Advertisement

ಮಹಿಳಾ ಸಾಂತ್ವನ ಕೇಂದ್ರಕ್ಕೆ ಬೇಕಿದೆ ನೆರವಿನ ಸಾಂತ್ವನ

01:00 AM Feb 19, 2019 | Harsha Rao |

ಉಡುಪಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಉಡುಪಿ ಕೋರ್ಟ್‌ ಸಮೀಪ ಕಾರ್ಯಾಚರಿಸುತ್ತಿರುವ ಮಹಿಳಾ ಸಾಂತ್ವನ ಕೇಂದ್ರ ಸೂಕ್ತ ಕಟ್ಟಡವಿಲ್ಲದೆ ಸೊರಗುತ್ತಿದೆ. 2002ರಲ್ಲಿ ಈ ಕೇಂದ್ರ ಆರಂಭಗೊಂಡಿದ್ದು, 24 ಗಂಟೆಗಳ ಕಾಲ ಬಿಡುವಿಲ್ಲದೆ ಕಾರ್ಯಾಚರಿಸುತ್ತಿದೆ. ಇಲ್ಲಿ 4 ಮಂದಿ ಸಿಬಂದಿ ಇದ್ದು, ರಾತ್ರಿ ಹೊತ್ತು ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. 

Advertisement

ನೂತನ ಕಟ್ಟಡದ ನಿರೀಕ್ಷೆ
ಪ್ರಸ್ತುತ ಈ ಜಾಗ ಬಾಡಿಗೆ ಕಟ್ಟಡದಲ್ಲಿದ್ದು, ಎನ್‌ಜಿಒ ಸಂಸ್ಥೆಯೊಂದು ಇದರ ನಿರ್ವಹಣೆ ನೋಡಿಕೊಳ್ಳುತ್ತಿದೆ. ನೂತನ ಕಟ್ಟಡ ಬೇಕೆಂಬ ಪ್ರಸ್ತಾವನೆ ಈ ಹಿಂದೆಯೇ ಸಲ್ಲಿಸಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಎನ್‌ಜಿಒ ಸಂಸ್ಥೆಗೆ ನಿವೇಶನ ನೀಡುವಂತಿಲ್ಲ ಎಂಬ ನಿಯಮದಿಂದ ಈ ಪ್ರಸ್ತಾವನೆ ತಿರಸ್ಕತಗೊಂಡಿದೆ. ಆದರೂ ಸೂಕ್ತ ಜಾಗದ ನಿರೀಕ್ಷೆಯನ್ನು ಇಲಾಖೆ ಮಾಡುತ್ತಿದೆ. 

5 ತಿಂಗಳಿನಿಂದ ವೇತನವಿಲ್ಲ!
ಇಲ್ಲಿ ಕಾರ್ಯಾಚರಿಸುತ್ತಿರುವ ಸಿಬಂದಿಗೆ ಕಳೆದ 5 ತಿಂಗಳಿನಿಂದ ವೇತನವನ್ನೇ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೊಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ಸಿಬಂದಿ. ಕಳೆದ ಒಂದು ವರ್ಷದಿಂದಲೂ ವೇತನ ವಿಳಂಬ ಸಮಸ್ಯೆಯನ್ನು ಇವರು ಎದುರಿಸುತ್ತಿದ್ದಾರೆ. 

1,675 ಪ್ರಕರಣಗಳು ಇತ್ಯರ್ಥ 
2002ರಿಂದ ಪ್ರಾರಂಭವಾದ ಸಾಂತ್ವನ ಕೇಂದ್ರದಲ್ಲಿ ಈವರೆಗೆ 1,794 ಪ್ರಕರಣಗಳು ದಾಖಲಾಗಿದ್ದು, 1,675 ಪ್ರಕರಣಗಳು ಇತ್ಯರ್ಥವಾಗಿವೆ. 119 ಪ್ರಕರಣಗಳು ವಿಚಾರಣೆ ಹಂತದಲ್ಲಿದೆ.  

ನಿವೇಶನ ಪ್ರಸ್ತಾವನೆ ತಿರಸ್ಕಾರ
 ಕೇಂದ್ರಕ್ಕೆ ಸ್ವಂತ ನಿವೇಶನ ಒದಗಿಸುವಂತೆ ಮನವಿ ಮಾಡಲಾಗಿದೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿ ಎನ್‌ಜಿಒಗೆ ನಿವೇಶನ ನೀಡುವಂತಿಲ್ಲ ಎಂಬ ನಿಯಮದಿಂದ ಪ್ರಸ್ತಾವನೆ ತಿರಸ್ಕರಿಸಲಾಗಿದೆ. 
-ವಸಂತಿ ರಾವ್‌ ಕೊರಡ್ಕಲ್‌,  ಕಾರ್ಯದರ್ಶಿ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ

Advertisement

ಪರಿಶೀಲಿಸಿ ಕ್ರಮ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಂಬಂಧಪಟ್ಟ ಎನ್‌ಜಿಒ ಸಂಸ್ಥೆಗೆ ವೇತನದ ಹಣ ವರ್ಗಾವಣೆ ಆಗಿದೆ. ತಾಂತ್ರಿಕ ಕಾರಣಗಳಿಂದ ಸಂಸ್ಥೆ ವಿಳಂಬ ಮಾಡುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು.
-ಗ್ರೇಸಿ ಗೋನ್ಸಾಲ್ವಿಸ್‌,  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ

ಪುರುಷ ಸಾಂತ್ವನ ಕೇಂದ್ರಕ್ಕೆ ಬೇಡಿಕೆ
ಮಾನಸಿಕವಾಗಿ ಜರ್ಝರಿತವಾಗಿರುವ ಪುರುಷರಿಗೆ ಕುಟುಂಬ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಕಾನೂನು ಸಲಹೆ ನೀಡಲು ಪುರುಷ ಸಾಂತ್ವನ ಕೇಂದ್ರದ ಆವಶ್ಯಕತೆಯೂ ಜಿಲ್ಲೆಯಲ್ಲಿದೆ. ಇದಕ್ಕೆ ಕಾರಣ ಇಲ್ಲಿಗೆ ಬರುವ ಪುರುಷರ ಸಂಖ್ಯೆ. ತಿಂಗಳಿಗೆ ಸುಮಾರು 30 ರಿಂದ 45ರ ವಯೋಮಾನದ ಶೇ. 40ರಷ್ಟು ಪುರುಷರು ಇಲ್ಲಿಗೆ ಸಾಂತ್ವನ ಕೇಳಲು ಬರುತ್ತಿದ್ದಾರೆ. ಇಂತಹವರಿಗೂ ನೆರವು ನೀಡುವುದು ಅನಿವಾರ್ಯ ಎಂಬಂತಹ ಸ್ಥಿತಿ ಮಹಿಳಾ ಸಾಂತ್ವನ ಕೇಂದ್ರದ್ದಾಗಿದೆ.

ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶ
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ 2001ರಲ್ಲಿ  ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರಿಗೆ ಕಾನೂನು ಸಲಹೆ, ರಕ್ಷಣೆ ನೀಡುವುದರ ಜತೆಗೆ ಸ್ವ ಉದ್ಯೋಗಕ್ಕೆ ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ.

– ಪುನೀತ್‌ ಸಾಲ್ಯಾನ್‌ 

Advertisement

Udayavani is now on Telegram. Click here to join our channel and stay updated with the latest news.

Next