ಬಳ್ಳಾರಿ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದಾಗ ಮಾತ್ರ ಸಮಾಜದಲ್ಲಿ ವ್ಯವಹಾರಗಳನ್ನೂ ಸಮಾನವಾಗಿ ನಿರ್ವಹಣೆ ಮಾಡಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಸತ್ಯ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಎಚ್.ಎಸ್. ಪುಷ್ಪಾಂಜಲಿ ದೇವಿ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಫರ್ಟ್ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್, , ಶ್ರೀರಕ್ಷಾ ಫೌಂಢೇಷನ್, ಇನ್ನರ್‌ವೀಲ್ ಕ್ಲಬ್, ಬಳ್ಳಾರಿ ಮಿಕ್ಸಿಂಗ್ ಲೇಡಿಸ್ ಆಂಡ್ ರೌಂಡ್ ಟೇಬಲ್, ಜೀತೋ ಲೇಡೀಸ್ ವಿಂಗ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇಂಫ್ಯಾಕ್ಟ್ ವಾಕೊಥಾನ್-ಶಾಲೆಯನ್ನು ಹೆಣ್ಣು ಮಗುವಿನ ಬಳಿಗೆ ಕರೆದೊಯ್ಯುವ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ| ಮೋಹನ ಪವನ್‌ಕುಮಾರ್ ಮಾಲಪಾಟಿ ಮಾತನಾಡಿ, ಒಂದು ಹೆಣ್ಣು ಮಗುವಿನ ಸರ್ವಾಂಗೀಣ ಅಭಿವೃದ್ಧಿ ಆಗಬೇಕೆಂದರೆ ಅವಳ ಹದಿಹರೆಯ ವಯಸ್ಸಿನಲ್ಲಿಯೇ ಅವಳ ಆರೋಗ್ಯ ಮತ್ತು ಮಾನಸಿಕ ಸದೃಢತೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಅವಳ ಎಲ್ಲ ಜವಾಬ್ದಾರಿಯನ್ನು ಪೋಷಕರು ತೆಗೆದುಕೊಳ್ಳುವುದು ಅತ್ಯವಶ್ಯಕ. ಅದರ ಜೊತೆ ದೇಶದ ಎಲ್ಲ ಸಂಘಸಂಸ್ಥೆಗಳು ಕೈಜೋಡಿಸಬೇಕು ಎಂದು ಕೋರಿದರು.
ಮಕ್ಕಳ ತಜ್ಞ ಡಾ| ಬಿ.ಕೆ. ಶ್ರೀಕಾಂತ್ ಮಾತನಾಡಿ, ಆರೋಗ್ಯವಂತ ಕುಟುಂಬ ಎಂದರೆ ಅಲ್ಲಿಯ ಹೆಣ್ಣು ಮಗು ಮತ್ತು ಮಹಿಳೆಯರು ಶಿಕ್ಷಿತರಾಗಿರುವುದು. ಇದರಿಂದ ದೇಶವು ಸುಶಿಕ್ಷಿತವಾಗುತ್ತದೆ ಎಂದು ಹೇಳಿದರು.
ಫ್ಯಾಮಿಲಿ ಪ್ಲಾನಿಂಗ್‌ನ ಅಧ್ಯಕ್ಷ ಟಿ.ಜಿ. ವಿಠ್ಠಲ್ ಮಾತನಾಡಿ, ನಮ್ಮ ಸಂಸ್ಥೆಯು ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ, ಹಕ್ಕು ಮತ್ತು ಕೌಶಲ್ಯಾಭಿವೃದ್ಧಿಗೆ ರಾಷ್ಟ್ರಮಟ್ಟದ ವಾಕೋಥಾನ್ ಮೂಲಕ ದೇಣಿಗೆ ಸಂಗ್ರಹಿಸಿ, ಅನೇಕ ಕಾರ್ಯಕ್ರಮ ರೂಪಿಸುವ ಮೂಲಕ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯವಶ್ಯಕ ಎಂದರು.
ಈ ಕಾರ್ಯಕ್ರಮದಲ್ಲಿ ಎಸ್. ವಿಜಯಸಿಂಹ, ಡಾಕ್ಟರ್ ಚಂದನ, ಸುಚರಿತ, ಭಾಗ್ಯ ಉಪಸ್ಥಿತರಿದ್ದರು. ವಾಕೊಥಾನ್‌ನಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶಾಖಾ ವ್ಯವಸ್ಥಾಪಕಿ ಎಸ್. ವಿಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನರ್‌ವೀಲ್ ಸಂಸ್ಥೆ ಅಧ್ಯಕ್ಷೆ ರೂಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.