ಕೌಲಾಲಂಪುರ: ವನಿತಾ ಟಿ20 ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬುಧವಾರ ಬಾಂಗ್ಲಾದೇಶಕ್ಕೆ ಶರಣಾಗಿದ್ದ ಭಾರತವೀಗ ಗೆಲುವಿನ ಹಳಿ ಏರುವಲ್ಲಿ ಯಶಸ್ವಿಯಾಗಿದೆ. ಗುರುವಾರದ ತನ್ನ 4ನೇ ಪಂದ್ಯದಲ್ಲಿ ಶ್ರೀಲಂಕಾವನ್ನು 7 ವಿಕೆಟ್‌ಗಳಿಂದ ಸೋಲಿಸಿ ಕೂಟದ 3ನೇ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 7 ವಿಕೆಟಿಗೆ ಕೇವಲ 107 ರನ್ ಗಳಿಸಿದರೆ, ಭಾರತ 18.5 ಓವರ್‌ಗಳಲ್ಲಿ 3 ವಿಕೆಟಿಗೆ 110 ರನ್ ಮಾಡಿ ಗೆದ್ದು ಬಂದಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿಯಿತು. ಭಾರತದಂತೆ ಪಾಕಿಸ್ಥಾನ, ಬಾಂಗ್ಲಾದೇಶ 3 ಜಯದೊಂದಿಗೆ 6 ಅಂಕ ಹೊಂದಿ ದ್ದರೂ ರನ್‌ರೇಟ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆಯೇ ಮುಂದಿದೆ. ಅತ್ಯಧಿಕ ಅಂಕ ಸಂಪಾದಿಸಿದ 2 ತಂಡಗಳು ಜೂ. 10ರ ಫೈನಲ್‌ನಲ್ಲಿ ಸೆಣಸಲಿವೆ. ಫೈನಲ್ ಪ್ರವೇಶಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಶನಿವಾರದ ಅಂತಿಮ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸುವುದು ಭಾರತಕ್ಕೆ ಅನಿವಾರ್ಯವಾಗಬಹುದು.
ಬಿಗಿ ಬೌಲಿಂಗ್, ಫೀಲ್ಡಿಂಗ್
ಭಾರತ ತನ್ನ ಸಾಂ ಕ ಬೌಲಿಂಗ್ ಹಾಗೂ ಬಿಗಿಯಾದ ಫೀಲ್ಡಿಂಗ್ ಮೂಲಕ ಶ್ರೀಲಂಕಾವನ್ನು ಕಟ್ಟಿಹಾಕಿತು. ಆರಂಭಿಕ ಆಟಗಾರ್ತಿ ಯಶೋದಾ ಮೆಂಡಿಸ್ (27) ಮತ್ತು 3ನೇ ಕ್ರಮಾಂಕದಲ್ಲಿ ಆಡಲಿಳಿದ ಹಾಸಿನಿ ಪೆರೆರ (46) ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಗಡಿ ಮುಟ್ಟಲಿಲ್ಲ. ಭಾರತದ ಪರ ಏಕ್ತಾ ಬಿಷ್ಟ್ 2 ವಿಕೆಟ್ ಕಿತ್ತರೆ, ಜೂಲನ್ ಗೋಸ್ವಾಮಿ, ಅನುಜಾ ಪಾಟೀಲ್ ಮತ್ತು ಪೂನಂ ಯಾದವ್ ಒಂದೊಂದು ವಿಕೆಟ್ ಉರುಳಿಸಿದರು. ಲಂಕೆಯ ಇಬ್ಬರು ಆಟಗಾರ್ತಿಯರು ರನೌಟಾದರು.
ಸಣ್ಣ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಭಾರತಕ್ಕೆ ಯಾವುದೇ ತೊಡಕಾಗಲಿಲ್ಲ. ಮಿಥಾಲಿ 23, ಸ್ಮತಿ ಮಂಧನಾ 12, ಹರ್ಮನ್‌ಪ್ರೀತ್ ಕೌರ್ 24, ವೇದಾ ಕೃಷ್ಣಮೂರ್ತಿ ಔಟಾಗದೆ 29 ಹಾಗೂ ಅನುಜಾ ಪಾಟೀಲ್ ಔಟಾಗದೆ 19 ರನ್ ಮಾಡಿದರು. ಆಲ್‌ರೌಂಡ್ ಪ್ರದರ್ಶನವಿತ್ತ ಅನುಜಾ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಮಿಥಾಲಿ 2 ಸಾವಿರ ರನ್
ಭಾರತದ ಖ್ಯಾತ ಆಟಗಾರ್ತಿ ಮಿಥಾಲಿ ರಾಜ್ ಟಿ20 ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ. ಏಶ್ಯ ಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಅವರು ಈ ದಾಖಲೆ ನಿರ್ಮಿಸಿದರು. ಇದರೊಂದಿಗೆ ಚುಟುಕು ಕ್ರಿಕೆಟ್‌ನಲ್ಲಿ 2 ಸಾವಿರ ರನ್ ಪೂರೈಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ವಿಶ್ವ ಮಟ್ಟದಲ್ಲಿ ಈ ಸಾಧನೆಗೈದ 7ನೇ ಆಟಗಾರ್ತಿ. ಇಂಗ್ಲೆಂಡ್‌ನ ಚಾರ್ಲೋಟ್ ಎಡ್ವರ್ಡ್ಸ್ (2,605 ರನ್) ಅಗ್ರಸ್ಥಾನದಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-20 ಓವರ್‌ಗಳಲ್ಲಿ 7 ವಿಕೆಟಿಗೆ 107 (ಹಾಸಿನಿ 46, ಯಶೋದಾ 27, ಏಕ್ತಾ 20ಕ್ಕೆ 2, ಅನುಜಾ 19ಕ್ಕೆ 1).
ಭಾರತ-18.5 ಓವರ್‌ಗಳಲ್ಲಿ 3 ವಿಕೆಟಿಗೆ 110 (ವೇದಾ ಔಟಾಗದೆ 29, ಹರ್ಮನ್‌ಪ್ರೀತ್ 24, ಮಿಥಾಲಿ 23, ನೀಲಾಕ್ಷಿ 12ಕ್ಕೆ 1, ಒಶಾದಿ 15ಕ್ಕೆ 1).
ಪಂದ್ಯಶ್ರೇಷ್ಠ: ಅನುಜಾ ಪಾಟೀಲ್.