Advertisement

ಮಹಿಳೆಯರಿಗೆ ಆತ್ಮ ರಕ್ಷಣೆ ಕಲೆ ಅವಶ್ಯ

12:37 PM Feb 09, 2022 | Team Udayavani |

ಯಾದಗಿರಿ: ಸಮಾಜದಲ್ಲಿ ಮಹಿಳೆ ಮತ್ತು ಪುರುಷರು ಸರಿಸಮಾನರು. ಮಾನಸಿಕವಾಗಿ ಮಹಿಳೆಯರು, ದೈಹಿಕವಾಗಿ ಪುರುಷರು ಸದೃಢರು. ಹೀಗಾಗಿ ಸಮಾಜದಲ್ಲಿ ಇಬ್ಬರ ಪಾತ್ರ ಅತೀ ಅಮೂಲ್ಯವಾದದ್ದು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಲ್ಲಿ ನಗರದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ನಡೆದ ಓಬವ್ವ ಆತ್ಮರಕ್ಷಣಾ ಕಲೆಯ ಕೌಶಲ್ಯ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ರಾಜ್ಯದಲ್ಲಿ ಮೊಟ್ಟ ಮೊದಲು ವಸತಿನಿಲಯದ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕಲೆ ಕಲಿಸುವ ನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯ ತಡೆಯಬೇಕಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ರಕ್ಷಣೆ ಕೊರತೆ ಇರುವ ಕಾರಣ ಅಪರಾಧ ಹೆಚ್ಚಾಗುವ ಸಂಭವವಿದೆ. ಹೀಗಾಗಿ ಮಹಿಳೆಯರು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಆತ್ಮರಕ್ಷಣೆ ಕಲೆ ಕಲಿಯಬೇಕಾಗಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಶಿಕ್ಷಣ ಪಡೆದು ಉದ್ಯೋಗಿಯಾಗಬೇಕು ಎಂದರು.

ಮಹಿಳೆಯರ ರಕ್ಷಣೆಗೆ ಪುರುಷರು ಧಾವಿಸಬೇಕು, ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳಿಗೆ ಸಭ್ಯತೆಯ ಪಾಠ ಕಲಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಯೂರಲು ಸಾಧ್ಯವಾಗುತ್ತದೆ ಎಂದರು.

ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ತನ್ನ ಯಜಮಾನ ಊಟ ಮಾಡುವಾಗ ಆತನಿಗೆ ತೊಂದರೆ ಕೊಡಬಾರದೆಂದು ತಾನೇ ಯುದ್ಧ ಮಾಡಿದ ವೀರವನಿತೆ ಒಣಕೆ ಓಬವ್ವ ಅವರ ಹೆಸರನ್ನು ಕರಾಟೆ ತರಬೇತಿ ಕಾರ್ಯಕ್ರಮಕ್ಕೆ ಇಟ್ಟಿರುವುದು ಐತಿಹಾಸಿಕವಾಗಿದೆ. ಎಲ್ಲ ಮಹಿಳೆಯರು ಆತ್ಮರಕ್ಷಣೆಗಾಗಿ ಕರಾಟೆ ಕಲಿಯಬೇಕು. ಈ ಕಲೆ ಬೇರೆ ದೇಶದಿಂದ ಬಂದಿದ್ದಲ್ಲ. ಇದು ನಮ್ಮ ದೇಶದಲ್ಲಿಯೇ ಶುರುವಾದ ಕಲೆಯಾಗಿದೆ. ಆತ್ಮರಕ್ಷಣೆ ಕಲೆಗೆ ಶಿಕ್ಷಣದಷ್ಟೇ ಮಹತ್ವ ನೀಡಿ. ಯಾರಿಗಾದರೂ ಸಮಸ್ಯೆಯಾದರೆ ನಮ್ಮ ಕುಟುಂಬದ ಸದಸ್ಯರಿಗೆ ಸಮಸ್ಯೆಯಾದಂತೆ ಎಂದು ಭಾವಿಸಿದಾಗ ಮಾತ್ರ ನಾವೆಲ್ಲರೂ ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ ಎಂದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯಬಾರದು. ಮಹಿಳೆಯರು ತಾವು ಮನೆಯಿಂದ ಹೊರಗೆ ಬರುವಾಗ ಕಾರದಪುಡಿ ಮತ್ತು ಪೆಪ್ಪರ್‌ ಸ್ಪೈಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿರಬೇಕು. ಯಾರಾದರೂ ದಾರಿಯಲ್ಲಿ ದೌರ್ಜನ್ಯ ಎಸಗಲು ಬಂದರೆ ತಪ್ಪಿಸಿಕೊಳ್ಳಬಹುದಾದ ಉಪಾಯವಾಗಿದೆ ಎಂದ ಅವರು, ನಿಮ್ಮ ರಕ್ಷಣೆ ನಿಮ್ಮ ಕೈಯಲ್ಲಿದೆ. ಜಿಲ್ಲಾ ಪೊಲೀಸ್‌ ವತಿಯಿಂದ ಮಹಿಳಾ ರಕ್ಷಣಾಪಡೆ ವಾಹನ ಎಲ್ಲ ಕಡೆ ಸಂಚರಿಸುತ್ತಿರುತ್ತದೆ. ಕರಾಟೆ ತರಬೇತಿಯನ್ನು ಎಲ್ಲರೂ ಕಲಿಯಿರಿ. ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಎಂದರು.

ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್‌, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸವ ಎಸ್‌., ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ಇತರರಿದ್ದರು. ಗುರುಪ್ರಸಾದ್‌ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next