Advertisement

ಮೆಟ್ರೋ ರೈಲಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ

11:08 AM Dec 07, 2019 | Team Udayavani |

ಬೆಂಗಳೂರು: ಹೈದರಾಬಾದ್‌ ಸೇರಿ ಇತ್ತೀಚಿನ ದಿನಗಳಲ್ಲಿ ನಡೆದ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬೆನ್ನಲ್ಲೇ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ರಾತ್ರಿ 10ರ ನಂತರ ಪ್ರತಿ ರೈಲಿನಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ.

Advertisement

ಸಾಮಾನ್ಯವಾಗಿ ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗಾಗಿ ಮೀಸಲಿರುವ ಬೋಗಿಗಳಲ್ಲಿ ರಾತ್ರಿ 9.30ರ ನಂತರ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ಅಸುರಕ್ಷತೆ ಕಾಡುತ್ತದೆ. ಆದ್ದರಿಂದ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜಿಸುತ್ತಿದ್ದು, ಡಿ.3ರಿಂದಲೇ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್‌ ಸ್ಪಷ್ಟಪಡಿಸಿದ್ದಾರೆ.

ಮೆಟ್ರೋ ರೈಲಿನಲ್ಲಿ ನಿತ್ಯ ಸರಾಸರಿ 4 ಲಕ್ಷ ಜನ ಪ್ರಯಾಣಿಸುತ್ತಾರೆ. ಈ ಪೈಕಿ ಮಹಿಳಾ ಪ್ರಯಾಣಿಕರ ಪ್ರಮಾಣ ಶೇ 31 ಇದ್ದು, ಮೂರು ಬೋಗಿಗಳ ರೈಲಿನಲ್ಲಿ ಮೊದಲ ಎರಡು ಪ್ರವೇಶ ದ್ವಾರಗಳನ್ನು ಮೀಸಲಿಡಲಾಗಿದೆ. ಇನ್ನು ಆರು ಬೋಗಿಗಳ ರೈಲಿನಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ಮಧ್ಯೆ ಮಹಿಳೆಯರಿಗಾಗಿ ಮೀಸಲಿಟ್ಟಿರುತ್ತಿದ್ದ ಬೋಗಿಗಳನ್ನು ಪ್ರವೇಶಿಸುತ್ತಿದ್ದ ಕೆಲವು ಪುರುಷರು ರಾತ್ರಿ ವೇಳೆ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಹಲವು ದೂರುಗಳು ಬಂದಿದ್ದವು. ಹೀಗಾಗಿ, ರಾತ್ರಿ 10ರ ನಂತರ ಪ್ರಯಾಣಿಸುವ ಎಲ್ಲ ರೈಲುಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದೂ ಅವರು ಹೇಳಿದರು. ಬೋಗಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ. ಮುಖ್ಯವಾಗಿ ರಾತ್ರಿ ವೇಳೆ ದಾಖಲಾದ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next