ಹೊಸದಿಲ್ಲಿ : “ಸಮಾಜದ ವಿವಿಧ ವರ್ಗಗಳಿಗೆ ಸೇರಿದ ಗಣ್ಯ ಪುರುಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವ ಮಹಿಳೆಯರು ಆತನಿಗೆ ಆಗದವರಿಂದ 2ರಿಂದ 4 ಲಕ್ಷ ರೂ. ಹಣ ತೆಗೆದುಕೊಂಡು ಈ ರೀತಿಯ ಆಪಾದನೆಗಳನ್ನು ಮಾಡುತ್ತಾರೆ; ಅದಾಗಿ ಸ್ವಲ್ಪ ಸಮಯದ ಬಳಿಕ ಅವರು ಮತ್ತೋರ್ವ ಪುರುಷನ ವಿರುದ್ಧ ಅದೇ ರೀತಿಯ ಆರೋಪ ಮಾಡುತ್ತಾರೆ; ಹಣಕ್ಕಾಗಿ ಹೀಗೆ ಕುತಂತ್ರ ಮಾಡುವುದು ಕೆಲವು ಮಹಿಳೆಯರಿಗೆ ಅಭ್ಯಾಸವಾಗಿ ಹೋಗಿದೆ’ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಅವರು “ಮೀ ಟೂ ಮಹಿಳಾ ಆಂದೋಲನದ’ ಬಗ್ಗೆ ಹೇಳಿದ್ದಾರೆ. ಅಂತೆಯೇ ಈ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿ ವೈರಲ್ ಆಗಿವೆ.
“ಮಹಿಳೆಯರನ್ನು ದೈಹಿಕ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಪುರುಷರ ಸ್ವಭಾವ ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗೆಂದು ಮಹಿಳೆಯರು ಸರಿಯಾಗಿದ್ದಾರಾ ? ಈ ರೀತಿಯ ಮೀ ಟೂ ಆಂದೋಲನವನ್ನು ಅವರು ದುರ್ಬಳಕೆ ಮಾಡುತ್ತಿದ್ದಾರೆ. ಇದರಿಂದ ಪುರುಷನ ಬದುಕು ಸರ್ವನಾಶವಾಗಿ ಹೋಗುತ್ತದೆ’ ಎಂದು ಉದಿತ್ ರಾಜ್ ಹೇಳಿದರು.
ದಶಕದ ಬಳಿಕ ಚಿತ್ರ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿ ತನುಶ್ರೀ ದತ್ತಾ ವಿರುದ್ಧ ಉದಿತ್ ರಾಜ್ ಕಟು ಟೀಕೆ ಮಾಡಿದರು.
ಮೀ ಟೂ ನಂತಹ ಮಹಿಳಾ ಆಂದೋಲನವೇ ತಪ್ಪು ಎಂದು ಉದಿತ್ ರಾಜ್ ಹೇಳಿದರು. ತನುಶ್ರೀ ದತ್ತಾ ಪ್ರಕರಣದಲ್ಲಿ 10 ವರ್ಷಗಳ ಬಳಿಕ ಪಾಟೇಕರ್ ವಿರುದ್ಧ ಆರೋಪ ಮಾಡಲಾಗಿದೆ. ಇಷ್ಟು ವರ್ಷಗಳ ಬಳಿಕ ಸತ್ಯವನ್ನು ಪರಾಮರ್ಶಿಸಲು ಸಾಧ್ಯವೇ ? ಎಂದು ಉದಿತ್ ರಾಜ್ ಪ್ರಶ್ನಿಸಿದರು.
ಇದೇ ವೇಳೆ ಬಾಲಿವುಡ್‌ನ ಹಲವು ತಾರೆಯರು ತನುಶ್ರೀ ದತ್ತಾ ಅವರನ್ನು ಬೆಂಬಲಿಸಿದ್ದು ಕೇಂದ್ರ ಮಹಿಳಾ ಮತ್ತು ಶಿಶು ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ “ಮೀ ಟೂ ಆಂದೋಲನ ಭಾರತದಲ್ಲಿ ಆರಂಭವಾಗಿರುವುದು ಸ್ವಾಗತಾರ್ಹವಾಗಿದೆ’ ಎಂದು ಹೇಳಿದ್ದಾರೆ.