Advertisement

ಏಶ್ಯ ಕಪ್‌ ಮಹಿಳಾ ಹಾಕಿ: ಸಿಂಗಾಪುರ ವಿರುದ್ಧ ಭಾರತಕ್ಕೆ 10-0 ಜಯ

06:40 AM Oct 29, 2017 | Team Udayavani |

ಟೋಕಿಯೊ: ಭಾರತ ಮಹಿಳಾ ತಂಡ ಏಶ್ಯ ಕಪ್‌ ಹಾಕಿ ಕೂಟದಲ್ಲಿ ಸಿಂಗಾಪುರ ತಂಡವನ್ನು 10-0 ಗೋಲುಗಳ ಭಾರೀ ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿದೆ. ಶನಿವಾರ ನಡೆದ “ಎ’ ಗುಂಪಿನ ಪಂದ್ಯದಲ್ಲಿ ಭಾರತದ ಪರ ನವನೀತ್‌ ಕೌರ್‌ (3 ಮತ್ತು 41ನೇ ನಿಮಿಷ), ರಾಣಿ ರಾಮ್‌ಪಾಲ್‌ (15 ಮತ್ತು 18ನೇ ನಿಮಿಷ), ನವಜೋತ್‌ ಕೌರ್‌ (30 ಮತ್ತು 50ನೇ ನಿಮಿಷ) ತಲಾ ಎರಡು ಗೋಲು ಬಾರಿಸಿದರು. ಉಳಿದಂತೆ ಲಾಲ್ರೆಸಿಯಾಮಿ (18ನೇ ನಿಮಿಷ), ದೀಪ್‌ ಗ್ರಾಸ್‌ ಎಕ್ಕ (25ನೇ ನಿಮಿಷ), ಗುರ್ಜಿತ್‌ ಕೌರ್‌ (41ನೇ ನಿಮಿಷ), ಸೋನಿಕಾ (45ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಸಿಂಗಾಪುರ ಆಟಗಾರ್ತಿಯರಿಗೆ ಒಂದೂ ಗೋಲು ಹೊಡೆಯಲಾಗಲಿಲ್ಲ.

Advertisement

ಪಂದ್ಯದ ಆರಂಭದಿಂದಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರಿಂದಾಗಿ ಒಂದರ ಹಿಂದೆ ಒಂದು ಗೋಲುಗಳು ಸಿಡಿಯುತ್ತ ಹೋದವು. ಪಂದ್ಯದ 3ನೇ ನಿಮಿಷದಲ್ಲೇ ಭಾರತಕ್ಕೆ ಲಭಿಸಿದ ಮೊದಲ ಪೆನಾಲ್ಟಿಯನ್ನು ನವನೀತ್‌ ಕೌರ್‌ ಗೋಲಾಗಿಸಿದರು. ಇಲ್ಲಿಂದ ಭಾರತದಿಂದ ಗೋಲಿನ ಸುರಿಮಳೆ ಆರಂಭವಾಯಿತು. ಸಿಂಗಾಪುರ ಕಕ್ಕಾಬಿಕ್ಕಿಯಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ 2 ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. 2ನೇ ಕ್ವಾರ್ಟರ್‌ನಲ್ಲಿ 4 ಗೋಲು, 3ನೇ ಕ್ವಾರ್ಟರ್‌ನಲ್ಲಿ 3, ನಾಲ್ಕನೇ ಕ್ವಾರ್ಟರ್‌ನಲ್ಲಿ ಒಂದು ಗೋಲು ಬಾರಿಸಿತು.”ಎ’ ಗುಂಪಿನಲ್ಲಿರುವ ಭಾರತ ರವಿವಾರ ಚೀನವನ್ನು, ಅ. 31ರಂದು ಮಲೇಶ್ಯವನ್ನು ಎದುರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next