Advertisement
ಬೆಂಗಳೂರು: ಕನಿಷ್ಠ ವೇತನ, ವೇತನ ಸಹಿತ ರಜೆ, ಹೆಚ್ಚುವರಿ ಸೌಲಭ್ಯಕ್ಕೆ ಹೆಚ್ಚು ವೇತನ ಸೇರಿದಂತೆ ಇತರೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ದುಡಿಯುವ ಸ್ಥಿತಿ ಗಾರ್ಮೆಂಟ್ಸ್ ಮಹಿಳೆಯರದ್ದು. ನಗರ ಹಾಗೂ ಹೊರವಲಯದಲ್ಲಿ ನೂರಾರು ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿರುವ ಸಾವಿರಾರು ಮಹಿಳೆಯರಿಗೆ ಕನಿಷ್ಠ ವೇತನ ಎಂದರೇನು ಎಂದು ತಿಳಿಯದ ಸ್ಥಿತಿಯಲ್ಲಿದ್ದಾರೆ. ಅವರಿಗೆ ಕೇವಲ 8 ರಿಂದ 9 ಸಾವಿರ ರೂ. ಸಂಬಳ ನೀಡಲಾಗುತ್ತಿದೆ.
Related Articles
Advertisement
ಬಹುತೇಕ ಗಾರ್ಮೆಂಟ್ಸ್ ನೌಕರರು ಬೆಳಗ್ಗೆ 7.45ಕ್ಕೆ ಫ್ಯಾಕ್ಟರಿ ವಾಹನದಲ್ಲಿ ಹೊರಟು ಬಿಡುತ್ತಾರೆ. ಹೀಗಾಗಿ ಅವರಿಗೆ ಬೆಳಗ್ಗಿನ ಉಪಹಾರಕ್ಕೆ ಸಮಯ ಸಿಗುವುದಿಲ್ಲ. ನಂತರ ಫ್ಯಾಕ್ಟರಿಗೆ ಹೋದರೂ ಬೆಳಗ್ಗಿನ ಉಪಹಾರ ಸೇವಿಸಲು ಮೇಲಧಿಕಾರಿಗಳು ಅವಕಾಶ ನೀಡುವುದಿಲ್ಲ. ಹೀಗಾಗಿ ಬೆಳಗ್ಗೆ ಮತ್ತು ಮಧ್ಯಾಹ್ನದ ಊಟ ಒಟ್ಟಿಗೆ ಸೇವಿಸುವ ಅನಿವಾರ್ಯತೆಯಿದೆ.
ವೇತನರಹಿತ ರಜೆ: ವಾರದ ರಜೆ ಹೊರತುಪಡಿಸಿ ವರ್ಷಕ್ಕೆ 14 ವೇತನ ಸಹಿತ ರಜೆಗಳಿವೆ. ಅದೂ ಸಿಗುವುದು ಕಷ್ಟ. ಮೇಲಧಿಕಾರಿಗಳ ಬಳಿ ಕಾಡಿ, ಬೇಡಿ ಪಡೆದರೆ ಅದೃಷ್ಟ. ಕೆಲವೊಮ್ಮೆ ಈ ರಜೆ ವಿಚಾರಕ್ಕೆ ಮೇಲಧಿಕಾರಿಗಳ ಜತೆ ಜಗಳವಾಡುವುದು, ಅವರಿಂದ ಬೈಸಿಕೊಳ್ಳುವುದು ಅನಿವಾರ್ಯ ಎಂದು ಹಲವು ಗಾರ್ಮೆಂಟ್ಸ್ ಮಹಿಳೆಯರು ತಮ್ಮ ಅಳಲನ್ನು ಉದಯವಾಣಿಯೊಂದಿಗೆ ತೊಡಿಕೊಂಡಿದ್ದಾರೆ.
ಇಎಸ್‌ಐ ಮೂಲಕ ರಜೆ ತೆಗೆದುಕೊಳ್ಳಬೇಕೆಂದರೆ ರಾಜಾಜಿನಗರದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಂದ ಅನಾರೋಗ್ಯ ಪತ್ರವನ್ನು ವೈದ್ಯರಿಂದ ಪಡೆದು, ಗಾರ್ಮೆಂಟ್ಸ್‌ಗೆ ಸಲ್ಲಿಸಬೇಕು. ಆಗಲೂ ರಜೆ ಸಿಗುವ ಖಾತ್ರಿಯಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲೂ 3ದಿನಕ್ಕಿಂತ ಹೆಚ್ಚು ರಜೆ ಬರೆದುಕೊಡುವುದಿಲ್ಲ. ಹೀಗಾಗಿ ಕೆಲವು ಬಾರಿ ತಿಂಗಳಿಗೆ ವೇತನ 4ರಿಂದ 5 ಸಾವಿರ ರೂ. ಸಿಕ್ಕಿದ್ದೂ ಇದೆ ಎನ್ನುತ್ತಾರೆ ಗಾರ್ಮೆಂಟ್ಸ್‌ನಲ್ಲಿ ದುಡಿಯುವ ಮಹಿಳೆಯರು.
ಓಟಿಗೆ ಇಲ್ಲ ವೇತನ: ಗಾರ್ಮೆಂಟ್ಸ್ ಕೆಲಸದ ಸಮಯ ಬೆಳಗ್ಗೆ 9 ರಿಂದ ಸಂಜೆ 5.30. ಆನಂತರ ನಮ್ಮ ಬಳಿ ಓಟಿ ಎಂದು ದುಡಿಸಿಕೊಳ್ಳುತ್ತಾರೆ. ಇದಕ್ಕೆ ಯಾವುದೇ ವೇತನವಿರುವುದಿಲ್ಲ. ಕಾಂಪ್‌ಆಫ್ ಎಂದು ಕೊಡುತ್ತಾರೆ. ಕೆಲವೊಮ್ಮೆ ಕೆಲವು ಬ್ಯಾಚ್‌ಗಳಿಗೆ ಆರ್ಡರ್ ಬಂದಿಲ್ಲ ಎಂಬ ಕಾರಣಕ್ಕೆ ಮೇಲಧಿಕಾರಿಗಳು ರಜೆ ನೀಡುತ್ತಾರೆ. ಆ ರಜಾದಿನಕ್ಕೆ ವೇತನ ಇರುವುದಿಲ್ಲ. ನಂತರ ಹೆಚ್ಚಿನ ಆರ್ಡರ್ ಬಂದರೆ ಫ್ಯಾಕ್ಟರಿ ಅವಧಿ ಮುಗಿದ ನಂತರ ದಿನಕ್ಕೆ ಒಂದೂವರೆ ಗಂಟೆಯಂತೆ ಆರು ದಿನಗಳ ಕಾಲ ಓಟಿ ಮಾಡಬೇಕು. ಇದಕ್ಕೆ ನಿರಾಕರಿಸಿದರೆ ಮರುದಿನದಿಂದ ಕೆಲಸವೇ ಇರುವುದಿಲ್ಲ.
ನರಕ ದರ್ಶನ: ಟೈಲರ್‌ಗಳ ಮೇಲುಸ್ತುವಾರಿ ಚಕ್ಕರ್‌ಗಳದ್ದಾದರೆ ನಮ್ಮನ್ನು ನೋಡಿಕೊಳ್ಳಲು ಕ್ವಾಲಿಟಿ ಇನ್‌ಚಾರ್ಜ್ (ಕ್ಯೂಸಿ) ಹಾಗೂ ಪ್ರೊಡಕ್ಷನ್ ಮ್ಯಾನೆಜರ್ (ಪಿಎಂ)ಗಳಿರುತ್ತಾರೆ. ಅವರಂತೂ ಫ್ಯಾಕ್ಟರಿಯಲ್ಲೇ ಜೀವನದ ನರಕ ತೋರಿಸುತ್ತಾರೆ. ಚೆಕ್ಕಿಂಗ್ ವರ್ಗ ದಿನಕ್ಕೆ 100ರಿಂದ 150ಬಟ್ಟೆಗಳನ್ನು ನೋಡಬೇಕು. ಯಾವ ಟೈಲರ್‌ಗಳು ಸರಿಯಾಗಿ ಬಟ್ಟೆ ಹೊಲಿದಿದ್ದಾರೆ? ಯಾರು ಹೊಲಿದ ಬಟ್ಟೆಯಲ್ಲಿ ಹೆಚ್ಚು ಆಲೆಷನ್ ಇದೆ? ಎಷ್ಟು ಬಟ್ಟೆಗಳು ತಯಾರಾಗಿವೆ? ಎಂದು ಗಂಟೆಗೊಮ್ಮೆ ವರದಿ ತಯಾರಿಸಬೇಕು.
ಸತತ ಒಂಭತ್ತೂವರೆ ಗಂಟೆಗಳ ನಿಂತೇ ಇರುವುದರಿಂದ ಸುಸ್ತಾಗಿ ಬಟ್ಟೆಗಳನ್ನು ಸರಿಯಾಗಿ ಗಮನಿಸದೇ ಕಳುಹಿಸಿದರೆ ಕ್ವಾಲಿಟಿ ಇನ್‌ಚಾರ್ಜ್‌ನಿಂದ ಅವಾಚ್ಯ ಶಬ್ದ ಕೇಳಲು ಸಿದ್ಧವಿರಬೇಕು. ಹೆಚ್ಚು ಬಟ್ಟೆಗಳನ್ನು ಏಕೆ ತಯಾರಿಸಿಲ್ಲ ಎಂದು ಪ್ರೊಡಕ್ಷನ್ ಮ್ಯಾನೇಜರ್ ಕೂಗಾಡಿದರೆ, ಗುಣಮಟ್ಟದ ಬಟ್ಟೆಗಳನ್ನು ರೆಡಿ ಮಾಡಿ ಎಂದು ಕ್ವಾಲಿಟಿ ಇನ್‌ಚಾರ್ಜ್ ರೇಗುತ್ತಾರೆ ಎನ್ನುತ್ತಾರೆ ಕಳೆದ 26 ವರ್ಷಗಳಿಂದ ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿರುವ ವೇದಾವತಿ. (ಹೆಸರು ಬದಲಾಯಿಸಲಾಗಿದೆ)
* ಶ್ರುತಿ ಮಲೆನಾಡತಿ