ರಾಯಚೂರು: ಮಹಿಳೆಯರ ಭಯ ಮುಕ್ತ ಕರ್ನಾಟಕ ಅಭಿಯಾನದಡಿ ನಾಲ್ಕು ಮಹಿಳೆಯರು ಬೈಕ್‌ನಲ್ಲೇ ರಾಜ್ಯ ಪ್ರವಾಸ ಕೈಗೊಂಡಿದ್ದು, ಸೋಮವಾರ ರಾತ್ರಿ ಬೈಕ್ ಸವಾರರ ತಂಡ ನಗರಕ್ಕೆ ಆಗಮಿಸಿತ್ತು.
ಅಭಿಯಾನ ಹಮ್ಮಿಕೊಂಡಿದ್ದು, ಅಂಬೇಡ್ಕರ್ ವೃತ್ತದಿಂದ ಬಸವ ಕೇಂದ್ರದವರೆಗೆ ಬೈಕ್ ರೈಡ್ ಮೂಲಕ ಜಾಗೃತಿ ಮೂಡಿಸಲಾಯಿತು. ನಾನು ಮಧ್ಯರಾತ್ರಿಯಲ್ಲಿ ಭಯವಿಲ್ಲದೇ ನಡೆಯಬಲ್ಲೆ ಎಂಬ ಘೋಷವಾಕ್ಯದಡಿ ನಾಲ್ವರು ಮಹಿಳೆಯರು ಬೈಕ್‌ಗಳನ್ನು ತೆಗೆದುಕೊಂಡು ರಾಜ್ಯ ಸಂಚಾರ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯಾದ್ಯಂತ ಸುಮಾರು 3,500 ಕಿ.ಮೀ. ದೂರ ಕ್ರಮಿಸುವ ಗುರಿ ಹೊಂದಿದ್ದು, ಜಿಲ್ಲೆಗೂ ತಂಡ ಆಗಮಿಸಿತ್ತು. ಬೈಕ್ ಸವಾರ ಮಹಿಳೆಯರನ್ನು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು.
30 ದಿನಗಳಲ್ಲಿ 30 ಜಿಲ್ಲೆಗಳಿಗೆ ಮೆಗಾ ರೈಡ್ ನಡೆಸಲಾಗುತ್ತಿದೆ. ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸಲು ರಾಜ ಲಕ್ಷ್ಮೀ, ಕೀರ್ತಿನಿ, ಸ್ವಾತಿ ಆರ್ ಮತ್ತು ಅನಿತಾ ಗ್ರಾಮೀಣ ಮಹಿಳೆಯರನ್ನು ಭೇಟಿ ಮಾಡಿ ಮಹಿಳೆಯರ ಸುರಕ್ಷತೆ, ಅವರ ಸಮಸ್ಯೆಗಳು ಮತ್ತು ಆತ್ಮರಕ್ಷಣೆಯ ಪ್ರಾಮುಖ್ಯತೆ ಕುರಿತು ಚರ್ಚಿಸಲಾಗುತ್ತಿದೆ.
ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗುಲ್ಬರ್ಗ, ಬೀದರ, ಯಾದಗಿರಿ ಜಿಲ್ಲೆ ಮುಗಿಸಿಕೊಂಡು ರಾಯಚೂರಿಗೂ ಆಗಮಿಸಿದ್ದರು.
ರೋಟರಿ ಕ್ಲಬ್, ರೋಟರಿ ಸೆಂಟ್ರಲ್, ರೋಟರಿ ಈಸ್ಟ್, ರೋಟರಿ ಕಾಟನ್ ಸಿಟಿ, ಹಾಗೂ ಇನ್ನರವೀಲ್ ಕ್ಲಬ್ ರಾಯಚೂರು ಸಹಯೋಗದಲ್ಲಿ ಕಾರ್ಯಕ್ರಮ ಕೈಗೊಂಡಿದ್ದರು. ಇನ್ನರ್ ವ್ಹೀಲ್ ಜಿಲ್ಲಾ ಖಜಾಂಚಿ ಸುಷ್ಮಾ ಪತಂಗೆ, ಪಿಡಿಸಿ ಇಂದಿರಾ ಕಲ್ಯಾಣಕರ, ಮಹಾದೇವಿ ಹೊಸಮನಿ, ರೇಖಾ ಕೇಶವರೆಡ್ಡಿ, ಕವಿತಾ, ಶ್ರೀದೇವಿ, ಸೌಮ್ಯ, ರೂಪಾ ಧೋತರಬಂಡಿ, ಕವಿತಾ ಕಾಂಬ್ಳೆ, ಡಾ| ನಾಗವೇಣಿ, ನಗರಸಭೆ ಸದಸ್ಯೆ ರತ್ನ ಪ್ರಶಾಂತಿ, ಮಾಲನಾ, ರಂಗಲಿಂಗನ ಗೌಡ, ವಿಜಯ ಕುಮಾರ್ ಸಜ್ಜನ್ ಇದ್ದರು.