Advertisement

ಗಣಿತ ಕ್ಷೇತ್ರದಲ್ಲಿನ ಮಹಿಳೆಯರು 

06:00 AM Dec 09, 2018 | Team Udayavani |

ನಾಲ್ಕನೆಯ ಶತಮಾನದ ಅಲೆಗ್ಸಾಂಡ್ರಿಯಾದ ಹಿಪೇಟಿಯಾ (ಕ್ರಿ.ಶ. 370-415), ಹದಿನೆಂಟನೆಯ ಶತಮಾನದ ಪ್ಯಾರಿಸ್‌ನ ಗಣಿತ ಜಿಜ್ಞಾಸು ಇಮಿಲಿ ದು ಚಾಟೆಲೆಟ್‌ (ಕ್ರಿ.ಶ. 1706-1749), ಜರ್ಮನಿಯ ಹ್ಯಾನೋವರ್‌ನ ಕೆರೊಲಿನ್‌ ಹರ್ಷಲ್‌ (1750-1848), ಪ್ಯಾರಿಸ್‌ನ ಇನ್ನೋರ್ವ ಗಣಿತ ವಿಶಾರದೆ ಮೇರಿ ಸೋಫಿ ಜರ್ಮೇನ್‌ (1776-1831) ಮುಂತಾದ 12 ಮಂದಿ ಗಣಿತಜ್ಞೆಯರ ಸಾಧನಾಪಥಗಳ ಮೇಲೆ ಕಣ್ಣು ಹಾಯಿಸುವಂತೆ ಮಾಡುವ ಅಪರೂಪದ ಪುಸ್ತಕ ಇದು.

Advertisement

ವಿಜ್ಞಾನ ಕ್ಷೇತ್ರ ಮಹಿಳೆಯರಿಗೆ ಹೇಳಿಸಿದ್ದಲ್ಲ ಎಂಬಂಥ ಪೂರ್ವಗ್ರಹೀತ ಚಿಂತನೆ ಕಳೆದ ಶತಮಾನದವರೆಗೂ ಒಂದಿಲ್ಲೊಂದು ವೇಷದಿಂದ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮುಂದುವರಿದುಕೊಂಡು ಬಂದಿರುವುದು ಸರ್ವವಿದಿತ. ಆದರೆ ಕೆಲ ಸಾಧಕಿಯರು ಕೆಲವೇ ಕೆಲವು ಸಹೃದಯರೂ, ಉದಾರಿಗಳೂ ಆಗಿದ್ದ ಪುರುಷ ವಿಜ್ಞಾನಿಗಳ ಸಹಾಯಕಿಯರಾಗಿ ದುಡಿದರು; ಮುಂದೆ ತಮ್ಮದೇ ತೀವ್ರ ಆಸಕ್ತಿಯನ್ನು ಬೆಳೆಸಿಕೊಂಡರು; ಕೌಟುಂಬಿಕ, ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಸಾಧನೆಯ ಪಥದಲ್ಲಿ ಮುಂದುವರಿದರು. ಹಿಪೇಟಿಯಾಳಂಥ ಗಣಿತಜ್ಞೆಯನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು; ಆಕೆಯ ಜೀವನಗಾಥೆ ಅಶ್ರುತಗಾನವೇ ಆಗಿಹೋಯಿತು. ಅದಾಗಿ 12 ಶತಮಾನಗಳ ಬಳಿಕ ಬಂದ ಗಣಿತ ಶಾಸ್ತ್ರಜ್ಞೆಯರ ಮಾಹಿತಿ ಅಲ್ಲಲ್ಲಿ ಅಸ್ಪಷ್ಟವಾಗಿ ಲಭ್ಯವಿದ್ದುದನ್ನು ಕಷ್ಟಪಟ್ಟು ಕಲೆಹಾಕಿ ಅವರ ವ್ಯಕ್ತಿತ್ವ ದರ್ಶನದೊಂದಿಗೆ ಅವರ ವಿಶಿಷ್ಟ ಸಾಹಸವನ್ನು ಚಿತ್ರಿಸುವ ಪ್ರಯತ್ನ ಈ ಬರಹಗಳಲ್ಲಿ ನಡೆದಿದೆ. ಇನ್ನೆಷ್ಟೋ ಕ್ಷೇತ್ರಗಳ, ಇನ್ನೆಷ್ಟೋ ಸಾಧಕಿಯರು ಇನ್ನೂ ತೆರೆಮರೆಯಲ್ಲೇ ಉಳಿದಿದ್ದಾರೆ; ಅಂಥವರ ವ್ಯಕ್ತಿ-ಚಿತ್ರಣಗಳನ್ನು ಕಲೆಹಾಕಿ ಪ್ರಕಟಿಸಬೇಕೆಂಬವರಿಗೆ ಪ್ರೇರಣೆ ನೀಡುವ ಪುಸ್ತಕ ಇದು.

– ಜಕಾ

Advertisement

Udayavani is now on Telegram. Click here to join our channel and stay updated with the latest news.

Next