ಚಿಕ್ಕಬಳ್ಳಾಪುರ: ಮಹಿಳೆಯರು ಇಂದು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರೆ ಕ್ಷೇತ್ರಗಳಗಳಲ್ಲಿ ಸಾಧನೆಯ ಮೈಲುಗಲ್ಲು ಸಾಧಿಸಿದ್ದಾರೆ. ಅಂತಹ ಮಹಿಳೆಯ ಸಾಧನೆಯ ಮತ್ತಷ್ಟು ಹಿರಿದಾಗಲಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್ ಕೋರಡ್ಡಿ ರವರು ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ಉದ್ಯಮಿಗಳು ಹಾಗೂ ಸ್ತ್ರೀ ಶಕ್ತಿ ಮಹಿಳಾ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿವಿದ್ಯಾವಂತರೆ ತಾಳ್ಮೆ ಕಳೆದುಕೊಂಡು ತಮ್ಮ ಕೌಟುಂಬಿಕ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಅರಿವಿನ ಕೊರತೆ ಮಹಿಳೆಯರಲ್ಲಿ ಹೆಚ್ಚಾಗಿರುವುದರಿಂದ ಪ್ರತಿ ಹಂತದಲ್ಲಿಯು ಮಹಿಳೆಯರು ಹೆಚ್ಚು ಶೋಷಣೆ, ದೌರ್ಜನ್ಯಕ್ಕೆ ಒಳಾಗುತ್ತಿದ್ದಾರೆ. ಆದ್ದರಿಂದ ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡಬೇಕು. ಶೋಷಣೆ, ದಬ್ಟಾಳಿಕೆ, ದೌರ್ಜನ್ಯ ಪ್ರಕರಣಗಳು ನಿಯಂತ್ರಣಕ್ಕೆ ಬರಬೇಕಾದರೆ ಸಮಾಜದಲ್ಲಿ ಪ್ರತಿಯೊಬ್ಬರು ತಮ್ಮ ಹಕ್ಕುಗಳ ಜೊತೆಗೆ ತಮ್ಮ ಪಾಲಿನ ಕರ್ತವ್ಯಗಳನ್ನು ಸಹ ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಮಾತನಾಡಿ, ಸೃಷ್ಟಿಯ ಶಕ್ತಿ ಹೆಣ್ಣು. ಮನೆಗೊಂದು ಹೆಣ್ಣು ಮಗು ಇದ್ದರೆ ಜೀವನದ ಪರಿಪೂರ್ಣತೆಯಾಗಲಿದೆ. ಒಂದಷ್ಟು ನೋವುಗಳು ನಮ್ಮಲ್ಲೂ ಈಗಲೂ ಜೀವಂತವಾಗಿದೆ. ಆದರೂ ಅವೆನ್ನೆಲ್ಲಾ ನಮ್ಮುಡಿಯಲ್ಲಿ ಹಾಕಿಕೊಂಡು ನಾವು ಯಾವುದೇ ಸವಾಲುಗಳಿಗೆ ಅಂಜದೆ ಮುನ್ನುಗುತ್ತಿದ್ದೇವೆ ಎಂದು ಹೇಳಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಎಚ್.ತಮ್ಮೇಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ 2018-19ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕೀಯರಿಗೆ ಸನ್ಮಾನ ಮಾಡಲಾಯಿತು. ಅಪರ ಜಿಲ್ಲಾಧಿಕಾರಿ ಆರತಿ ಆನಂದ್, 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಭಾನುಮತಿ, 2ನೇ ಅಪರ ಸಿವಿಲ್ ಹಿರಿಯ ನ್ಯಾಯಾಧೀಶರಾದ ತಯಾಬ ಸುಲ್ತಾನ್, 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ಶೈಲಾ, ಮಕ್ಕಳ ಕಲ್ಯಾಣ ಇಲಾಖೆ ಮೇರಿ ಚೆಲದುರೈ,
ನ್ಯೂಟ್ರಿಷನ್ ತಜ್ಞಾರಾದ ಮಂಜುಳಾ, ಮಹಿಳಾ ಪೊಲೀಸ್ ಇಲಾಖೆಯ ಸಬ್ ಇನ್‌ಪೆಕ್ಟರ್‌ಗಳಾದ ವರಲಕ್ಷಿ ಮತ್ತು ಕುಮಾರಿ, ಚಿಂತಾಮಣಿಯ ಸೀತಮ್ಮ, ಚಿಕ್ಕಬಳ್ಳಾಪುರದ ಚೌಡಮ್ಮ, ಶಿಢಘಟ್ಟದ ಮಾಣಿಕ್ಯಮ್ಮರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ಉಪ ನಿರ್ದೇಶಕಿ ಲಕ್ಷ್ಮೀದೇವಮ್ಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಉತ್ಪನ್ನಗಳ ಮಾರಾಟ, ಪ್ರದರ್ಶನ ಮೇಳ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಜಿಲ್ಲೆಯ ಸ್ತ್ರೀಶಕ್ತಿ ಸಂಘಗಳ ಮಹಿಳಾ ಸದಸ್ಯರು ಉತ್ಪಾದಿಸಿದ್ದ ವಿವಿಧ ಉತ್ಪನ್ನಗಳ ಮಾರಾಟ ಹಾಗು ಪ್ರದರ್ಶನವನ್ನು ಇದೇ ವೇಳೆ ಆಯೋಜಿಸಲಾಗಿತ್ತು. ಸರಿಧಾನ್ಯಗಳು. ಬೊಂಬೆಗಳು, ಕರಕುಶಲ ವಸ್ತುಗಳು, ಮಕ್ಕಳ ಆಟಿಕೆ ಸಾಮಾನುಗಳು, ಗೃಹಪಯೋಗಿ ವಸ್ತುಗಳು ಸೇರಿದಂತೆ ಮಹಿಳಾ ಸಂಘಗಳು ಉತ್ಪಾದಿಸಿದ್ದ ಆಕರ್ಷಕವಾದ ಉಡುಪುಗಳು, ಸೀರೆ ಮತ್ತಿತರ ವಸ್ತುಗಳನ್ನು ಮಾರಾಟಕ್ಕಾಗಿ ಮಳಿಗೆಗಳನ್ನು ತೆರೆಯಲಾಗಿತ್ತು. ಆದರೆ ಪ್ರಚಾರದ ಕೊರತೆಯಿಂದ ಮಳಿಗೆಗಳು ಜನರಿಲ್ಲದೇ ಬೀಕೋ ಎನ್ನುವಂತಿತ್ತು.