Advertisement

ಗೆದ್ದರಷ್ಟೇ ಭಾರತಕ್ಕೆ ಸೆಮಿಫೈನಲ್‌ ಟಿಕೆಟ್‌

11:36 PM Mar 26, 2022 | Team Udayavani |

ಕ್ರೈಸ್ಟ್‌ಚರ್ಚ್‌: ಭಾರತಕ್ಕೆ ವನಿತಾ ವಿಶ್ವಕಪ್‌ ಸೆಮಿಫೈನಲ್‌ ಟಿಕೆಟ್‌ ಲಭಿಸೀತೇ ಎಂಬ ತೀವ್ರ ಕುತೂಹಲಕ್ಕೆ ರವಿವಾರ ಉತ್ತರ ಲಭಿಸಲಿದೆ. ಮಿಥಾಲಿ ಪಡೆ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

Advertisement

ಇಲ್ಲಿರುವುದು ಎರಡೇ ಮಾರ್ಗ-ಗೆದ್ದರೆ ಸೆಮಿಫೈನಲ್‌, ಸೋತರೆ ಮನೆಗೆ!

ಒಂದು ವೇಳೆ ಸೋಲದೆ, ಪಂದ್ಯ ರದ್ದುಗೊಂಡರೂ ಭಾರತ ನಾಕೌಟ್‌ಗೆ ತೇರ್ಗಡೆಯಾಗಲಿದೆ ಎಂಬುದು ಇನ್ನೊಂದು ಲೆಕ್ಕಾಚಾರ.

ರವಿವಾರದ ಮೊದಲ ಪಂದ್ಯ ಇಂಗ್ಲೆಂಡ್‌-ಬಾಂಗ್ಲಾದೇಶ ನಡುವೆ ನಡೆಯಲಿದೆ. ಇದನ್ನು ಇಂಗ್ಲೆಂಡ್‌ ಗೆಲ್ಲುವ ಸಾಧ್ಯತೆ ಹೆಚ್ಚು. ಆಗ 8 ಅಂಕಗಳೊಂದಿಗೆ ಆಂಗ್ಲರ ಪಡೆ ಸೆಮಿಫೈನಲ್‌ ಪ್ರವೇಶಿಸಲಿದೆ. ಬಳಿಕ ಭಾರತ ಗೆದ್ದರೆ ವೆಸ್ಟ್‌ ಇಂಡೀಸ್‌ (7 ಅಂಕ) ಕೂಟದಿಂದ ಹೊರಬೀಳಲಿದೆ. ಇದು ಅಂತಿಮ ಲೆಕ್ಕಾಚಾರ.

ಭಾರತದ ಅಸ್ಥಿರ ಪ್ರದರ್ಶನ
2017ರ ರನ್ನರ್ ಅಪ್‌ ಆಗಿರುವ ಭಾರತ ಪ್ರಸಕ್ತ ಕೂಟದಲ್ಲಿ ಈವರೆಗೆ ಸ್ಥಿರ ಪ್ರದರ್ಶನ ನೀಡಿಲ್ಲ. ಬಲಿಷ್ಠ ತಂಡಗಳ ವಿರುದ್ಧ ಮುಗ್ಗರಿಸಿ, ಸಾಮಾನ್ಯ ತಂಡಗಳ ವಿರುದ್ಧವಷ್ಟೇ ಗೆದ್ದಿದೆ. ಅಂತಿಮ ಲೀಗ್‌ ಪಂದ್ಯದಲ್ಲಿ ಎದುರಾಗಲಿರುವ ದಕ್ಷಿಣ ಆಫ್ರಿಕಾ ಬಲಾಡ್ಯ ತಂಡವಾಗಿ ಗೋಚರಿಸಿದೆ. 6 ಪಂದ್ಯಗಳಿಂದ 9 ಅಂಕ ಗಳಿಸಿರುವ ಹರಿಣಗಳ ಪಡೆ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವುದರಿಂದ ಅದಕ್ಕೆ ಇದೊಂದು ಅಭ್ಯಾಸ ಪಂದ್ಯವಷ್ಟೇ.

Advertisement

ಬೇರೆ ಯಾವುದೇ ಲೆಕ್ಕಾಚಾರಕ್ಕೆ ಕಾಯದೆ ಗೆದ್ದು ನಾಕೌಟ್‌ ಪ್ರವೇಶಿಸುವುದು ಭಾರತ ತಂಡಕ್ಕೊಂದು ಶೋಭೆ. ಈ ಕೆಲಸ ಬಹಳ ಮೊದಲೇ ಆಗಬೇಕಿತ್ತು. ಆದರೆ ಮಿಥಾಲಿ ಪಡೆಯ ಏರಿಳಿತದ ಆಟದಿಂದ ಇದು ಸಾಧ್ಯವಾಗಲಿಲ್ಲ. ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ಸ್ಥಿರತೆ ಕಂಡುಬರಲಿಲ್ಲ. ಹೀಗಾಗಿ ತಾನಾಗಿ ಒತ್ತಡವನ್ನು ಹೇರಿಕೊಂಡಿತು. ದಕ್ಷಿಣ ಆಫ್ರಿಕಾ ವಿರುದ್ಧ ಈ ಒತ್ತಡದ ಮೂಟೆಯನ್ನು ಕೆಳಗಿಳಿಸಬೇಕಾದರೆ ಭಾರತ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಿದೆ. ದೊಡ್ಡ ಜತೆಯಾಟ, ದೊಡ್ಡ ಮೊತ್ತ ದಾಖಲಾಗಬೇಕಾದುದು ಅನಿವಾರ್ಯ.

ಮಿಥಾಲಿಯೇ ಆಡುತ್ತಿಲ್ಲ!
ಪ್ರತೀ ಸರಣಿಯಲ್ಲಿ ಉತ್ತಮ ಆಟ ಆಡುತ್ತಿದ್ದ ಮಿಥಾಲಿ ರಾಜ್‌ ತಮ್ಮ ಕೊನೆಯ ವಿಶ್ವಕಪ್‌ನಲ್ಲಿ ರನ್‌ ಬರಗಾಲದಲ್ಲಿರುವುದು ಭಾರತಕ್ಕೆ ಎದುರಾದ ದೊಡ್ಡ ಹಿನ್ನಡೆ. 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಅವರದು ಸಿಂಗಲ್‌ ಡಿಜಿಟ್‌ ಸ್ಕೋರ್‌. ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಕಳಪೆ ಫಾರ್ಮ್ನಿಂದ ಆಡುವ ಬಳಗದಿಂದ ಖೋ ಪಡೆಯುವಂತಾದದ್ದು ಮತ್ತೂಂದು ದುರಂತ. ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಯಾಸ್ತಿಕಾ ಭಾಟಿಯಾ, ಆಲ್‌ರೌಂಡರ್‌ಗಳಾದ ಸ್ನೇಹ್‌ ರಾಣಾ, ಪೂಜಾ ವಸ್ತ್ರಾಕರ್‌ ಮಾತ್ರ ಗಮನಾರ್ಹ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಮತ್ತೋರ್ವ ಸವ್ಯಸಾಚಿ ದೀಪ್ತಿ ಶರ್ಮ ಅನಿವಾರ್ಯ ಭಾರತಕ್ಕಿದೆ.

“ಹ್ಯಾಗ್ಲೀ ಓವಲ್‌’ ಸಂತುಲಿತ ಟ್ರ್ಯಾಕ್‌ ಹೊಂದಿದ್ದು, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ಗಳೆರಡಕ್ಕೂ ನೆರವು ನೀಡಲಿದೆ. ಅವಳಿ ಪೇಸರ್, ತ್ರಿವಳಿ ಸ್ಪಿನ್ನರ್ ಕಾಂಬಿನೇಶನ್‌ ಸೂಕ್ತವೆನಿಸೀತು.

Advertisement

Udayavani is now on Telegram. Click here to join our channel and stay updated with the latest news.

Next