ಮಡಿಕೇರಿ: ಜನವಸತಿ ಪ್ರದೇಶದಲ್ಲಿ ದಿಢೀರ್ ಆಗಿ ತಲೆಯೆತ್ತಿದ ಮದ್ಯದಂಗಡಿಯನ್ನು ಮಹಿಳೆಯರೇ ಮುಚ್ಚಿಸಿದ ಪ್ರಸಂಗ ಸಿದ್ದಾಪುರ ಸಮೀಪ ಪಾಲಿಬೆಟ್ಟ ರಸ್ತೆಯ ಸುಣ್ಣದ ಗೂಡು ಎಂಬಲ್ಲಿ ನಡೆದಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯ ಮದ್ಯ ದಂಗಡಿಗಳಿಗೆ ಅಬಕಾರಿ ಇಲಾಖೆ ಬೀಗ ಜಡಿದ ಹಿನ್ನೆಲೆಯಲ್ಲಿ ಸಿದ್ದಾಪುರದ ಮುಖ್ಯ ರಸ್ತೆಯಲ್ಲಿದ್ದ ಮದ್ಯ ದಂಗಡಿಯೊಂದು ಶನಿವಾರ ಬೆಳಗ್ಗೆ ದಿಢೀರ್ ಆಗಿ ಸುಣ್ಣದಗೂಡು ಎಂಬಲ್ಲಿಗೆ ಸ್ಥಳಾಂತರಗೊಂಡಿತು.
ಆಕ್ರೋಶಗೊಂಡ ಸ್ಥಳೀಯ ಮಹಿಳೆಯರು ಸಿದ್ದಾ ಪುರ ಗ್ರಾಮ ಪಂಚಾಯತ್‌ಗೆ ದೂರು ಸಲ್ಲಿಸಿದ್ದಾರೆ. ಆದರೆ ಪಂಚಾಯತ್‌ನಿಂದ ಯಾರೂ ಬಾರದ ಹಿನ್ನೆಲೆಯಲ್ಲಿ ತಾವೇ ಅಂಗಡಿಯನ್ನು ಮುಚ್ಚಿಸಿದ್ದಾರೆ. ಸುಣ್ಣದಗೂಡಿನಲ್ಲಿ ಮದ್ಯದಂಗಡಿ ತೆರೆಯಲು ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ.
ಸ್ಥಳೀಯರು ಹಾಗೂ ವಾರ್ಡ್ ಸದಸ್ಯರು ಮದ್ಯದಂಗಡಿ ತೆರೆಯಲು ವಿರೋಧ ವ್ಯಕ್ತಪಡಿಸಿ ದ್ದರಿಂದಾಗಿ ನಿರಾಕ್ಷೇಪಣಾ ಪತ್ರವನ್ನು ಸಹ ನೀಡಿ ರಲಿಲ್ಲವೆನ್ನಲಾಗಿದೆ. ಆದರೆ ಶನಿವಾರ ದಿಢೀರ್ ಆಗಿ ಮದ್ಯದಂಗಡಿ ತೆರೆದಿರುವುದು ಸ್ಥಳೀಯರ ಆಕ್ರೋ ಶಕ್ಕೆ ಕಾರಣವಾಯಿತು. ಸುಣ್ಣದಗೂಡಿನಲ್ಲಿ ಹೆಚ್ಚಾಗಿ ಕಾರ್ಮಿಕರೇ ವಾಸಿಸುತ್ತಿದ್ದು, ಅಷ್ಟೇ ಅಲ್ಲದೇ ಇದೀಗ ಆರಂಭವಾಗಿರುವ ಮದ್ಯದಂಗಡಿ ಸಮೀಪದಲ್ಲೇ ಕುಡಿಯುವ ನೀರಿನ ಬಾವಿಯೊಂದಿದೆ.
ಮದ್ಯಪ್ರಿಯರು ಈ ಬಾವಿಯ ಸಮೀಪದಲ್ಲೇ ಅಶುಚಿತ್ವದ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ಅಲ್ಲದೆ ಕಿರಿದಾದ ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ಅಪಘಾತಗಳ ಹೆಚ್ಚಾಗುವುದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಸ್ಥಳೀಯರು ಒತ್ತಾಯಿಸಿದರು. ಮತ್ತೆ ಮದ್ಯದಂಗಡಿಯನ್ನು ತೆರೆದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.