ಬೆಂಗಳೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಯಲ್ಲೇ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ ಸಹೋದರರಿಬ್ಬರು, ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ನಾಗಲಕ್ಷ್ಮೀ ಬಾಯಿ ಅವರು, ಪ್ರವೀಣ್ ಹಾಗೂ ಪ್ರಶಾಂತ್ ಎಂಬವರ ವಿರುದ್ಧ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ದೂರು ನೀಡಿದ್ದು, ಆಯುಕ್ತರು ಪ್ರಕರಣವನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ನಾಸಾ ವಿಜ್ಞಾನಿ ಎಂದು ಹೇಳಿಕೊಂಡಿದ್ದ ಪ್ರವೀಣ್ 15 ಮಹಿಳೆಯರಿಂದ ಸುಮಾರು 4ರಿಂದ 15 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬ ದೂರು ಆಯೋಗಕ್ಕೆ ಸಲ್ಲಿಕೆಯಾಗಿತ್ತು. ಈ ದೂರಿನ ಅನ್ವಯ ಮೇ 10ರಂದು ಸಂಜೆ ಐದು ಗಂಟೆ ಸುಮಾರಿಗೆ ಆಯೋಗದಲ್ಲಿ ದೂರುದಾರ ಮಹಿಳೆಯರು ಹಾಗೂ ಆರೋಪಿಯ ವಿಚಾರಣೆ ನಡೆಯುತ್ತಿತ್ತು.
ಈ ವೇಳೆ ಆರೋಪಿ ಪ್ರವೀಣ್ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆಗೂ ಯತ್ನಿಸಿ ಬೆದರಿಕೆ ಹಾಕಿದ್ದ. ಆತನ ಸಹೋದರ ಪ್ರಶಾಂತ್, ಕೌನ್ಸೆಲಿಂಗ್‌ಗೆ ಆಗಮಿಸಿದ್ದ ಮಹಿಳೆಯ ಪೋಟೋ ತೆಗೆದು ತೇಜೋವಧೆಗೆ ಯತ್ನಿಸಿದ್ದಾನೆ ಎಂದು ನಾಗಲಕ್ಷ್ಮೀ ಬಾಯಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ದೂರು ಆಧರಿಸಿ ಆರೋಪಿಗಳ ವಿರುದ್ಧ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ, ಅನುಚಿತ ವರ್ತನೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಲಸೂರು ಗೇಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಧ್ಯಕ್ಷೆ ವಿರುದ್ಧವೂ ದೂರು: ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ವೇಳೆ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ, ಬೆದರಿಕೆ ಹಾಕಿ ಮಾನಹಾನಿಯುಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರವೀಣ್, “ಮುಂದಿನ ದಿನಗಳಲ್ಲಿ ತಮಗೆ ಯಾವುದೇ ತೊಂದರೆ ಆದರೂ ಅದಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರೇ ಕಾರಣ’ ಎಂದು ಆಯೋಗಕ್ಕೆ ಕೆಲದಿನಗಳ ಹಿಂದೆ ದೂರು ನೀಡಿದ್ದರು.