ಸಿಂದಗಿ: ಹೆಣ್ಣು ಇಂದು ಎಲ್ಲ ರಂಗದಲ್ಲೂ ಸಾಧನೆ ಮೆರೆದಿದ್ದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಅಬಲೆ ಅಲ್ಲ ಸಬಲೆ ಎಂಬುದನ್ನು ಸಾಬೀತು ಮಾಡಿದ್ದಾಳೆ ಎಂದು ಸಂಗಮ ಸಂಸ್ಥೆ ನಿರ್ದೇಶಕ ಆಲ್ವಿನ್ ಡಿಸೋಜಾ ಹೇಳಿದರು.
ಪಟ್ಟಣದ ಸಂಗಮ ಸಂಸ್ಥೆ ಸಭಾಭವನದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಸಿಂದಗಿ ತಾಲೂಕು ಸ್ಫೂರ್ತಿ ಮಹಿಳಾ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳೆಯರಿಗೆ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆ ಕಾಲೇಜುಗಳ ಶಿಕ್ಷಣ, ಫಲಿತಾಂಶಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ. ಆದರೆ ಮುಂದೆ ಉದ್ಯೋಗಶೀಲರನ್ನಾಗಿಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರೋತ್ಸಾಹದ ಅಗತ್ಯವಿದೆ. ಮಹಿಳೆಗೆ ಸಮಾನ ಅವಕಾಶಗಳನ್ನು ಇತರರು ಕೊಡುವುದಲ್ಲ, ಅದು ಪ್ರತಿಯೊಬ್ಬ ಮಹಿಳೆಯ ಹಕ್ಕು. ಅನೇಕ ಮಹಿಳೆಯರು ಕುಟುಂಬ, ಸಂಸಾರಕ್ಕಾಗಿ ತ್ಯಾಗ ಮಾಡುತ್ತಾರೆ. ಶಿಕ್ಷಣ ಪಡೆಯುವಾಗ ಉತ್ತಮ ಸಾಧನೆ ಮಾಡುವ ಮಹಿಳೆಯರು ಮದುವೆ ನಂತರವೂ ಸಾಧನೆಯ ಪಥದಿಂದ ವಿಮುಖರಾಗಬಾರದು. ಸುಸ್ಥಿರ ಅಭಿವೃದ್ಧಿಗೆ ಸಮಾನತೆ ಎಲ್ಲ ರಂಗಗಳಲ್ಲಿ ಬರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಇನ್ನರ್ ವ್ಹಿಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಮಾತನಾಡಿ, ಮಹಿಳೆಯರು ಪ್ರತಿ ನಿತ್ಯ ಮನೆಯ ಒಳಗೆ ಮತ್ತು ಸಮಾಜದ ಅಂಗಳದಲ್ಲಿ ಹೋರಾಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎರಡು ಪಟ್ಟು ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಒಬ್ಬ ಹೆಣ್ಣು ಮತ್ತೂಬ್ಬ ಸ್ತ್ರೀಯನ್ನು ಪ್ರೋತ್ಸಾಹಿಸುವ ಮನೋಭಾವ ಕುಟುಂಬಗಳಲ್ಲಿ ಬೆಳೆಯಬೇಕು. ಮಹಿಳೆಯರ ವಿಕಾಸವಾದರೆ ಇಡಿ ಕುಟುಂಬ ವಿಕಾಸವಾದಂತೆ ಎಂದು ಹೇಳಿದರು.
ಸಂಗಮ ಸಂಸ್ಥೆ ಸಹ ನಿರ್ದೇಶಕಿ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಮಹಿಳೆ ಸಮಾಜದ ಶಕ್ತಿಯಾಗಿದ್ದು ಕುಟುಂಬದ ಕಣ್ಣು ಕೂಡ ಆಗಿದ್ದಾಳೆ. ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. ಎಲ್ಲ ಕ್ಷೇತ್ರಗಳಲ್ಲೂ ಸಾಧನೆಯ ಛಾಪು ಮೂಡಿಸಿದ್ದಾಳೆ. ಹಿಂದೆ ಬೆರಳಣಿಕೆಯಷ್ಟು ಮಹಿಳೆಯರು ಮನೆಯಿಂದ ಹೊರ ಬಂದು ದುಡಿಯುತ್ತಿದ್ದರು. ಈಗ ಗಡಿ ಕಾಯುವುದರಿಂದ ಹಿಡಿದು ಕುಟುಂಬದ ಪ್ರತಿ ಕೆಲಸವನ್ನೂ ಅತ್ಯಂತ ಸಮರ್ಥವಾಗಿ ಮಹಿಳೆ ನಿರ್ವಹಿಸುತ್ತಿದ್ದಾಳೆ. ಪ್ರತಿ ಕೆಲಸವನ್ನೂ ನಿರ್ವಹಿಸುವ ಶಕ್ತಿ, ತಾಳ್ಮೆ, ಉತ್ಸಾಹ ಮಹಿಳೆಗಿದೆ ಎಂದರು.
ಇದರ ಮಧ್ಯೆಯೂ ಕೌಟುಂಬಿಕ ದೌರ್ಜನ್ಯಕ್ಕೆ ಹಲವು ಮಹಿಳೆಯರು ಬಲಿಯಾಗುತ್ತಿದ್ದು, ಅವರಿಗೆ ಧೈರ್ಯ ತುಂಬಿ, ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಮಹಿಳೆಯ ಸಾಮರ್ಥ್ಯ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಗೌರವಿಸುವ ಹಾಗೂ ಆಕೆಯನ್ನು ಗೌರವ ಯುತವಾಗಿ ನಡೆಸಿಕೊಳ್ಳುವುದು ನಾಗರಿಕ ಸಮಾಜದ ಮುಖ್ಯ ಗುಣವಾಗಿರಬೇಕು. ಮಹಿಳೆಯರು ಸಂವಿಧಾನ ನೀಡಿರುವ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎಸ್.ಕೆ. ಮಣೂರ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಶಾರದಾ ಮಂಗಳೂರ, ಜಯಶ್ರೀ ಹದನೂರ ಸೇರಿದಂತೆ ಸಂಗಮ ಸಂಸ್ಥೆ ಎಲ್ಲ ಕಾರ್ಯಕರ್ತೆಯರನ್ನು ಇದ್ದರು. ಸ್ಫೂರ್ತಿ ಒಕ್ಕೂಟದ ಅಧ್ಯಕ್ಷೆ ಸವಿತಾ ಇವಣಿ ಸ್ವಾಗತಿಸಿದರು. ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು. ವಿಜಯ ಬಂಟನೂರ ವಂದಿಸಿದರು.