ಕೊಪ್ಪಳ : ನಾವು ಈ ದೇಶದವರು ಅಲ್ವೇನ್ರಿ.. ? ನಾವೇನು ಬೇರೆ ದೇಶದಿಂದ ಬಂದಿವೇನ್ರಿ ? ಸರ್ಕಾರ ಸಾರಿಗೆ ನೌಕರರಿಗೆ ಯಾಕೆ 6ನೇ ವೇತನ ಕೊಡ್ತಾ ಇಲ್ಲ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಎಸಿಯಲ್ಲಿ ಕುಳಿತು ಮಾತಾಡ್ತಾರೆ. ನಮ್ಮ ಕಷ್ಟ ಅವರಿಗೇನು ಗೊತ್ತು, ಬಂಗಾರ ಒತ್ತೆ ಹಿಟ್ಟು ನಾವೂ ಜೀವನ ಮಾಡಬೇಕಾದ ಸ್ಥಿತಿ ಬಂದೈತಿ. ನಮಗೆ 6ನೇ ವೇತನ ಜಾರಿಯಾಗೋವರೆಗೂ ಹೋರಾಟ ಮಾಡ್ತೇವೆ ಎಂದು ಸಾರಿಗೆ ನೌಕರರ ಪತ್ನಿಯಂದಿರು ಅಧಿಕಾರಿಗಳ ಮುಂದೆ ತಮ್ಮ ನೋವು ಹೇಳಿಕೊಂಡ ಪ್ರಸಂಗ ಕೊಪ್ಪಳ ಜಿಲ್ಲೆಯ ಕುಕನೂರು ಸಾರಿಗೆ ಡೀಪೋ ವ್ಯಾಪ್ತಿಯಲ್ಲಿ ನಡೆದಿದೆ.
ಕುಕನೂರು ನಗರದಲ್ಲಿನ ಚಾಲಕರ ಮನೆಗಳಿಗೆ ಡೀಪೋ ಇನ್ಸ್ ಪೆಕ್ಟರ್ ಬಸವರಾಜ ಹಾಗೂ ಸವಿತಾ ಅವರು ತೆರಳೀ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ ವೇಳೆ ಚಾಲಕರ ಕುಟುಂಬದ ಮಹಿಳೆಯರು ಅವರನ್ನೇ ತರಾಟೆ ತಗೆದುಕೊಂಡ ಪ್ರಸಂಗ ನಡೆದಿದೆ.
ನಮಗೆ ಯಾಕೆ ಇಷ್ಟು ಅನ್ಯಾಯ ಮಾಡ್ತಾರೆ. ನಾವೇನು ಬೇರೆ ದೇಶದಿಂದ ಬಂದಿವೇನ್ರಿ.. ನಮ್ಮ ಸಮಸ್ಯೆಗಳನ್ನ ಪೂರೈಸಿದರೆ ಸಾರಿಗೆ ನೌಕರರು ಕೆಲಸಕ್ಕೆ ಬರುತ್ತಾರೆ. ಮಕ್ಕಳನ್ನ ಕಟ್ಟಿಕೊಂಡು ಹ್ಯಾಂಗ್ ಜೀವನ ಮಾಡಬೇಕು ? ಸಚಿವ ಲಕ್ಷ್ಮಣ ಸವದಿ ಅವರು ಬೆಳಗ್ಗೆ ಎದ್ದು ಬಸ್ ಒಳಗೆ ಅಡ್ಡಾಡಿ ಒಂದ್ಸಲ ನೋಡ್ಲಿ.. ಒಂದ್ ದಿನ ಬಸ್ ಡ್ಯೂಟಿ ಮಾಡ್ಲಿ ಅವರಿಗೆ ಚಾಲಕರ ಕಷ್ಟ ಎಷ್ಟು ಐತಿ ಅನ್ನೋದು ಗೊತ್ತಾಗುತ್ತೆ. ಬಿಸಲು, ನೆರಳು ಅನ್ನಂಗಿಲ್ಲ ಹಂಗ ನಮ್ಮ ಸಾರಿಗೆ ನೌಕರರು ಕೆಲಸ ಮಾಡ್ತಾರಾ.
ಇಷ್ಟೆಲ್ಲಾ ಕೆಲಸ ಮಾಡಿದ್ರೂ ಅವರಿಗೆ ನೆಮ್ಮದಿ ಅನ್ನೋದೆ ಇಲ್ಲ. ಎಂತಾ ಸಂಕಷ್ಟ ಇದ್ರೂ ಚಾಲಕರು ಮನೆ ಬಿಟ್ಟು ಡ್ಯೂಟಿ ಮಾಡ್ತಾರ. ಹಬ್ಬ ಹರಿದಿನ ಬಂದ್ರೂ ಮನೆಗೆ ಇರಲ್ಲ. ಡ್ಯೂಟಿ ಮಾಡ್ತಾರಾ. ಮಕ್ಕಳಗೆ ಚೆಂದಗ ಬಟ್ಟಿ ಕೊಡಸಾಕ ಆಗುವಲ್ದು.. ದೀಪಾವಳಿಗೆ ಪಗಾರಾನ ಬರಲಿಲ್ಲ. ನಾವು ಏನು ಮಾಡ್ಬೇಕು. ನಮ್ಮ ಮಕ್ಳನ್ನ ಮನ್ಯಾಗ ಕೂಡಿ ಹಾಕಿದ್ವಿ. ಬಂಗಾರ ಒತ್ತಿ ಇಟ್ಟು ಜೀವನ ಮಾಡೋ ಪರಿಸ್ಥಿತಿ ಬಂದೈತಿ.ಇನ್ನೊಬ್ಬರ ಮಕ್ಕಳನ್ನ ನೋಡಿ ನಮ್ಮ ಮಕ್ಕಳನ್ನ ನೋಡಿ ನಮಗೆ ಕಣ್ಣಾಗ ನೀರು ಬರ್ತಾವ.
ಎಲ್ಲರೂ ನಮಗ ಸರ್ಕಾರಿ ನೌಕರರು ಅಂತಾರ.. ಆದ್ರ ಅದರ ತಕ್ಕಂತ ಸಂಬಳನಾ.. ಇಲ್ಲ. ನಾವು ಇದರ ಮ್ಯಾಲ ಜೀವನ ಹೆಂಗ ಮಾಡಬೇಕು. ನಮಗೆ ಸ್ಕಾಲರ್‌ಶಿಪ್ ಇಲ್ಲ. ರೇಷನ್ ಕಾರ್ಡ್ ಇಲ್ಲ. ಹಿಂಗಾದ್ರ ನಾವು ಹ್ಯಾಂಗ್ ಜೀವನ ಮಾಡಬೇಕು. ನಮಗ 6ನೇ ವೇತನ ಜಾರಿ ಆಗಬೇಕು. ನಮ್ಮ ಮಗಳು ಶಾಲಾಗ್ಯ ಎಲ್ಲದ್ರಾಗೂ ಮುಂದ್ ಅದಾಳ. ಆದ್ರ ಪಗಾರ ಕಡಿಮೆ ಇರೋದ್ಕ ಮುಂದ ಓದಿಸೋಕ ಆಗವಲ್ದು.. ಏನು ಮಾಡಬೇಕು ನೀವಾ ಹೇಳ್ರೀ.. ನಮ್ಮ ಮಕ್ಕಳ ಎಸ್‌ಎಸ್‌ಎಲ್‌ಸಿ ಮುಗಿಸೋದು ಮನ್ಯಾಗ ಕೂಡಿಸೋ ಸ್ಥಿತಿ ಬಂದೈತಿ. ನಮ್ಮ ಯಜಮಾನ್ರು 24 ತಾಸು ಕೆಲಸ ಮಾಡ್ತಾರಾ. ರಜೆನೂ ಇಲ್ಲಾ.. ಸವದಿ ಅವರು ಇನ್ನಾದ್ರೂ ನಮ್ಮ ಕಷ್ಟ ನೋಡ್ಲಿ. ಸಾರಿಗೆ ನೌಕರರಿಗೆ 6ನೇ ವೇತನ ಕೊಡ್ಲಿ ಎಂದು ಒತ್ತಾಯಿಸಿದ್ರಲ್ಲದೇ, ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡ ವೀಡಿಯೋ ಎಲ್ಲೆಡೆಯೂ ವೈರಲ್ ಆಗಿದೆ.