿ ಮಹಿಳಾ ತಂಡಗಳ ಸರಣಿ ಆಯೋಜಿಸಿದ್ದು ಪೂರಕ. 2018ರ ಜನವರಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ಮಧ್ಯೆ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲಿರುವ ಹಿನ್ನೆಲೆಯಲ್ಲಿ, ತಂಡಕ್ಕೆ ಸೇರ್ಪಡೆಗೊಳ್ಳಬೇಕೆಂಬ ಅಭಿಲಾಷೆಯಿಂದ ಆಟಗಾರ್ತಿಯರು ಆಕ್ರಮಣಕಾರಿಯಾಗಿ ಆಡಲೆತ್ನಿಸಿದರು.

ಇಲ್ಲಿ ಆಯೋಜಿಸಲ್ಪಟ್ಟ ಏಕದಿನ ಸರಣಿ ಆಯ್ಕೆ ಟ್ರಯಲ್ಸ್‌ನಂತಿತ್ತು. ಟೀಮ್‌ ಇಂಡಿಯಾ ಆಯ್ಕೆಗಾರರು ಸರಣಿ ವೀಕ್ಷಿಸಲು ಬಂದಿದ್ದರಿಂದ ತಂಡದಿಂದ ಹೊರಗುಳಿದ ಹಾಗೂ ತಂಡಕ್ಕೆ ಪದಾರ್ಪಣೆ ಮಾಡಲು ಸಿದ್ಧರಾಗಿರುವ ಯುವತಿಯರಿಗೆ ತಮ್ಮ ಪ್ರತಿಭೆ ತೋರಲು ಈ ಪಂದ್ಯಾವಳಿ ಅವಕಾಶ ಒದಗಿಸಿತು. 2014ರಿಂದ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫ‌ಲರಾಗಿರುವ ಕರ್ನಾಟಕದ ವಿ.ಆರ್‌.ವನಿತಾ ಎರಡು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಎರಡು ಪಂದ್ಯಗಳಲ್ಲಿ ಉತ್ತಮ ಮೊತ್ತ ದಾಖಲಿಸಿದರು. 

ಮುಂಬೈನ 19 ವಯೋಮಿತಿ ತಂಡದ ನಾಯಕಿ ಜೆಮಿಮಾ ರಾಡ್ರಿಗ್ಸ್‌ ರಾಷ್ಟ್ರೀಯ ಏಕದಿನಕ್ಕೆ ಪದಾರ್ಪಣೆ ಮಾಡುವ ಬಯಕೆಯಿಂದ ಆಡಿದರು. ಕೊನೆಯ ಪಂದ್ಯದಲ್ಲಿ ಜೆಮಿಮಾ  56 ರನ್‌ ದಾಖಲಿಸಿ ಅಜೇಯರಾಗುಳಿದು ಗಮನ ಸೆಳೆದರು. ಏಕದಿನ ಸರಣಿಯನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಿದರೆ ಬೆಳಗಾವಿಯಲ್ಲಿ ನಿರ್ಮಿಸಿದ ನೂತನ ಕ್ರೀಡಾಂಗಣದಲ್ಲಿ ಟಿ20 ಸರಣಿ ನಡೆಸಲಾಗುತ್ತಿದೆ. 

Advertisement

ನಿರೀಕ್ಷೆಯಂತೆ ಭಾರತದ ಆಟಗಾರ್ತಿಯರು ಸರಣಿಯಲ್ಲಿ ಪಾರಮ್ಯ ಮೆರೆದರು. ಸರಣಿಯನ್ನು 3-0 ಅಂತರದಿಂದ ತಮ್ಮದಾಗಿಸಿಕೊಂಡರು. ಟೀಮ್‌ ಇಂಡಿಯಾ ನಾಯಕಿ ಅನುಜಾ ಪಾಟೀಲ ಸರಣಿಗೆ ಮುನ್ನವೇ 3-0ಯಿಂದ ಸರಣಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ನೆಚ್ಚಿಕೊಂಡ ಅನುಭವಿಗಳು ಹಾಗೂ ಕಿರಿಯರ ಸಂಯೋಜನೆಯ ತಂಡ ನಾಯಕಿಯ ಭರವಸೆಯನ್ನು ಹುಸಿಗೊಳಿಸಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಪೈಪೋಟಿ ನೀಡಿದ ಬಾಂಗ್ಲಾದೇಶ, ಕೊನೆಯ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿತು. 

ಜಹಾರಾ ಆಲಮ್‌ ನಾಯಕತ್ವದ ಬಾಂಗ್ಲಾದೇಶದ ಬ್ಯಾಟ್ಸ್‌ವುಮನ್‌ಗಳಾದ ಲತಾ ಮೊಂಡಲ್‌ ಮೊದಲ ಪಂದ್ಯದಲ್ಲಿ (45ರನ್‌), ದ್ವಿತೀಯ ಪಂದ್ಯದಲ್ಲಿ (71ರನ್‌) ದಾಖಲಿಸಿದರೆ, ದ್ವಿತೀಯ ಏಕದಿನ ಪಂದ್ಯದಲ್ಲಿ ರುಹಾನಾ ಅಹ್ಮದ್‌ (65ರನ್‌) ಮಿಂಚಿದರು. ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಂಖ್ಯೆ ಅತಿ ಕಡಿಮೆಯಿತ್ತು. ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರನ್ನು ಕರೆಸಬೇಕಾಗಿತ್ತು. 

ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡುವ ದಿಸೆಯಲ್ಲಿ ಭಾರತ “ಎ’ ಹಾಗೂ ಬಾಂಗ್ಲಾದೇಶ “ಎ’ ತಂಡಗಳ ಮಧ್ಯೆ ಏಕದಿನ ಸರಣಿ ಆಯೋಜಿಸಲಾಯಿತು. ಇದು ಈ ಭಾಗದಲ್ಲಿ ಮಹಿಳಾ ಕ್ರಿಕೆಟ್‌ ಬೆಳೆಯಲು ಪೂರಕವಾಗಲಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗರು ನಮ್ಮ ಊರಿನ ಕ್ರೀಡಾಂಗಣದಲ್ಲಿ ಆಡಿದ್ದು ನಮಗೆ ಖುಷಿ ತಂದಿದೆ. ಆಟಗಾರ್ತಿಯರು ಕ್ರೀಡಾಂಗಣವನ್ನು ಮೆಚ್ಚಿಕೊಂಡರು.
-ಬಾಬಾ ಭೂಸದ, ಕೆಎಸ್‌ಸಿಎ ಧಾರವಾಡ ವಲಯದ ಕನ್ವೇನರ್‌ 

* ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next