Advertisement

ರಕ್ಷಿಸಲ್ಪಟ್ಟರೂ ಮತ್ತೆ ಬೀದಿಪಾಲಾಗುತ್ತಿದ್ದಾರೆ ಮಹಿಳೆಯರು

06:20 AM Oct 02, 2018 | |

ಉಡುಪಿ ಜಿಲ್ಲೆಯಲ್ಲಿ ಸ್ವಾಧಾರ ಗೃಹವನ್ನು ಆರಂಭಿಸಿ ಮಹಿಳೆ ಯರಿಗೆ, ವಿಶೇಷ ವಾಗಿ ಹಿರಿಯ ಮಹಿಳೆ ಯರಿಗೆ ನೆರ ವಾಗುವುದು ಅಗತ್ಯ.

Advertisement

ಉಡುಪಿ: ನಾನಾ ಕಾರಣಗಳಿಂದ ಮನೆಬಿಟ್ಟು ಬಂದವರು, ಮನೆಯಿಂದ ಹೊರಹಾಕಲ್ಪಟ್ಟವರು, ಮಾನಸಿಕ ಸ್ಥಿಮಿತ ಕಳೆದುಕೊಂಡು ಬೀದಿಪಾಲಾದ ಮಹಿಳೆಯರ ರಕ್ಷಣೆ ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಕಾರ್ಯಕರ್ತರಿಂದ ನಡೆಯುತ್ತಲೇ ಇದೆ. ಆದರೆ ರಕ್ಷಣೆ ಆದ ಅನಂತರ ಅವರಿಗೆ ಸೂಕ್ತ ಆಶ್ರಯದ ವ್ಯವಸ್ಥೆ ಇಲ್ಲದೆ ರಕ್ಷಿಸಲ್ಪಟ್ಟವರು ಮತ್ತೆ ಬೀದಿ ಪಾಲಾಗುವ ಪರಿಸ್ಥಿತಿ ಉದ್ಭವವಾಗಿದೆ. ಇದು ಉಡುಪಿಯ ಸಾಮಾಜಿಕ ಸೇವಾ ಕಾರ್ಯಕರ್ತರಿಗೆ ಎದುರಾಗಿರುವ ಸವಾಲು.

ಉಡುಪಿಯಲ್ಲಿ ಸ್ಟೇಟ್‌ಹೋಮ್‌ (ರಾಜ್ಯ ಮಹಿಳಾ ನಿಲಯ) ಇದೆ. ಮಹಿಳೆಯರ ವಿಶೇಷ ಚಿಕಿತ್ಸಾ ಘಟಕವಿದೆ. ಕೆಲವು ತಿಂಗಳುಗಳ ಹಿಂದೆ ಸಖೀ-ವನ್‌ಸ್ಟಾಪ್‌ ಸೆಂಟರ್‌ ಕೂಡ ಆರಂಭವಾಗಿದೆ. ಆದರೆ ಸ್ಟೇಟ್‌ಹೋಂ ಹೊರತುಪಡಿಸಿದರೆ ಇತರ ಎಲ್ಲವು ಕೂಡ ತಾತ್ಕಾಲಿಕವಾಗಿ ನೆರವು, ಆಶ್ರಯ ಕೊಡುವ ಸಂಸ್ಥೆಗಳು. ಸ್ಟೇಟ್‌ ಹೋಂನಲ್ಲಿ ಅನಾಥ ಹೆಣ್ಮಕ್ಕಳಿಗೆ ಮಾತ್ರ ಅವಕಾಶವಿದೆ. ಅಲ್ಲದೆ 60 ವರ್ಷ ಮೇಲ್ಪಟ್ಟವರನ್ನು ಸೇರಿಸಿಕೊಳ್ಳುವುದಿಲ್ಲ. 

ಸ್ವಾಧಾರ ಗೃಹ ಬೇಡಿಕೆ
ಸ್ವಾಧಾರ ಗೃಹಗಳಲ್ಲಿ ಮಹಿಳೆಯರು ಸುಮಾರು 2 ವರ್ಷಗಳ ಕಾಲ ಉಳಿದುಕೊಳ್ಳಲು ಅವಕಾಶವಿದೆ. ಇಲ್ಲಿ ಸಾಮಾನ್ಯವಾಗಿ ವಯಸ್ಸಿನ ಮಿತಿ ಇರುವುದಿಲ್ಲ. ಇಲ್ಲಿ ಮಹಿಳೆಯರಿಗೆ ಆಶ್ರಯ ಒದಗಿಸುವ ಜತೆಗೆ ಅವರಿಗೆ ಕೌಶಲಾಭಿವೃದ್ಧಿ ಸೇರಿದಂತೆ ವಿವಿಧ ರೀತಿಯ ತರಬೇತಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ವೇಳೆ ವರ್ಷಾನುಗಟ್ಟಲೆ ಅವರಿಗೆ ಪುನರ್ವಸತಿ ಒದಗಿಸಲು ಅಥವಾ ಅವರ ಸಂಬಂಧಿಕರ ಮನೆಗೆ ಮತ್ತೆ ಕಳುಹಿಸಿಕೊಡಲು ಸಾಧ್ಯವೇ ಆಗದಿದ್ದಲ್ಲಿ ವೃದ್ಧಾಶ್ರಮಗಳಲ್ಲಿ ಆಶ್ರಯ ಕಲ್ಪಿಸಲಾಗುತ್ತದೆ. ಹಾಗಾಗಿ ಉಡುಪಿ ಜಿಲ್ಲೆಯಲ್ಲಿ ಸ್ವಾಧಾರ ಗೃಹವನ್ನು ಆರಂಭಿಸಿ ಮಹಿಳೆಯರಿಗೆ, ವಿಶೇಷವಾಗಿ ಹಿರಿಯ ಮಹಿಳೆಯರಿಗೆ ನೆರವಾಗಬೇಕು ಎಂದು ಮಹಿಳಾ ಮಂಡಳಿಗಳ ಒಕ್ಕೂಟ ಕೂಡ ಒತ್ತಾಯಿಸಿದೆ. ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳಲ್ಲಿ ಸ್ಥಳಾವಕಾಶದ ಕೊರತೆಯೂ ಇದೆ. ಜತೆಗೆ ವೃದ್ಧಾಶ್ರಮಕ್ಕೆ ಸೇರುವ ಮನಸ್ಥಿತಿ ಎಲ್ಲ ಮಹಿಳೆಯರಲ್ಲಿಯೂ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸ್ವಾಧಾರ ಗೃಹಗಳು ನೆರವಿಗೆ ಬರಬಹುದು ಎಂಬ ಅಭಿಪ್ರಾಯ ಸಾಮಾಜಿಕ ಸೇವಾ ಕಾರ್ಯಕರ್ತರದ್ದು.  

ಆಶ್ರಯ ನೀಡುವುದೇ ಬಹುದೊಡ್ಡ ಸಮಸ್ಯೆ
ನಾವು ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದಿಂದ ಸಾಂತ್ವನ ಸಹಾಯವಾಣಿಯನ್ನು 2001ರಿಂದ ನಡೆಸಿಕೊಂಡು ಬರುತ್ತಿದ್ದೇವೆ. ಸರಕಾರದವರು ಎಲ್ಲಿಯಾದರೂ ಜಾಗ ಕೊಟ್ಟರೆ ಅಲ್ಲಿ ಸ್ವಾಧಾರ ಗೃಹ ನಿರ್ಮಿಸಬಹುದಾಗಿದೆ. ಈಗ ಸಾಂತ್ವನ ಸಹಾಯವಾಣಿಯಿಂದ ತಿಂಗಳಿಗೆ 25ರಷ್ಟು ಪ್ರಕರಣಗಳನ್ನು ನಿರ್ವಹಿಸುತ್ತಿದ್ದೇವೆ. ದಿನಕ್ಕೆ ಹತ್ತಾರು ಕರೆಗಳು ಬರುತ್ತವೆ. ಅವುಗಳನ್ನು ಕೂಡ ನಿಭಾಯಿಸಲಾಗುತ್ತಿದೆ. 24 ಗಂಟೆಗಳ ಸೇವೆ ನೀಡಲಾಗುತ್ತಿದೆ. ಆದರೆ ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು, ಅಶಕ್ತರಾದವರನ್ನು ರಕ್ಷಿಸಿದ ಅನಂತರ ಅವರಿಗೆ ಆಶ್ರಯ ನೀಡುವುದೇ ಬಹುದೊಡ್ಡ ಸಮಸ್ಯೆಯಾಗಿದೆ.
ವಸಂತಿ ರಾವ್‌ ಕೊರಡ್ಕಲ್‌  
ಕಾರ್ಯದರ್ಶಿ, ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ

Advertisement

ಸರಕಾರದಿಂದ ಅನುದಾನ 
ಎನ್‌ಜಿಒಗಳು ಮುಂದೆ ಬಂದು ಸ್ವಧಾರಾ ಗೃಹಗಳನ್ನು ಮಾಡುವುದಾದರೆ ಅದಕ್ಕೆ ಸರಕಾರದಿಂದ ಅನುದಾನ ದೊರೆಯುತ್ತದೆ. ಈಗ ಇಲಾಖೆ ಸಹಾಯವಾಣಿ ಮತ್ತು ಸಾಮಾಜಿಕ ಕಾರ್ಯಕರ್ತರ ನೆರವಿನಿಂದ ರಕ್ಷಿಸುವ ಹಿರಿಯ ಮಹಿಳೆಯರು ಸೇರಿದಂತೆ ಮಹಿಳೆಯರನ್ನು ರಕ್ಷಿಸುತ್ತಿದೆ. ಅವರಲ್ಲಿ ಕೆಲವರು ವೃದ್ಧಾಶ್ರಮಗಳಿಗೆ ತೆರಳುವುದಕ್ಕೆ ಒಪ್ಪುವುದಿಲ್ಲ. ಅಂತಹ ಸಂದರ್ಭದಲ್ಲಿ ನಮಗೆ ತೊಂದರೆಯಾಗುತ್ತಿದೆ.
– ಉಪನಿರ್ದೇಶಕರು, 
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ 

–  ಸಂತೋಷ್‌ ಬೊಳ್ಳೆಟ್ಟ

Advertisement

Udayavani is now on Telegram. Click here to join our channel and stay updated with the latest news.

Next