Advertisement
ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ, ನ್ಯಾಯ ಕಂಡುಕೊಳ್ಳುವ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರವೀಗ ಸೂರಿನ ನಿರೀಕ್ಷೆಯಲ್ಲಿ ಕಾಯುತ್ತಿದೆ.
Related Articles
Advertisement
ಪುತ್ತೂರು ಮಿನಿ ವಿಧಾನಸೌಧದ ಬಳಿಯ ನಗರಸಭೆಯ ಹಳೆಯ ಕಟ್ಟಡದ ಸನಿಹದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಾಂತ್ವನ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸುವಂತೆ ನಗರಸಭೆ ಸೂಚಿಸಿತ್ತು. ನಗರ ಸಭೆಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸ ಗಳಿಗೆ ಆ ಜಾಗ ಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ತಿಳಿಸಿದೆ. ಆದರೆ ಆ ಕಟ್ಟಡ ನೆಲಸಮ ಮಾಡದೆ ಹಾಗೆಯೇ ಇದ್ದು, ಸುತ್ತಲೂ ಪೊದೆಗಳು ಬೆಳೆದು ಕಟ್ಟಡ ಶಿಥಿಲಗೊಳ್ಳುತ್ತಿದೆ. ಸದ್ಯಕ್ಕೆ ಮಹಿಳಾ ಸಾಂತ್ವನ ಕೇಂದ್ರವು ತಾ.ಪಂ. ಸಾಮರ್ಥ್ಯ ಸೌಧಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿದೆ.
ಮಹಿಳಾ ಸಾಂತ್ವನಕ್ಕೆ ಸಂಬಂಧಿಸಿದ ಚಟುವಟಿಕೆಗಳು ಗೌಪ್ಯ ನೆಲೆಯಲ್ಲಿ ಕಾರ್ಯನಿರ್ವಹಿಸಬೇಕಾಗಿರುವುದರಿಂದ ಈಗ ಇರುವ ಸ್ಥಳ ಪ್ರಕ್ರಿಯೆಗಳಿಗೆ ಅಷ್ಟು ಸೂಕ್ತವಾದದ್ದು ಅಲ್ಲ. ಮಹಿಳೆಗೆ ತೊಂದರೆಯಾದ ಸಂದರ್ಭದಲ್ಲಿ ಕೌನ್ಸೆಲಿಂಗ್, ವಿಚಾರಣೆ ಸೇರಿದಂತೆ ನಾಲ್ಕು ಗೋಡೆಗಳ ಮಧ್ಯೆ ಪ್ರಕ್ರಿಯೆಗಳನ್ನು ನಡೆಸಬೇಕಾಗಿರುವುದರಿಂದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಪ್ರತ್ಯೇಕ ಕಚೇರಿಯ ಅನಿವಾರ್ಯ ಇದೆ.
ಜನ ದಟ್ಟಣೆಯಿಂದ ದೂರ ಇರುವ ಸ್ಥಳವಾಗಿದ್ದರೆ ಕಾರ್ಯ ನಿರ್ವಹಣೆಗೆ ಹೆಚ್ಚು ಅನುಕೂಲ. ಜನಶಿಕ್ಷಣ ಟ್ರಸ್ಟ್ ಮೂಲಕ ನಡೆಯುತ್ತಿರುವುದರಿಂದ ಸರಕಾರದ ದೊಡ್ಡ ಮೊತ್ತದ ಅನುದಾನ ಸಿಗುತ್ತಿಲ್ಲ. ಅಲ್ಪ ಅನುದಾನದಲ್ಲಿ ಪ್ರತ್ಯೇಕ ಜಾಗ, ಕಟ್ಟಡ ನಿರ್ಮಾಣ ಸಾಧ್ಯವಿಲ್ಲ. ಸದ್ಯ ಸರಕಾರದ ಅನುದಾನ ನಿರ್ವಹಣೆ, ಸಿಬಂದಿ ವೇತನಕ್ಕೆ ಮಾತ್ರ ಸಾಧ್ಯವಾಗುತ್ತಿದೆ. ಈ ಕಾರಣದಿಂದ ಶಾಸಕ, ಸಂಸದರ ಮೂಲಕ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಲಭಿಸಬೇಕಿದೆ.
ಸಹಕಾರ ಅಗತ್ಯ: ಸಾಂತ್ವನ ಕೇಂದ್ರ ಸಮುದಾಯಕ್ಕೆ ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ, ಸ್ವಂತ ಕಟ್ಟಡಕ್ಕಾಗಿ ಜನ ಪ್ರತಿನಿಧಿಗಳು, ಸಮಾಜದ ದಾನಿಗಳು ಸಹಕಾರ ನೀಡುವ ಅಗತ್ಯವಿದೆ. –ಕೃಷ್ಣ ಮೂಲ್ಯ, ನಿರ್ದೇಶಕರು, ಜನಶಿಕ್ಷಣ ಟ್ರಸ್ಟ್.
ಪ್ರತ್ಯೇಕ ಕಟ್ಟಡ ಅಗತ್ಯ: ಮಹಿಳಾ ಸಾಂತ್ವನ ಕೇಂದ್ರದ ಮೂಲಕ ಸುಮಾರು 1,800 ಪ್ರಕ ರಣ ಗಳು ಇತ್ಯರ್ಥಗೊಂಡಿವೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಎದುರಿಸುತ್ತಿರುವ ತೊಂದರೆಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿ ಸರಿ ಪಡಿಸುವ ಕೆಲಸ ಆಗಿದೆ. ಪ್ರತ್ಯೇಕ ಕಟ್ಟಡವಿದ್ದರೆ ಕೇಂದ್ರದ ಚಟುವಟಿಕೆಗಳಿಗೆ ಅನುಕೂಲ. –ನಿಶಾ ಪ್ರಿಯ, ಸಾಂತ್ವನ ಕೇಂದ್ರದ ಮೇಲ್ವಿಚಾರಕರು.
-ಕಿರಣ್ ಪ್ರಸಾದ್ ಕುಂಡಡ್ಕ