ರಾಯಚೂರು: ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಹಾಗೂ ಶೇ.40 ಕಮಿಷನ್ ದಂಧೆಯಲ್ಲಿ ತೊಡಗಿದ ಬಿಜೆಪಿ ನೇತೃತ್ವದ ರಾಜ್ಯಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಧರಣಿ ನಡೆಸಲಾಯಿತು.
ನಗರದ ಡಾ|ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿ ಸದಸ್ಯರು ಗ್ಯಾಸ್ ಸಿಲಿಂಡರ್ ಹಾಗೂ ಅಡುಗೆ ಒಲೆ ಇರಿಸಿ ಪೂಜೆ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಹೋರಾಟ ನಡೆಸಿದರು. ಬೆಲೆ ಏರಿಕೆ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಸರ್ಕಾರ ಶೇ.40 ಕಮಿಶನ್ ಆಧಾರದ ಮೇಲೆಯೇ ನಡೆಯುತ್ತಿದೆ. ಕಮಿಷನ್ ದಂದೆಯಲ್ಲಿ ಸಿಲುಕಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕು. ಬೇರೆ ಸಚಿವರು ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿರುವ ಎಲ್ಲ ಇಲಾಖೆಗಳಲ್ಲಿ ಕಮಿಷನ್ ದಂಧೆ ಹೆಚ್ಚಾಗಿ ಗುಣಮಟ್ಟ ಕಾಮಗಾರಿಗಳು ನಡೆಯದೇ, ಸಾರ್ವಜನಿಕರ ತೆರಿಗೆ ಹಣ ಬಿಜೆಪಿ ನಾಯಕ ಖಜಾನೆ ಸೇರುತ್ತಿದೆ ಎಂದು ದೂರಿದರು.
ಅಡುಗೆ ಅನಿಲ ಬೆಲೆ ದಿನೇ ದಿನೇ ಏರಿಕೆಯಿಂದ ಬಡ ಜನರಿಗೆ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ. ತೈಲ ಬೆಲೆ ಏರಿಕೆ ಪರಿಣಾಮ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದ್ದು ಜನರ ಬದುಕು ದುಸ್ತರಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯವನ್ನು ಕಮಿಷನ್ ಮುಕ್ತಗೊಳಿಸಲು ಭ್ರಷ್ಟ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು, ಅಡುಗೆ ಅನಿಲ ಬೆಲೆ ಏರಿಕೆ ಕಡಿಮೆಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ, ನಿರ್ಮಾಲಾ ಬೆಣ್ಣೆ, ಶಶಿಕಲಾ ಭೀಮರಾಯ, ಸೇರಿದಂತೆ ಪಕ್ಷದ ಕಾರ್ಯಕರ್ತೆಯರು ಇದ್ದರು.