Advertisement

Women’s Asia Cup: ಭಾರತದ ಗುರಿ ಅಜೇಯ ಸೆಮಿಫೈನಲ್‌

11:39 PM Jul 22, 2024 | Team Udayavani |

ಡಂಬುಲ: ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ಸತತ 9ನೇ ಸೆಮಿಫೈನಲ್‌ ಕಾಣುವ ತವಕದಲ್ಲಿದೆ. ಎರಡೂ ಪಂದ್ಯಗಳನ್ನು ಗೆದ್ದು ಈಗಾಗಲೇ ಒಂದು ಕಾಲನ್ನು ಉಪಾಂತ್ಯದಲ್ಲಿರಿಸಿದೆ. ಮಂಗಳವಾರ ನೇಪಾಲ ವಿರುದ್ಧ ಕೊನೆಯ ಲೀಗ್‌ ಪಂದ್ಯವಾಡಲಿದ್ದು, ಇದನ್ನೂ ಗೆದ್ದರೆ ಹರ್ಮನ್‌ಪ್ರೀತ್‌ ಕೌರ್‌ ಬಳಗದ ಸೆಮಿಫೈನಲ್‌ ಅಧಿಕೃತಗೊಳ್ಳಲಿದೆ.

Advertisement

ಭಾರತ ಕಳೆದೆರಡೂ ಲೀಗ್‌ ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ ಹಾಗೂ ಯುಎಇಯನ್ನು 78 ರನ್ನುಗಳಿಂದ ಮಣಿಸುವಲ್ಲಿ ಯಶಸ್ವಿ ಯಾಗಿತ್ತು. ಅನನುಭವಿ ನೇಪಾಲ ತಂಡ ಭಾರತಕ್ಕೆ ಯಾವ ವಿಧದಲ್ಲೂ ಸವಾಲಾಗಲಿಕ್ಕಿಲ್ಲ ಎಂದು ನಂಬಬಹುದು.

ಬಿಂದು ಬರ್ಮ ನಾಯಕತ್ವದ ನೇಪಾಲ ಆರಂಭಿಕ ಪಂದ್ಯದಲ್ಲಿ ಯುಎಇಯನ್ನು 6 ವಿಕೆಟ್‌ಗಳಿಂದ ಮಣಿಸಿತ್ತು. ಆದರೆ ರವಿವಾರ ರಾತ್ರಿ ಪಾಕಿಸ್ಥಾನ ವಿರುದ್ಧ ನೇಪಾಲದ ಆಟ ನಡೆದಿರಲಿಲ್ಲ. ಅದು ಸ್ವಲ್ಪವೂ ಹೋರಾಟ ನೀಡದೆ ಶರಣಾಗಿತ್ತು.

ಜಬರ್ದಸ್ತ್ ಪ್ರದರ್ಶನ
ಭಾರತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಜಬರ್ದಸ್ತ್ ಪ್ರದರ್ಶನ ನೀಡಿದೆ. ಪಾಕ್‌ ವಿರುದ್ಧ ಶಫಾಲಿ ವರ್ಮ-ಸ್ಮತಿ ಮಂಧನಾ ಪ್ರಚಂಡ ಆರಂಭ ಒದಗಿಸಿದ್ದರು. ಯುಎಇ ವಿರುದ್ಧ ರಿಚಾ ಘೋಷ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಅಬ್ಬರದ ಬ್ಯಾಟಿಂಗ್‌ ನಡೆಸಿದ್ದರು. ಹೀಗಾಗಿ ಭಾರತ ಮೊದಲ ಸಲ 200 ರನ್‌ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ನೇಪಾಲ ವಿರುದ್ಧವೂ ಮೊದಲು ಬ್ಯಾಟಿಂಗ್‌ ನಡೆಸಿದರೆ ಭಾರತ ಇನ್ನೊಮ್ಮೆ ಬೃಹತ್‌ ಸ್ಕೋರ್‌ ದಾಖಲಿಸುವುದರಲ್ಲಿ ಅನುಮಾನವಿಲ್ಲ.

ಬೌಲಿಂಗ್‌ ವಿಭಾಗದಲ್ಲಿ ರೇಣುಕಾ ಸಿಂಗ್‌, ಪೂಜಾ ವಸ್ತ್ರಾಕರ್‌, ದೀಪ್ತಿ ಶರ್ಮ ರನ್‌ ನಿಯಂತ್ರಿಸುವ ಜತೆಗೆ ವಿಕೆಟ್‌ಗಳನ್ನೂ ಬೇಟೆ ಆಡುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್‌ ಸ್ಥಾನಕ್ಕೆ ಬಂದ ತನುಜಾ ಕನ್ವರ್‌ 4 ಓವರ್‌ಗಳಲ್ಲಿ ಕೇವಲ 14 ರನ್‌ ನೀಡಿ ಅತ್ಯಂತ ಮಿತವ್ಯಯಿಯಾಗಿದ್ದರು.
ಇಂಥ ಬಲಾಡ್ಯ ಭಾರತದ ವಿರುದ್ಧ ಹಿಮಾಲಯದ ತಪ್ಪಲಿನ ಪುಟ್ಟ ರಾಷ್ಟ್ರ ಬಲವಾದ ಅಗ್ನಿಪರೀಕ್ಷೆ ಎದುರಿಸುವುದರಲ್ಲಿ ಅನುಮಾನವಿಲ್ಲ.

Advertisement

ವನಿತಾ ಏಷ್ಯಾ ಕಪ್‌ ಇಂದಿನ ಪಂದ್ಯ
1. ಪಾಕಿಸ್ಥಾನ-ಯುಎಇ l ಸ್ಥಳ: ಡಂಬುಲ l ಆರಂಭ: ಅ. 2.00
2. ಭಾರತ-ನೇಪಾಲ l ಸ್ಥಳ: ಡಂಬುಲ ಆರಂಭ: ರಾತ್ರಿ 7.00 l ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next