Advertisement

Women’s Asia Cup 2024; ಭಾರತ ಅಜೇಯ ಆಟ; ಸೆಮಿಗೆ ಓಟ

10:58 PM Jul 23, 2024 | Team Udayavani |

ಡಂಬುಲ: ನಿರೀಕ್ಷೆಯಂತೆ ನೇಪಾಲವನ್ನು ಮಣಿಸಿದ ಭಾರತದ ವನಿತೆಯರು ಅಜೇಯವಾಗಿ ಏಷ್ಯಾ ಕಪ್‌ ಸೆಮಿಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಮಂಗಳವಾರದ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ 82 ರನ್ನುಗಳಿಂದ ನೇಪಾಲಕ್ಕೆ ಸೋಲುಣಿಸಿತು.

Advertisement

ಭಾರತ 3 ವಿಕೆಟಿಗೆ 178 ರನ್‌ ಗಳಿಸಿ ಸವಾಲೊಡ್ಡಿದರೆ, ನೇಪಾಲ 9 ವಿಕೆಟಿಗೆ 96 ರನ್‌ ಮಾಡಿತು. ಇದರೊಂದಿಗೆ ಭಾರತ “ಎ’ ಗ್ರೂಪ್‌ನ ಅಗ್ರಸ್ಥಾನಿಯಾಯಿತು. ದಿನದ ಮೊದಲ ಪಂದ್ಯವನ್ನು ಜಯಿಸಿದ್ದ ಪಾಕಿಸ್ಥಾನ ದ್ವಿತೀಯ ಸ್ಥಾನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತು. ಶುಕ್ರವಾರದ ಮೊದಲ ಸೆಮಿಫೈನಲ್‌ನಲ್ಲಿ ಭಾರತ “ಬಿ’ ವಿಭಾಗದ ದ್ವಿತೀಯ ಸ್ಥಾನಿಯನ್ನು ಎದುರಿಸಲಿದೆ.

122 ರನ್‌ ಜತೆಯಾಟ

ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಅಗ್ರ ಕ್ರಮಾಂಕದಲ್ಲಿ ಒಂದು ಪರಿವರ್ತನೆ ಮಾಡಿಕೊಂಡಿತು. ಸ್ಮತಿ ಮಂಧನಾ ಬದಲು ಡಿ. ಹೇಮಲತಾ ಇನ್ನಿಂಗ್ಸ್‌ ಆರಂಭಿಸಿದರು. ಇದು ಭರಪೂರ ಯಶಸ್ಸು ಕಂಡಿತು. ಶಫಾಲಿ ವರ್ಮ-ಹೇಮಲತಾ ಮೊದಲ ವಿಕೆಟಿಗೆ 14 ಓವರ್‌ಗಳಲ್ಲಿ 122 ರನ್‌ ಪೇರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ವೈಫ‌ಲ್ಯ ಅನುಭವಿಸುತ್ತಿದ್ದ ಹೇಮಲತಾ ಇಲ್ಲಿ 42 ಎಸೆತಗಳಿಂದ 47 ರನ್‌ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 5 ಫೋರ್‌ ಹಾಗೂ ಒಂದು ಸಿಕ್ಸರ್‌. ಇನ್ನೇನು ಅರ್ಧ ಶತಕಕ್ಕೆ ಮೂರೇ ರನ್‌ ಬೇಕಿರುವಾಗ ಸೀತಾ ರಾಣಾ ಎಸೆತದಲ್ಲಿ ಔಟಾದರು.

Advertisement

ಶಫಾಲಿ ವರ್ಮ ಎಂದಿನಂತೆ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ರಂಜಿಸಿದರು. ಇವರಿಗೆ ಶತಕದ ಸಾಧ್ಯತೆಯೊಂದು ತೆರೆಯಲ್ಪಟ್ಟಿತ್ತು. ಆದರೆ 80ರ ಗಡಿ ದಾಟಿದೊಡನೆ ಸೀತಾ ರಾಣಾ ಎಸೆತದಲ್ಲೇ ಸ್ಟಂಪ್ಡ್ ಆಗಿ ವಾಪಸಾಗಬೇಕಾಯಿತು. ಶಫಾಲಿ ಗಳಿಕೆ 48 ಎಸೆತಗಳಿಂದ 81 ರನ್‌. 12 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿ ಅಬ್ಬರಿಸಿದರು. ಜೆಮಿಮಾ ಔಟಾಗದೆ 28 ರನ್‌ ಮಾಡಿದರು (15 ಎಸೆತ, 5 ಬೌಂಡರಿ).

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಪೂಜಾ ವಸ್ತ್ರಾಕರ್‌ ವಿಶ್ರಾಂತಿ ಪಡೆದ ಕಾರಣ ಸ್ಮತಿ ಮಂಧನಾ ತಂಡವನ್ನು ಮುನ್ನಡೆಸಿದರು. ಆದರೆ ಅವರು ಬ್ಯಾಟಿಂಗ್‌ಗೆ ಬರಲಿಲ್ಲ.

ಚೇಸಿಂಗ್‌ ವೇಳೆ ನೇಪಾಲ ಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶಿಸಿತು. ಭಾರತದ ಬೌಲರ್‌ಗಳನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಭಾರತ-3 ವಿಕೆಟಿಗೆ 178 (ಶಫಾಲಿ 81, ಹೇಮಲತಾ 47, ಜೆಮಿಮಾ ಔಟಾಗದೆ 28, ಸೀತಾ ರಾಣಾ 25ಕ್ಕೆ 2). ನೇಪಾಲ-9 ವಿಕೆಟಿಗೆ 96 (ಸೀತಾ ರಾಣಾ 18, ಬಿಂದು ಔಟಾಗದೆ 17, ರುಬಿನಾ 15, ಇಂದು 14, ದೀಪ್ತಿ 13ಕ್ಕೆ 3, ರಾಧಾ 12ಕ್ಕೆ 2, ಅರುಂಧತಿ 28ಕ್ಕೆ 2). ಪಂದ್ಯಶ್ರೇಷ್ಠ: ಶಫಾಲಿ ವರ್ಮ.

Advertisement

Udayavani is now on Telegram. Click here to join our channel and stay updated with the latest news.

Next