Advertisement

200 ವರ್ಷಗಳ ಹಿಂದೆಯೇ ಇತ್ತು ಮಹಿಳೆಯರಿಗೆ ನಿಷೇಧ

06:00 AM Nov 23, 2018 | Team Udayavani |

ತಿರುವನಂತಪುರ: ಬ್ರಿಟಿಷ್‌ ಆಡಳಿತಕ್ಕೂ ಮುಂಚೆಯೇ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10-50 ವರ್ಷ ವಯೋಮಿತಿಯ ಮಹಿಳೆಯರು ಪ್ರವೇಶ ಮಾಡಬಾರದು ಎಂಬ ನಿಯಮ ಜಾರಿಯಲ್ಲಿತ್ತು ಎಂದು ಅಧ್ಯಯನವೊಂದರಿಂದ ಬಹಿರಂಗವಾಗಿದೆ.

Advertisement

1820ರಿಂದ ಐದು ವರ್ಷಗಳ ಕಾಲ ಬೆಂಜಮಿನ್‌ ಸ್ವಾಮಿನ್‌ ವಾರ್ಡ್‌ ಮತ್ತು ಪೀಟರ್‌ ಐರ್‌ ಕೊನ್ನರ್‌ ಎಂಬವರು ವಿವಿಧ ರೀತಿಯಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸಿದ್ದರು. ಮಹಿಳೆಯರ ಪ್ರವೇಶ ನಿಷೇಧದ ಪದ್ಧತಿ 2 ಶತಮಾನಗಳ ಹಿಂದೆಯೇ ಜಾರಿಯಾಗಿತ್ತು ಎಂದು ಕಂಡು ಕೊಂಡಿದ್ದರು. 1893 ಮತ್ತು 1901ರಲ್ಲಿ ಎರಡು ಭಾಗಗಳಲ್ಲಿ “ಮೆಮೊಯಿರ್‌ ಆಫ್ ದ ಸರ್ವೆ ಟ್ರಾವಂಕೂರ್‌ ಆ್ಯಂಡ್‌ ಕೊಚ್ಚಿನ್‌ ಸ್ಟೇಟ್ಸ್‌’ ಎಂಬ ಶೀರ್ಷಿಕೆಯ ಅಡಿ ಅಧ್ಯಯನ ವರದಿ ಪ್ರಕಟವಾಗಿದೆ. ಅಂದಿನ ಮದ್ರಾಸ್‌ ಸರಕಾರ ಪ್ರಕಟಿಸಿದ್ದ ಈ ಅಧ್ಯಯನದಲ್ಲಿ 2 ಶತಮಾನಗಳ ಹಿಂದೆಯೇ ಮಹಿಳೆ ಯರ ನಿಷೇಧ ಜಾರಿಯಲ್ಲಿತ್ತು ಎಂಬ ಅಂಶ ಉಲ್ಲೇಖವಿದೆ. ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ಸೆ.28ರಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಆಕ್ರೋಶ ಮುಂದುವರಿದಿರುವಂತೆಯೇ ಈ ಕುತೂಹಲಕಾರಿ ಅಂಶದ ಬಗ್ಗೆ “ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ. 

“ಆಗ ವಯಸ್ಕ ಮಹಿಳೆಯರು ಮತ್ತು ಯುವತಿಯರು ದೇಗುಲ ಪ್ರವೇಶಕ್ಕೆ ಅವಕಾಶ ಕೋರಿ ಮನವಿ ಮಾಡಿಕೊಂಡಿ ರಲೂ ಸಾಧ್ಯವಿದೆ. ಪ್ರೌಢಾವಸ್ಥೆ ಪ್ರವೇಶ ಮಾಡಿರುವವರು ಹಾಗೂ ಎಲ್ಲ ರೀತಿಯ ದೈಹಿಕ ಸಂಪರ್ಕ ಹೊಂದಿರುವವರು ದೇಗುಲ ಪ್ರವೇಶ ಮಾಡಿದರೆ ಅಯ್ಯಪ್ಪನಿಗೆ ವಿರೋಧವಾದಂತಾಗುತ್ತದೆ’ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.  

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇತಿಹಾಸ ತಜ್ಞ ಎಂ.ಜಿ.ಶಶಿಭೂಷಣ “ಇದು ಇತಿಹಾಸ ಕಾಲದಲ್ಲಿನ ತಿರುವಾಂಕೂರು ಮತ್ತು ಕೊಚ್ಚಿ ರಾಜ್ಯಗಳಿಗೆ ಸಂಬಂಧಿಸಿದ ಅಧಿಕೃತ ದಾಖಲೆಯೂ ಹೌದು. ಅನೌಪಚಾರಿಕವಾಗಿ ವಿಧಿಸಲಾಗಿದ್ದ ನಿಯಮ ಹಲವು ವರ್ಷ ಗಳಿಂದ ಚಾಲ್ತಿಯಲ್ಲಿತ್ತು. ಕೇರಳ ಹೈ ಕೋರ್ಟ್‌ ಕೂಡ 1991ರಲ್ಲಿ ಈ ನಿಯ ಮಕ್ಕೆ ಅನುಮೋದನೆ ನೀಡಿತ್ತು’ ಎಂದು ಹೇಳಿದ್ದಾರೆ.  ತಿಳಿವಳಿಕೆಯ ಕೊರತೆ ಯಿಂದ 10-50ರ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶ ಮಾಡಿದ್ದು ಭಾರೀ ವಿರಳ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಮೆಟ್ಟಿಲು ಕುರಿತೂ ಉಲ್ಲೇಖ: ಸೆ.28ರ ತೀರ್ಪು ವೇಳೆ ನ್ಯಾಯಪೀಠದಲ್ಲಿದ್ದ ನ್ಯಾ.ಇಂದೂ ಮಲ್ಹೋತ್ರಾ ಅವರು ಮಹಿಳೆ ಯರ ಪ್ರವೇಶ ನಿರ್ಬಂಧದ ಪದ್ಧತಿಗೆ ಬೆಂಬಲ ನೀಡುವ ವೇಳೆ, ಈ ಅಧ್ಯಯನ  ವರದಿಯನ್ನೇ ಉಲ್ಲೇಖೀಸಿದ್ದರು. ಈ ವರದಿಯಲ್ಲಿ “ಚೌರಿಮುಲ್ಲ’ ಎಂಬ ಸ್ಥಳದ ಬಗ್ಗೆ ಮದ್ರಾಸ್‌ ಸರಕಾರದ ಹಿರಿಯ ಅಧಿಕಾರಿಗಳಾಗಿದ್ದ ಬೆಂಜಮಿನ್‌ ಸ್ವಾಮಿನ್‌ ವಾರ್ಡ್‌ ಮತ್ತು ಪೀಟರ್‌ ಐರ್‌ ಕೊನ್ನರ್‌ ವಿವರಣೆ ನೀಡಿದ್ದಾರೆ. ಒಂದು ವರದಿಯಲ್ಲಿ “ಚೌರಿಮುಲ್ಲ ಶಾಸ್ತ’ (ಅಯ್ಯಪ್ಪ) “ಪರ್ವತ ಗಳ ಎಡೆಯಲ್ಲಿರುವ ದೇವರು’ ಎಂದು ಉಲ್ಲೇಖಿಸಲಾಗಿದೆ. ಕಲ್ಲುಗಳು ಮತ್ತು ತಾಮ್ರಗಳ ಮೂಲಕ ಎತ್ತರದ ಪರ್ವತ ಪ್ರದೇಶದಲ್ಲಿ ಈ ದೇಗುಲವಿದೆ ಎಂದು ಅಯ್ಯಪ್ಪ ದೇಗುಲದ ರಚನೆಯ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಪವಿತ್ರ 18 ಮೆಟ್ಟಿಲುಗಳ ಉಲ್ಲೇಖವೂ ಇದೆ. ಆರಂಭದಲ್ಲಿ ಗ್ರಾನೈಟ್‌ನಿಂದ ಅದರನ್ನು ರಚಿಸಲಾಗಿತ್ತು. 1980ರ ದಶಕದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮತ್ತು ತವರ ಹೊದಿಕೆ ಹೊದೆಸಲಾಯಿತು. 

Advertisement

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು: ಆಗಿನ ಕಾಲದಲ್ಲಿಯೇ ಭಾರೀ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಿದ್ದರು ಎಂಬ ಬಗ್ಗೆ ಉಲ್ಲೇಖೀಸಲಾಗಿದೆ. ದೂರದ ಪ್ರದೇಶಗಳಿಂದಲೂ 10-15 ಸಾವಿರ ಮಂದಿ ಭೇಟಿ ನೀಡುತ್ತಿದ್ದರು ಎಂಬ ಪ್ರಸ್ತಾಪವಿದೆ. 

ಸಚಿವರ ಕಾರು ತಡೆದಿಲ್ಲ: ಬುಧವಾರ ಕೇಂದ್ರ ಸಚಿವ ಪೊನ್‌ ರಾಧಾಕೃಷ್ಣನ್‌ರ ಕಾರನ್ನು ತಡೆಯಲಾಗಿತ್ತು ಎಂಬ ವರದಿ ಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರತಿಭಟನಕಾರರು ಸಚಿವರ ಬೆಂಗಾವಲು ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಶಂಕೆ ಹಿನ್ನೆಲೆಯಲ್ಲಿ ಒಂದು ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲಾಗಿತ್ತು. ಆದರೆ ಬಿಜೆಪಿ ಕಾರ್ಯಕರ್ತರು, ಅಲ್ಲಲ್ಲಿ ಸಚಿವರ ಕಾರನ್ನು ತಡೆ ತಪಾಸಣೆ ನಡೆಸಲಾಗಿತ್ತು ಎಂದು ದೂರಿದ್ದಾರೆ. 

ಅರ್ಚಕ ಅಮಾನತು
ಈ ನಡುವೆ, ಸಾಮಾಜಿಕ ಜಾಲತಾಣದಲ್ಲಿ ಕೇರಳ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ವಿರುದ್ಧ ಆಕ್ಷೇಪಾರ್ಹ ಮಾಹಿತಿ ಅಪ್‌ಲೋಡ್‌ ಮಾಡಿದ್ದಕ್ಕಾಗಿ ಕಾಞಂಗಾಡ್‌ಮೈದ್ಯನ್‌ ಕೂಲಂ ಕ್ಷೇತ್ರ ಪಲಕ್ಕ ದೇಗುಲದ ಮುಖ್ಯ ಅರ್ಚಕ ಟಿ.ಮಾಧವನ್‌ ನಂಬೂದಿರಿ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ. ತಾವು ಕ್ಷೇತ್ರದ ಆನುವಂಶಿಕ ಟ್ರಸ್ಟಿಯಾಗಿದ್ದರಿಂದ ಆದೇಶ ಅನ್ವಯವಾಗುವುದಿಲ್ಲ ಎಂದು ನಂಬೂದಿರಿ ಹೇಳಿಕೊಂಡಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next