Advertisement

ಮಹಿಳೆಯರ ಮನ್‌ ಕಿ ಬಾತ್‌

12:14 PM Jul 06, 2019 | mahesh |

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ ಮುಂದಿನ ಐದು ವರ್ಷಗಳ ಮೋದಿ ಸರ್ಕಾರದ ಆಡಳಿತಕ್ಕೆ ವೇದಿಕೆ ಸೃಷ್ಟಿಸಿಕೊಡಲಿದೆ. ಎಲ್ಲಾ ವಲಯಕ್ಕೂ ಬಜೆಟ್‌ನ ಬಗ್ಗೆ ಕುತೂಹಲ-ನಿರೀಕ್ಷೆಗಳು ಇವೆ. ಈ ಬಾರಿಯ ಬಜೆಟ್ನಿಂದ ಮಹಿಳೆಯರ ನಿರೀಕ್ಷೆಗಳೇನಿವೆ ಎನ್ನುವುದರ ಕಿರುನೋಟ ಇಲ್ಲಿದೆ…

Advertisement

ತಮಿಳುನಾಡಿನ ಮದುರೈ ಮೂಲದವರಾದ ನಿರ್ಮಲಾ ಸೀತಾರಾಮನ್‌, 1984ರಲ್ಲಿ ಪ್ರತಿಷ್ಠಿತ ಜವಾಹರ್‌ಲಾಲ್ ನೆಹರೂ(ಜೆಎನ್‌ಯು) ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಎಂ.ಫಿಲ್ ಪಡೆದವರು. ಡಾ. ಪರಕಾಲ ಪ್ರಭಾಕರ್‌ರೊಂದಿಗೆ ಮದುವೆಯ ನಂತರ 1986ರಲ್ಲಿ ಲಂಡನ್‌ಗೆ ತೆರಳಿದ ಸೀತಾರಾಮನ್‌ ಅಲ್ಲಿನ ವಿತ್ತ ಸೇವಾ ಸಂಸ್ಥೆ ಪ್ರೈಸ್‌ವಾಟರ್‌ ಹೌಸ್‌ ಕೂಪರ್ಸ್‌ನಲ್ಲಿ ಹಿರಿಯ ನಿರ್ವಾಹಕರಾಗಿ ಕೆಲಸ ಮಾಡಿದರು, ಕೆಲ ಕಾಲ ಬಿಬಿಸಿ ವರ್ಲ್ಡ್ ನಲ್ಲಿಯೂ ಅನುಭವ ಪಡದು ಭಾರತಕ್ಕೆ ಹಿಂದಿರುಗಿದರು. 2003ರಲ್ಲಿ ಪ್ರಧಾನಿ ವಾಜಪೇಯಿ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಭಾಗವಾಗಿ, ನಂತರ ಬಿಜೆಪಿಯ ವಕ್ತಾರೆಯಾಗಿ..ಹೀಗೆ ವರ್ಷದಿಂದ ವರ್ಷಕ್ಕೆ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಬಂದವರು.

ಸೆಪ್ಟೆಂಬರ್‌ 2017ರಲ್ಲಿ 60 ವರ್ಷದ ನಿರ್ಮಲಾ ಸೀತಾರಾಮನ್‌ ದೇಶದ ಮೊದಲ ಪೂರ್ಣಾವಧಿ ಮಹಿಳಾ ರಕ್ಷಣಾ ಸಚಿವರಾದರು. ಆದಾಗ್ಯೂ, ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಮೂವರು ನಾಯಕರು ರಕ್ಷಣಾ ಇಲಾಖೆಯನ್ನು ಮುನ್ನಡೆಸಿದರಾದರೂ, ನಿರ್ಮಲಾ ಸೀತಾರಾಮನ್‌ ಮಾತ್ರ ರಕ್ಷಣಾ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆಗೆ ಮುನ್ನುಡಿ ಬರೆದರು. ಅವರ ಅವಧಿಯಲ್ಲೇ ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಹೊಸ ರಕ್ಷಣಾ ಇಂಡಸ್ಟ್ರಿಯಲ್ ಕಾರಿಡಾರ್‌ಗಳ ಆರಂಭವಾಯಿತು.

ಈ ಹಿಂದೆ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಸೇವೆ ಸಲ್ಲಿಸಿದ್ದರು ಮತ್ತು ಹಣಕಾಸು-ಸಾಂಸ್ಥಿಕ ವ್ಯವಹಾರಗಳ ಖಾತೆಗಳ ರಾಜ್ಯ ಸಚಿವರಾಗಿಯೂ ಅನುಭವ ಹೊಂದಿದ್ದರು. ಈ ಅನುಭವವು ಅವರನ್ನು ವಿತ್ತ ಸಚಿವಾಲಯಕ್ಕೆ ಕರೆದೊಯ್ಯಲು ಪ್ರಮುಖ ಕಾರಣವಾಯಿತು. ಈಗ ದೇಶದ ಎರಡನೇ ಮಹಿಳಾ ವಿತ್ತ ಸಚಿವೆ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ ನಿರ್ಮಲಾ ಸೀತಾರಾಮನ್‌. ಮಾಜಿ ಪ್ರಧಾನಿ ಇಂದಿರಾ ಗಾಂಧಿ 1970-71ರ ವರೆಗೆ ಈ ಖಾತೆಯನ್ನು ನಿರ್ವಹಿಸಿ ಬಜೆಟ್ ಮಂಡಿಸಿದ್ದರು.

ಮಾರ್ಕೆಟ್‌ನಲ್ಲಿ ತರಕಾರಿಗಳ ಬೆಲೆ ಹೆಚ್ಚಾಗಿದೆ. ಅದರಲ್ಲೂ ಕೆಲ ಸಮಯದಿಂದ ಬೀನ್ಸ್‌, ಕ್ಯಾರೆಟ್‌ ದರ ಕೇಳುವ ಹಾಗೇ ಇಲ್ಲ. ಅದರ ಬೆಲೆ ಕಡಿಮೆಯಾಗಬೇಕು. ಜೊತೆಗೆ ಅಡುಗೆ ಸಿಲಿಂಡರ್‌, ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿತಗೊಳ್ಳಬೇಕು. ಇತ್ತೀಚೆಗಂತೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಆಗಿಂದಾಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಹೀಗಾಗಿ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ಸಾರಿಗೆ, ರಿಕ್ಷಾ, ಟ್ಯಾಕ್ಸಿ ಯಾವುದೇ ವಾಹನಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಕೀರ್ತನಾ ದಿನೇಶ್‌, ಗೃಹಿಣಿ

Advertisement

ಇನ್ಫಾರ್ಮೇಶನ್‌ ಟೆಕ್ನಾಲಜಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಆರು ತಿಂಗಳ ಮೆಟರ್ನಿಟಿ ಲೀವ್‌ ಕೊಡುತ್ತಿದ್ದಾರೆ. ತುಂಬಾ ಸಂತಸದ ಸಂಗತಿ. ಆದರೆ ಅದು ಬಿಟ್ಟರೆ ಮಹಿಳೆಯರಿಗೆಂದು ಬೇರಾವ ವಿಶೇಷ ಸವಲತ್ತುಗಳೂ ಇಲ್ಲ. ಗಾರ್ಮೆಂಟ್ಸ್‌ ಕಾರ್ಖಾನೆಗಳಲ್ಲಿ ದುಡಿಯುವವರಿಗೆ ಪ್ರಾವಿಡೆಂಟ್‌ ಫ‌ಂಡ್‌ನ‌ಂಥ ಸವಲತ್ತುಗಳು ಇರುತ್ತವೆ. ಅನೇಕ ಐಟಿ ಸಂಸ್ಥೆಗಳಲ್ಲಿ ಈ ಸೌಲಭ್ಯವಿಲ್ಲ. ಅವೂ ಇಂಥಾ ಸವಲತ್ತುಗಳನ್ನು ಒದಗಿಸಿದರೆ ಈ ಅಸಂಖ್ಯ ಮಹಿಳೆಯರಿಗೆ ಸಹಾಯವಾಗುತ್ತದೆ. ಅದರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೂ ಇದು ಕಾರಣವಾಗುತ್ತದೆ.
ಸೌಮ್ಯ ಬೀನಾ, ಸಾಫ್ಟ್ವೇರ್‌ ಉದ್ಯೋಗಿ

ಮಹಿಳೆಯರಿಗೆ ಮೀಸಲಾದ ಯೋಜನೆಗಳು ದೊಡ್ಡ ಉದ್ದಿಮೆದಾರ ಮಹಿಳೆಯರಿಗೆ ಸಿಕ್ಕುತ್ತಿವೆ. ಮಧ್ಯಮ ವರ್ಗದ ಮಹಿಳೆಯರಿಗೆ ಸುಲಭವಾಗಿ ಆರ್ಥಿಕ ನೆರವು ದೊರೆಯುವಂತಾಗಬೇಕು. ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ದೊರೆಯುವಂತಾಗಬೇಕು. ಮುದ್ರಾ ರೀತಿಯಲ್ಲಿ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಮಹಿಳಾ ಉದ್ಯಮಿಗಳ ಉತ್ಪನ್ನಗಳ ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪ್ರಸ್ತುತ 35% ಸಹಾಯಧನ ದೊರೆಯುತ್ತಿದೆ. ಇದರ ಪ್ರಮಾಣ ಕನಿಷ್ಟ 50%ಗೆ ಹೆಚ್ಚಾಗಬೇಕು.
ಸುಮತಿ ರಮೇಶ್‌, “ಸೌಜನ್ಯ’ ಗೃಹ ಕೈಗಾರಿಕೆ

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಗಿಂತ ದುಡ್ಡು ಹೆಚ್ಚಿದ್ದರೆ ಮಾತ್ರ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಸೀಟು ದೊರೆಯುತ್ತವೆ. ಆಸಕ್ತಿ ಇದ್ದರೂ ದುಡ್ಡಿಲ್ಲ ಎನ್ನುವ ಒಂದೇ ಕಾರಣಕ್ಕೆ ತಮಗಿಷ್ಟವಿಲ್ಲದ ವಿದ್ಯಾಸಂಸ್ಥೆಗಳಲ್ಲಿ, ಇಷ್ಟವಿಲ್ಲದ ಕೋರ್ಸುಗಳನ್ನು ಮಾಡುತ್ತಾ ಪರಿತಪಿಸುವವರು ಅನೇಕ ಮಂದಿ ಇದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಡಿಮೆ ಹಣದಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವ ವ್ಯವಸ್ಥೆ ರೂಪುಗೊಳ್ಳುವ ಅಗತ್ಯವಿದೆ. ಅದರಲ್ಲೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇಂಥದ್ದೊಂದು ವ್ಯವಸ್ಥೆ ರೂಪಿಸಿದರೆ ನಮ್ಮಂಥ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗುತ್ತದೆ.

ಪ್ರಜ್ಞಾ ಹೆಬ್ಟಾರ್‌,
ಎಂ.ಎ ಇಂಗ್ಲೀಷ್‌, ಮೊದಲನೇ ಸೆಮಿಸ್ಟರ್‌ ವಿದ್ಯಾರ್ಥಿನಿ

ಇದೇ ಮೊದಲ ಬಾರಿ ಮಹಿಳಾ ವಿತ್ತ ಸಚಿವೆ ದೇಶದ ಬಜೆಟ್‌ ಮಂಡಿಸುತ್ತಿರುವುದರಿಂದ ತುಂಬಾ ಉತ್ಸಾಹಿತಳಾಗಿದ್ದೇನೆ. ಸಹಜವಾಗಿ ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂದುಕೊಂಡಿದ್ದೇನೆ. ಭಾರತ ಹಳ್ಳಿಗಳ ದೇಶ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಗ್ರಾಮಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಅಗತ್ಯವಾದ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕು. ಜೊತೆಗೆ ಈಗಾಗಲೇ ಇರುವ ಯೋಜನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಪರಿವೀಕ್ಷಣೆ ನಡೆಸಬೇಕು.
ಎಂ.ಕೆ. ಅರ್ಚನಾ,  ಎಂಜಿನಿಯರಿಂಗ್‌ ಪ್ರಾಧ್ಯಾಪಕಿ

ಓರ್ವ ಮಹಿಳೆಯೇ ಮಂಡಿಸುತ್ತಿರುವ ಈ ಬಾರಿಯ ಕೇಂದ್ರ ಬಜೆಟ್‌ ಮಹಿಳಾಪ್ರಧಾನವಾಗಿರಲಿದೆ ಎಂದು ಆಶಿಸುತ್ತೇನೆ. ಭಾರತೀಯ ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಈ ಬಾರಿಯ ಬಜೆಟ್‌ ಸಾಕ್ಷಿಯಾಗಲಿದೆ ಎಂದುಕೊಂಡಿದ್ದೇನೆ. ಇಂದಿನ ಭಾರತದ ಪರಿಸ್ಥಿತಿಯನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಮಹಿಳೆ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಸುರಕ್ಷತೆ ಪ್ರಮುಖವಾದುದು. ಈ ಬಾರಿಯ ಬಜೆಟ್‌ನಲ್ಲಿ ಮಹಿಳಾ ಸುರಕ್ಷತೆಗೆ ಒತ್ತು ನೀಡಲಾಗಿರುತ್ತದೆ ಎಂಬು ಭಾವಿಸಿದ್ದೇನೆ. ಗ್ರಾಮೀಣ ಮತ್ತು ನಗರಕೇಂದ್ರಿತ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಗ್ರಾಮೀಣ ಭಾಗದ ಜನರು ಇನ್ನೂ ಹಲವು ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನಾವು ತಾಂತ್ರಿಕವಾಗಿ ಇಷ್ಟೆಲ್ಲಾ ಮುಂದುವರಿದಿದ್ದರೂ ಇನ್ನೂ ಗ್ರಾಮೀಣ ಭಾಗವನ್ನು ತಲುಪಿಲ್ಲ. ಹಲವೆಡೆ ಇನ್ನೂ ಸೌದೆಯನ್ನೇ ಇಂಧನವನ್ನಾಗಿ ಉಪಯೋಗಿಸುತ್ತಿದ್ದಾರೆ. ಬಜೆಟ್‌ ಈ ಕುರಿತು ಗಮನ ಹರಿಸಲಿ.

ಪ್ರತಿಭಾ, ಭೌತಶಾಸ್ತ್ರ ಶಿಕ್ಷಕಿ

ಮೊದಲು ಮಹಿಳೆಯರ ಅತ್ಯವಶ್ಯ ಉತ್ಪನ್ನಗಳ ಮೇಲೆ ತೆರಿಗೆ ಕಡಿತಗೊಳಿಸಬೇಕು. ಎಲ್ಲಾ ಮಹಿಳೆಯರಿಗೂ ಅದರ ಅಗತ್ಯ ಇರುವುದರಿಂದ ಮೊದಲು ಆಗಬೇಕಾಗಿರುವ ಕೆಲಸವೇ ಅದು. ವಿತ್ತ ಸಚಿವೆ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎಂಬ ನಿರೀಕ್ಷೆಯಿದೆ. ಇದರ ಜೊತೆಗೆ ಪ್ರತಿ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಕಡ್ಡಾಯ ಆತ್ಮರಕ್ಷಣಾ ತರಗತಿಗಳನ್ನು ಕೈಗೊಳ್ಳಬೇಕು. ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗಾಗಿ ಉದ್ಯೋಗ ತರಬೇತಿ ಕೇಂದ್ರಗಳು ತೆರೆಯಬೇಕು.
ನಾಗಶ್ರೀ ಅಜಯ್‌, ರೇಡಿಯೊ ಜಾಕಿ

“ನಿರ್ಭಯಾ ನಿಧಿ’ಯನ್ನು ಸದ್ಬಳಕೆ ಮಾಡಿಕೊಳ್ಳುವಂಥ ಯೋಜನೆ ರೂಪಿಸಲಿ. ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಒದಗಿಸಬೇಕು. ಪರಿಸರಸ್ನೇಹಿ ಮಾನದಂಡಗಳನ್ನು ಪಾಲಿಸುತ್ತಿರುವ ಕಾರ್ಖಾನೆಗಳಿಗೆ ಸವಲತ್ತುಗಳನ್ನು ಉಡುಗೊರೆಯಾಗಿ ನೀಡಬೇಕಿದೆ. ಟ್ಯಾಕ್ಸ್‌ ಸ್ಲಾಬ್‌ಅನ್ನು 3 ಲಕ್ಷಕ್ಕೆ ಏರಿಸಬೇಕು. ಸಾರ್ವಜನಿಕ ವಲಯದಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಚಿಕ್ಕ ಮಕ್ಕಳನ್ನು ಬಿಟ್ಟು ಹೋಗಲು ಅನುವಾಗುವಂತೆ ಡೇ ಕೇರ್‌ ವ್ಯವಸ್ಥೆ ರೂಪಿಸಿದರೆ ಚೆನ್ನ.
ಶ್ರುತಿ ಬಿ.ಆರ್‌., ಇನ್‌ಕಂ ಟ್ಯಾಕ್ಸ್‌ ಇಲಾಖೆ ಉದ್ಯೋಗಿ

ಡಯಾಬಿಟಿಸ್‌, ಹೃದ್ರೋಗ, ಕ್ಯಾನ್ಸರ್‌, ಮನೋರೋಗಗಳಂಥ ಕಾಯಿಲೆಗಳ ಚಿಕಿತ್ಸಾವೆಚ್ಚ ಹೆಚ್ಚು. ಆರ್ಥಿಕವಾಗಿ ಹಿಂದುಳಿದವರು ಈ ವೆಚ್ಚವನ್ನು ಭರಿಸಲು ಶಕ್ತರಾಗಿರುವುದಿಲ್ಲ. ಹೀಗಾಗಿ ಈ ಕಾಯಿಲೆಗಳ ಔಷಧಗಳಿಗೆ ತೆರಿಗೆಯನ್ನು ಕಡಿತಗೊಳಿಸಿದರೆ ತುಂಬಾ ಉಪಯೋಗವಾಗುತ್ತದೆ. ಆಯುಷ್ಮಾನ್‌ ಭಾರತ್‌ ಯೋಜನೆ ಕ್ಯಾನ್ಸರ್‌ ಕಾಯಿಲೆಯ ಚಿಕಿತ್ಸೆಗೆ ನೆರವಾಗುತ್ತದೆ. ಆದರೆ, ಪರೀಕ್ಷೆಯ ಖರ್ಚನ್ನು ಇದು ಒಳಗೊಳ್ಳುವುದಿಲ್ಲ. ಈ ಖರ್ಚು ಕೂಡಾ ಒಳಗೊಂಡರೆ ಅನೇಕರಿಗೆ ಸಹಾಯವಾಗುತ್ತದೆ.
ಡಾ. ಆಶಾ ಬೆನಕಪ್ಪ, ಮಕ್ಕಳ ತಜ್ಞರು

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತಾಂತ್ರಿಕವಾಗಿ ಸುಧಾರಿತ ಪರಿಹಾರಗಳನ್ನು ಪರಿಚಯಿಸುವ ಅಗತ್ಯವಿದೆ. ಮೊಬೈಲ್‌ ಎಸ್‌ಒಎಸ್‌, ಸಾರ್ವಜನಿಕ ಸಾರಿಗೆಯಲ್ಲಿ ಕ್ಯಾಮೆರಾ ಕಣ್ಗಾವಲು ಮತ್ತು ಮಹಿಳಾ ಗಸ್ತುಗಳನ್ನು ಹೆಚ್ಚು ವ್ಯಾಪಕ ಬಳಸುವ ವ್ಯವಸ್ಥೆ ಬೇಕಾಗಿದೆ. ಗೃಹಿಣಿಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ದೈನಂದಿನ ಗೃಹ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು. ಶಾಲಾ ಶುಲ್ಕಗಳು ಪ್ರತಿ ವರ್ಷ ಗಗನಕ್ಕೇರುತ್ತಿವೆ, ಅವುಗಳಿಗೆ ಕಡಿವಾಣ ಹಾಕಿದರೆ ಮಧ್ಯಮ ಮತ್ತು ಕೆಳ ಮಧ್ಯಮದವರಿಗೆ ಉತ್ತಮ ಶಿಕ್ಷಣ ಕೈಗೆಟುಕುವಂತಾಗುತ್ತದೆ. ಅನಿವಾಸಿ ಭಾರತೀಯ ಮಹಿಳಾ ಹೂಡಿಕೆದಾರರಿಗೆ ಸಾಲ ಮತ್ತು ಹಣಕಾಸು ನೆರವು ನೀಡಲು ಬ್ಯಾಂಕ್‌ಗಳಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸಬೇಕು. ಬೇಸರದ ಸಂಗತಿ ಎಂದರೆ ಅನಿವಾಸಿ ಭಾರತೀಯರು ತಾಯ್ನಾಡಿನಲ್ಲಿ ಕೃಷಿ ಭೂಮಿ, ತೋಟ ಕೊಂಡುಕೊಳ್ಳಲು ಆಗದೇ ಇರುವುದು. ನಮಗೆ ಕೃಷಿಯಲ್ಲಿ ಆಸಕ್ತಿಯಿದ್ದರೂ ಕಾನೂನಿನ ತೊಡಕಿನಿಂದಾಗಿ ಹಿಂದೆಗೆಯಬೇಕಾಗಿದೆ.
ಚೈತ್ರಾ ಅರ್ಜುನಪುರಿ, ಬರಹಗಾರ್ತಿ, ಕತಾರ್‌

ಮಹಿಳಾ ಉದ್ಯಮಿಗಳಿಗಿವೆ ಹಲವು ನಿರೀಕ್ಷೆ…
ಇತ್ತೀಚೆಗೆ ನೀಲ್ಸನ್‌ ಸಂಸ್ಥೆಯು ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿ 48 ಪ್ರತಿಶತ ಗೃಹಿಣಿಯರು ಮನೆಗೆ ಅನುಕೂಲವಾಗುವಂಥ ಪುಟ್ಟ ವ್ಯಾಪಾರವನ್ನೋ, ಕೆಲಸವನ್ನೋ ಮಾಡಲು ಇಚ್ಛಿಸುತ್ತಾರೆ. ಆದರೆ ಇವರಲ್ಲಿ ಬಹುತೇಕರು ಹಣವಿಲ್ಲದೇ, ಸೂಕ್ತ ಮಾರ್ಗದರ್ಶನವಿಲ್ಲದೇಅಥವಾ ಮನೆಯಲ್ಲಿ ಜವಾಬ್ದಾರಿಗಳು ವಿಪರೀತವಾಗಿ ತಮ್ಮ ಕನಸನ್ನು ಕೊನೆಗೊಳಿಸಿಕೊಳ್ಳುತ್ತಾರಂತೆ…  ಈ ಹಿನ್ನೆಲೆಯಲ್ಲಿ ದೇಶದಲ್ಲಿ ಮಹಿಳಾ ಉದ್ಯಮಶೀಲತೆ, ಉದ್ಯೋಗ ವಲಯಕ್ಕೆ ಬೇಕಾಗಿರುವುದೇನು ಎನ್ನುವುದರ ಬಗ್ಗೆ ಮಹಿಳಾ ಉದ್ಯಮಿಗಳ ಸಲಹೆ-ನಿರೀಕ್ಷೆಗಳು ಇಲ್ಲಿವೆ…

ಒಬ್ಬ ಮಹಿಳಾ ಹೂಡಿಕೆದಾರಳಾಗಿ ಈ ಮಾತನ್ನು ಹೇಳುತ್ತಿದ್ದೇನೆ- ಭಾರತದಲ್ಲಿಂದು ಮಹಿಳೆಯರಿಗೆ ಹೂಡಿಕೆದಾರರು ಮತ್ತು ಬ್ಯಾಂಕುಗಳಿಂದ ಹ‌ಣ ಪಡೆಯುವುದು ಬಹಳ ಕಷ್ಟದ ಕೆಲಸ. ಸರ್ಕಾರವು ಮಹಿಳೆಯರು ಆರಂಭಿಸುವ ನವೋದ್ಯಮಗಳಿಗೆ ಹಣ ಸುಲಭವಾಗಿ ಸಿಗುವಂಥ ಸ್ಕೀಮುಗಳನ್ನು ತರಬೇಕು. ಅಲ್ಲದೇ, ಯಾವ ಬ್ಯಾಂಕೂ ಕೂಡ ಮಹಿಳೆಯರಿಗೆ ಸಾಲ ಒದಗಿಸುವಂಥ ನಿಯಮ ತರಬೇಕು.
ಪೌಲಾ ಮರಿವಾಲಾ, ನವೋದ್ಯಮ ಹೂಡಿಕೆದಾರರು

ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೆ ಪರಿಸ್ಥಿತಿ ಅಷ್ಟು ಪೂರಕವಾಗಿಲ್ಲ. ದೇಶದ ಒಟ್ಟು ಉದ್ಯಮಿಗಳಲ್ಲಿ ಅವರ ಪ್ರಮಾಣ 14 ಪ್ರತಿಶತಕ್ಕಿಂತಲೂ ಕಡಿಮೆ. ಈ ನಿಟ್ಟಿನಲ್ಲಿ ಸರ್ಕಾರವು ಮಹಿಳೆಯರು ಸ್ವಾವಲಂಬಿಗಳಾಗುವಂಥ ಕೌಶಲಗಳನ್ನು ಕಲಿಸುವ STEP (Support to Training and Employment Programme for women) ಯೋಜನೆಗೆ ಹೆಚ್ಚಿನ ಬಲ ತುಂಬಬೇಕಾದ ಅಗತ್ಯವಿದೆ.
ದಿವ್ಯಾ ಜೈನ್‌, ಸೆಲ್ಫ್ಎ ಜುಕೇಟ್‌ ಸ್ಥಾಪಕಿ

ಮಹಿಳಾ ಉದ್ಯಮಿಗಳು ಹೆಚ್ಚಾಗಬೇಕು ಎನ್ನುವುದಕ್ಕೂ ಮುನ್ನ, ಉದ್ಯೋಗ ವಲಯದಲ್ಲಿ ಮಹಿಳಾ ಕೆಲಸಗಾರರ ಸಂಖ್ಯೆ ಹೆಚ್ಚಾಗುವುದಕ್ಕೆ ನಾವು ಒತ್ತುಕೊಡಬೇಕು. ಮಹಿಳೆಯರನ್ನು ಉದ್ಯೋಗ ವಲಯಕ್ಕೆ ಕರೆತರುವುದಕ್ಕಾಗಿ ಸರ್ಕಾರ ಬಹಳಷ್ಟು ಸುರಕ್ಷತಾ ಕ್ರಮಗಳನ್ನು ಮತ್ತು ಮೂಲಸೌಕರ್ಯಗಳನ್ನು ಒದಗಿಸಬೇಕು.
ಸ್ವಾತಿ ಭಾರ್ಗವ, ಕ್ಯಾಶ್‌ಕರೋ ಸಂಸ್ಥೆಯ ಸಹಸ್ಥಾಪಕಿ

ವಿತ್ತ ಲೋಕದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಆಗುತ್ತಿಲ್ಲ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಹಿಳಾ ಸ್ನೇಹಿ ವಾತಾವರಣವನ್ನು ನಿರ್ಮಿಸುವಂಥ ನೀತಿಗಳನ್ನು ಅನುಷ್ಠಾನಕ್ಕೆ ತರಲಿ ಎನ್ನುವುದೇ ನನ್ನ ಆಶಯ. ಆಗ ಮಾತ್ರ ಉದ್ಯೋಗ ಮಾರುಕಟ್ಟೆಯಲ್ಲಿ ಮಹಿಳೆ ಮೇಲೆ ಬರಬಲ್ಲಳು.
ಪ್ರಿಯಾಂಕಾ ಗಿಲ್‌, ಪಾಪ್‌ಎಕ್ಸ್‌ಓ ಸ್ಥಾಪಕಿ

ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗ ಜಗತ್ತಿಗೆ ಕಾಲಿಡುವ ಅಗತ್ಯವಿದೆ. ಅವರನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಾತಾವರಣದಲ್ಲಿ ಕೆಲಸ ಮಾಡುವುದಕ್ಕೆ ಕರೆತರುವ ಹಾಗೂ ಸ್ವತಂತ್ರ ಉದ್ಯಮಗಳನ್ನು ನಡೆಸುವುದಕ್ಕೆ ಪ್ರೋತ್ಸಾಹಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.
ಉಪಾಸನಾ ಟಾಕು, ಮೊಬಿಕ್ವಿಕ್‌ ಸಂಸ್ಥೆಯ ಸಹಸ್ಥಾಪಕಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next