ಡಂಬುಲಾ: ವನಿತಾ ಏಷ್ಯಾಕಪ್ 2024ರ ಕೂಟದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸುಲಭ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ವಿರುದ್ದ ನಡೆದ ಪಂದ್ಯದಲ್ಲಿ ಹರ್ಮನ್ ಬಳಗವು 10 ವಿಕೆಟ್ ಅಂತರದಿಂದ ಗೆದ್ದು ಫೈನಲ್ ಗೆ ಪ್ರವೇಶಿಸಿದೆ.
ರಣಗಿರಿ ಡಂಬುಲಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಭಾರತೀಯರ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ ಎಂಟು ವಿಕೆಟ್ ಕಳೆದುಕೊಂಡು ಕೇಲವ 80 ರನ್ ಮಾತ್ರ ಗಳಿಸಿತು. ಭಾರತ ತಂಡವು 11 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ಬಾಂಗ್ಲಾದೇಶ ವನಿತಾ ತಂಡವು ಬ್ಯಾಟಿಂಗ್ ನಲ್ಲಿ ಪರದಾಡಿತು. ನಾಯಕಿ ನಿಗರ್ ಸುಲ್ತಾನಾ 32 ರನ್ ಗಳಿಸಿದರೆ, ಶ್ರೋನಾ ಅಕ್ತರ್ ಅಜೇಯ 19 ರನ್ ಗಳಿಸಿದರು. ಉಳಿದ ಯಾರೂ ಎರಡಂಕಿ ಮೊತ್ತ ದಾಟಲಿಲ್ಲ.
ಭಾರತದ ಪರ ರೇಣುಕಾ ಸಿಂಗ್ ಮತ್ತು ರಾಧಾ ಯಾದವ್ ಅವರು ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಬಾಂಗ್ಲಾ ನೀಡಿದ 81 ರನ್ ಗುರಿ ಭಾರತಕ್ಕೆ ಯಾವುದೇ ಸಮಸ್ಯೆ ತಂದೊಡ್ಡಲಿಲ್ಲ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಅವರು ಸುಲಭವಾಗಿ ಗುರಿ ಬೆನ್ನತ್ತಿದರು. ಸ್ಮೃತಿ ಅಜೇಯ 55 ರನ್ ಗಳಿಸಿದರೆ, ಶಫಾಲಿ ಅಜೇಯ 26 ರನ್ ಮಾಡಿದರು.
ಇದರೊಂದಿಗೆ ಭಾರತ ಮತ್ತೊಮ್ಮೆ ಏಷ್ಯಾ ಕಪ್ ಫೈನಲ್ ಪ್ರವೇಶ ಪಡೆದಿದೆ. ಎರಡನೇ ಸೆಮಿ ಫೈನಲ್ ನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.