Advertisement

ಮಹಿಳಾ ದೌರ್ಜನ್ಯ ತಡೆಗಟ್ಟದಿದ್ರೆ ಅಪಾಯ ನಿಶ್ಚಿತ: ಮುರುಘಾಶರಣರು

12:14 PM Jul 06, 2017 | Team Udayavani |

ಚಿತ್ರದುರ್ಗ: ಜೀವನದಲ್ಲಿ ಮತ್ತೂಬ್ಬರಿಗೆ ನೋವು, ದುಃಖ, ಕಿರುಕುಳ ನೀಡಬಾರದು. ಸಾಂಸಾರಿಕ ಜೀವನದಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯಗಳಾಗಬಾರದು. ಅದು ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಮುರುಘಾಮಠದಲ್ಲಿ ಎಸ್‌ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ಬುಧವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶರಣರು ಆಶೀರ್ವಚನ ನೀಡಿದರು. ಉತ್ತರಪ್ರದೇಶದ ನೀರಂಕಲ್‌ ಎಂಬ ಊರಲ್ಲಿ ಇತ್ತೀಚೆಗೆ ನಡೆದ ಘಟನೆ ಇದು. 6 ವರ್ಷದ ಮಾನ್ವಿ ತನ್ನ ಅಜ್ಜನೊಂದಿಗೆ ಪೊಲೀಸ್‌ ಠಾಣೆಗೆ ತೆರಳಿ ತನ್ನ ತಾಯಿಯ ಮೇಲೆ ತಂದೆಯ ಕಡೆಯವರು ಕಿರುಕುಳ ನೀಡುತ್ತಿರುವ ಹೃದಯವಿದ್ರಾವಕ ಘಟನೆಯನ್ನು
ವಿವರಿಸಿ ದೂರು ದಾಖಲಿಸುತ್ತಾಳೆ. ಆ ಮಗುವಿನ ತಾಯಿ ಕಿರುಕುಳದಿಂದ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ಮಗುವಿನ ಪ್ರೀತಿ-ವಾತ್ಸಲ್ಯ ಮತ್ತು ಧೈರ್ಯ ಮೆಚ್ಚುವಂಥದ್ದು. ತಾಳಿ ಜಜ್ಜುವುದು, ಉಜ್ಜುವುದು ನಡೆಯುತ್ತಿದೆ. ಇದು ಮೂಢನಂಬಿಕೆಯ ಪರಮಾವ. ಆದ್ದರಿಂದ ಮೂಢನಂಬಿಕೆಯ ಜೀವನ ನಿಮ್ಮದಾಗಬಾರದು. ಮನೆಗೆ ಬರುವ
ಸೊಸೆಯಂದಿರನ್ನು ಒಡಹುಟ್ಟಿದ ಮಗಳಂತೆ ನೋಡಿಕೊಳ್ಳಬೇಕು ಎಂದರು. 

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶ್ರೀಮಠ ನಿರಂತರವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವ ಮಾಡುತ್ತಾ ಬಂದಿರುವುದು ನಾಡಿನಲ್ಲಿ ಒಂದು ದೊಡ್ಡ ಇತಿಹಾಸ. ಬಸವ ತತ್ವವನ್ನು ಚಾಚೂ ತಪ್ಪದೇ ಪಾಲಿಸುತ್ತಿರುವವರೆಂದರೆ ಶಿವಮೂರ್ತಿ ಮುರುಘಾ ಶರಣರು. ಶರಣರು ತಾವು ಕೈಗೊಳ್ಳುವ ಸಂಕಲ್ಪಗಳಿಗೆ 
ಯಾವುದೇ ಚ್ಯುತಿ ಬರದಂತೆ ನೋಡಿಕೊಂಡು ಬಂದಿದ್ದಾರೆ. ಈ ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿರುವ ನವವಧು-ವರರು ಯಾವುದೇ  ದುಶ್ಚಟಕ್ಕೊಳಗೊಳಗಾಗದೆ ಉತ್ತಮ ಜೀವನನಡೆಸಬೇಕು ಎಂದು ಆಶಿಸಿದರು.

ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಯಾವುದೇ ಸಮಸ್ಯೆಗಳಿಗೆ ಆಸ್ಪದ ಕೊಡದಂತೆ ಶ್ರೀಮಠ ಸಾಮೂಹಿಕ ವಿವಾಹ ನಡೆಸಿಕೊಂಡು ಬರುತ್ತಿದೆ. ಅಸಾಮಾನ್ಯ, ಅತ್ಯದ್ಭುತ ಹೀಗೆ ಯಾವ ಪದ ಬಳಸಿದರೂ ಈ ರೀತಿಯ ವಿವಾಹ ಮಹೋತ್ಸವಗಳಿಗೆ ಸಾಟಿಯಿಲ್ಲ. ಮುರುಘಾ ಶರಣರು ಸದಾ ಸಾಮಾಜಿಕ ಮತ್ತು ಧಾರ್ಮಿಕ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಬಣ್ಣಿಸಿದರು.

ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ| ಕೆ.ಎನ್‌. ಚಂದ್ರಶೇಖರ್‌ ಮಾತನಾಡಿ, ಪ್ರತಿತಿಂಗಳು ಸಾಮೂಹಿಕ ಕಲ್ಯಾಣ ಮಹೋತ್ಸವ ಮಾಡುತ್ತ ವಿಧವೆ-ವಿಧುರ, ಅಂತರ್ಜಾತಿ ಮತ್ತು ಸರ್ವಧರ್ಮ ಸಮನ್ವಯ ವಿವಾಹಗಳನ್ನು ಮಾಡುತ್ತಿರುವ ಶ್ರೀಮಠದಲ್ಲಿ ಸ್ವರ್ಗವನ್ನೇ ಕಾಣಬಹುದು. ಕಡಿಮೆ ಖರ್ಚಿನೊಂದಿಗೆ ಬರದ ನಾಡಿನಲ್ಲಿ ವಿವಾಹ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

Advertisement

ಮಹಾರಾಷ್ಟ್ರ ವರ್ತಕರ ಸಂಘದ ಅಧ್ಯಕ್ಷ ಅಮರದೀಪ ಮಹಾರುದ್ರ ಪಟೇಲ್‌ ಮಾತನಾಡಿದರು. ಪ್ರಸನ್ನಕುಮಾರ್‌,ಕಾರ್ಯಕ್ರಮದ ದಾಸೋಹಿ ವೀರೇಶ್‌, ವೆಂಕಟಾಚಲ ಇದ್ದರು. ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ನಿಪ್ಪಾಣಿಯ ಮುರುಘೇಂದ್ರ 
ವಿರಕ್ತಮಠದ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಹೊಳಲ್ಕೆರೆ ಒಂಟಿಕಂಬ ಮುರುಘಾಮಠದ ಶ್ರೀ ಬಸವ ಪ್ರಜ್ಞಾನಂದ ಸ್ವಾಮೀಜಿ, ನಾಯಕನಹಟ್ಟಿಯ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಮುರುಘಾಮಠದ ಕಾರ್ಯದರ್ಶಿ ಮೃತ್ಯುಂಜಯ ಲಕಮನಹಳ್ಳಿ, ಸಿದ್ದರಾಮಣ್ಣ ನಡಕಟ್ಟಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ಮುಖಂಡ ಮಹಮ್ಮದ್‌ ಪಾಷಾ, ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಪಾಲ್ಗೊಂಡಿದ್ದರು.

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ  ಆದಿಕರ್ನಾಟಕ-8, ನಾಯಕ-4, ಕುರುಬ-4, ಲಿಂಗಾಯತ-2, ಅಂತರ್ಜಾತಿ-2, ಭೋವಿ-1, ನೇಕಾರ-1, ಆದಿದ್ರಾವಿಡ-1 ಸೇರಿದಂತೆ ಒಟ್ಟು 26 ಜೋಡಿಗಳು ದಾಂಪತ್ಯ ಜೀವನಕ್ಕೆ
ಕಾಲಿರಿಸಿದರು. ಆಷಾಢ ಮಾಸದಲ್ಲಿ ವಿವಾಹವಾದ ನವಜೋಡಿಗಳಿಗೆ ಮುರುಘಾಮಠದಿಂದ ಉಚಿತ ತಾಳಿ ಹಾಗೂ ಬಟ್ಟೆಗಳನ್ನು ವಿತರಿಸಲಾಯಿತು. ಎಐಸಿಸಿ ಕಾರ್ಯದರ್ಶಿ ಮಧು ಯಶ್ಕಿಗೌಡ ಮತ್ತು ಮಠಾಧೀಶರು ವಧುವರರಿಗೆ ಪ್ರಸಾದ ಬಡಿಸಿದರು. 

ರಾಜ್ಯ ಸರ್ಕಾರ ಯುವ ಸಮೂಹ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡುತ್ತಿದೆ. ಉನ್ನತವಾದ ತರಬೇತಿ ನೀಡಲು ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಶ್ರೀಮಠದೊಂದಿಗೆ ಒಡಂಬಡಿಕೆ ಮಾಡಿಕೊಂಡು ಆಗಸ್ಟ್‌ ತಿಂಗಳಲ್ಲಿ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಚಿಂತನೆ ನಡೆದಿದೆ.
ಮುರಳೀಧರ ಹಾಲಪ್ಪ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next