Advertisement

ವಿಜಯಪುರ:ಮಹಿಳಾ ವಿವಿ ಕುಲಪತಿ ತುಳಸಿಮಾಲಾ ಪದಗ್ರಹಣ

05:44 PM Jan 26, 2021 | Nagendra Trasi |

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಬಿ.ಕೆ. ತುಳಸಿಮಾಲಾ ಸೋಮವಾರ ಹಂಗಾಮಿ ಕುಲಪತಿ ನಾಮದೇವಗೌಡ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ವೇಳೆ ವಿವಿ ಕುಲಸಚಿವೆ ಆರ್‌.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪಿ.ಜಿ. ತಡಸದ,
ಆರ್ಥಿಕ ಅಧಿಕಾರಿ ವಿಜಯಾ ಕೋರಿಶೆಟ್ಟಿ, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಇದ್ದರು.

Advertisement

ಬಿ.ಕೆ. ತುಳಸಿಮಾಲಾ ಕುಲಪತಿಯಾಗಿ ನೇಮಕಗೊಳ್ಳುವ ಮುನ್ನ ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾಗಿ 2018ರಿಂದ ಸೇವೆ ಸಲ್ಲಿಸುತ್ತಿದ್ದರು. 34 ವರ್ಷಗಳ ಸುದೀರ್ಘ‌ ಬೋಧನಾ ಅನುಭವ ಹೊಂದಿರುವ ತುಳಸಿಮಾಲಾ, ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ರೀಡರ್‌, ಪ್ರೊಫೆಸರ್‌ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಅನೇಕ ಕೋಶಗಳ ಮತ್ತು ವಿಭಾಗಗಳ ನಿರ್ದೇಶಕರಾಗಿಯೂ ಕಾರ್ಯ
ನಿರ್ವಹಿಸಿದ್ದಾರೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 22 ಸಂಶೋಧನಾ ಲೇಖನಗಳನ್ನು ಸಂಪಾದಿತ ಕೃತಿಗಳಲ್ಲಿ ಪ್ರಕಟಿಸಿದ್ದಾರೆ. 130ಕ್ಕೂ ಅಧಿಕ ರಾಷ್ಟ್ರೀಯ,  ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ, ಕಾರ್ಯಾಗಾರಗಳಲ್ಲಿ ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ 16 ವಿದ್ಯಾರ್ಥಿಗಳು ಪಿಎಚ್‌ಡಿ ಸಂಶೋಧನೆ ಪದವಿ ಪಡೆದಿದ್ದು, 9 ವಿದ್ಯಾರ್ಥಿಗಳು ಎಂಫಿಲ್‌
ಸಂಶೋಧನಾ ಪದವಿ ಪಡೆದಿದ್ದಾರೆ.

ನವದೆಹಲಿ ಯುಜಿಸಿ, ಕರ್ನಾಟಕ ಸರಕಾರದ ಯೋಜನಾ ಇಲಾಖೆ ಹಾಗೂ ಚಾಮರಾಜನಗರದ ಜಿಪಂ ಅನುದಾನದ ಅಡಿಯಲ್ಲಿ ಅನೇಕ ಪ್ರೊಜೆಕ್ಟ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನವದೆಹಲಿಯ ಕೇಂದ್ರ ಲೋಕಸೇವಾ ಆಯೋಗದಲ್ಲಿ, ಕರ್ನಾಟಕ ಲೋಕ ಸೇವಾ ಆಯೋಗ, ಓಡಿಸ್ಸಾ ಲೋಕ ಸೇವಾ ಆಯೋಗ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಪೊಲೀಸ್‌ ಅಕಾಡೆಮಿ, ಆಕಾಶವಾಣಿ ಹಾಗೂ ಇನ್ನೂ ಅನೇಕ ಸಂಘ-ಸಂಸ್ಥೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಜೊತೆಗೆ 50ಕ್ಕೂ ಹೆಚ್ಚು ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನೇಮಕಾತಿ ಮಂಡಳಿ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಶಿವಮೊಗ್ಗದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ನವದೆಹಲಿ ಕೇಂದ್ರ ಲೋಕಸೇವಾ ಆಯೋಗ, ಕರ್ನಾಟಕ ಲೋಕ ಸೇವಾ ಆಯೋಗ ಸೇರಿದಂತೆ ವಿವಿಧ ನೇಮಕಾತಿ ಮಂಡಳಿ ಹಾಗೂ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next