ಸೈದಾಪುರ: ಮೊರಾಜಿ ವಸತಿ ಶಾಲಾ ಕಟ್ಟಡದ ಕಾಮಗಾರಿಕೆ ಉತ್ತಮ ಗುಣಮಟ್ಟ ಕಾಯ್ದುಕೊಂಡು ಸಮಯ ಅಪವ್ಯಯ
ಮಾಡದೆ, ಕಟ್ಟಡ ಶೀಘ್ರ ಪೂರ್ಣಗೊಳಿಸಿ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಗುತ್ತಿಗೆದಾರರ ಹಾಗೂ ಇಂಜಿನಿಯರ್ ಅವರಿಗೆ ಸೂಚಿಸಿದರು.
ಬಾಲಛೇಡ ಸಮೀಪ ನಿರ್ಮಾಣ ಆಗುತ್ತಿರುವ ಸುಮಾರು 25 ಕೋಟಿ ವೆಚ್ಚದಲ್ಲಿ ನೂತನ ಮೊರಾಜಿ ವಸತಿ ಶಾಲಾ ಕಟ್ಟಡದ
ಕಾಮಗಾರಿಕೆಯನ್ನು ಪರಿಶೀಲನೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ, ಶುದ್ಧ ಕುಡಿಯುವ ನೀರು, ರಸ್ತೆ, ಉದ್ಯೋಗ, ವಸತಿ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಪ್ರತಿ ಗ್ರಾಮಗಳಲ್ಲಿ ಸಿ.ಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಆ ಮೂಲಕ ಮಹಿಳೆಯರು, ಮಕ್ಕಳು, ವಯೋವೃದ್ಧರ ಸಂಚಾರಕ್ಕೆ ಅನುಕೂಲ ಮಾಡಿ ಕೊಡಲಾಗಿದೆ ಎಂದರು.
ಇನ್ನೂ ಹೆಚ್ಚಿನ ಕೆಲಸಗಳೊಂದಿಗೆ ಈ ಭಾಗದ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರನ್ನಾಗಿ ಮಾಡಬೇಕಾಗಿದೆ. ಇದಕ್ಕಾಗಿ ನೀರಾವರಿ ಯೋಜನೆ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ವಿವಿಧ ಜವಪರ ಕಾರ್ಯಕ್ರಮ ಅಸ್ಥಿತ್ವಕ್ಕೆ ತರುವ ಪ್ರಯತ್ನ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಅವರ ನೆರವಿನಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಇದರ ಬಗ್ಗೆ ಕಾರ್ಯಕರ್ತರು ಗ್ರಾಮಸ್ಥರಿಗೆ ತಿಳಿಸುವ ಕೆಲಸ ಮಾಡಬೇಕು. ಆ ಮೂಲಕ ಮುಂದಿನ ದಿನದ ಚುನಾವಣೆಯಲ್ಲಿ ನಾನು ಮಾಡಿದ ಕೆಲಸ ಮತದಾರರು ಗುರುತಿಸುವಂತಾಗಬೇಕು ಎಂದು ಹೇಳಿದರು.
ಮುಖಂಡರಾದ ಭೀಮರಡ್ಡಿ ಪಾಟೀಲ ಶೇಟ್ಟಳ್ಳಿ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಚಂದ್ರಶೇಖರ ವಾರದ, ಗ್ರಾಪಂ ಸದಸ್ಯ ಮಾಹಾದೇವಪ್ಪ ದದ್ದಲ, ರಾಘವೇಂದ್ರ ಸಂಭ್ರ, ಕೈಲಾಸ ಆಸ್ಪಲ್ಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.