Advertisement

ಮೂರು ವರ್ಷಗಳಲ್ಲಿ ರಾಜ್ಯದ 5222 ಮಹಿಳೆಯರು ಕಣ್ಮರೆ

07:33 AM Mar 08, 2017 | |

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳೆಯರ ಹಕ್ಕುಗಳ ರಕ್ಷಣೆ, ಭದ್ರತೆಗೆ ಸಂಕಲ್ಪ ತೊಡುವ ದಿನ. ಆದರೆ, ಇಂತಹ ಆಚರಣೆಗಳ ನಡುವೆಯೂ ರಾಜ್ಯದಲ್ಲಿ ಪ್ರತಿವರ್ಷ ಮಹಿಳೆಯರು ಹಾಗೂ ಯುವತಿಯರ ಕಣ್ಮರೆ ಹಾಗೂ ಕಳ್ಳಸಾಗಣೆ
ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ.

Advertisement

ಗೃಹ ಇಲಾಖೆ ವರದಿಗಳ ಪ್ರಕಾರವೇ ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 4790 ಮಹಿಳೆಯರು ಹಾಗೂ 432 ಹೆಣ್ಣು ಮಕ್ಕಳ ಕಣ್ಮರೆ ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಕಣ್ಮರೆ ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ.
2013 ರಿಂದ 2016 ರವರೆಗೆ ಒಟ್ಟು 23121 ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, 18331 ಪ್ರಕರಣ ಪತ್ತೆ ಹಚ್ಚಲಾಗಿದೆ. 3769 ಯುವತಿಯರ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, 3337 ಪ್ರಕರಣ ಪತ್ತೆಹಚ್ಚಲಾಗಿದೆ. ಉಳಿದಂತೆ 4790
ಮಹಿಳೆಯರು ಹಾಗೂ 432 ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ. ಈ ಪೈಕಿ ಬಹಳಷ್ಟು ಕಳ್ಳಸಾಗಣೆ ಆಗಿರುವ ಬಗ್ಗೆ ಖುದ್ದು ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಂಕೆ ವ್ಯಕ್ತಪಡಿಸಿತ್ತು.ರಾಜ್ಯಾದ್ಯಂತ ಪ್ರವಾಸ ಮಾಡಿದ್ದ ಸಮಿತಿ, ಪೊಲೀಸ್‌ ಇಲಾಖೆಯಲ್ಲಿ ನಾಪತ್ತೆ ಪ್ರಕರಣಗಳ ಹೊರತಾಗಿ ಕಳ್ಳಸಾಗಣೆ ನಡೆದಿರುವ ಸಾಧ್ಯತೆ ಬಗ್ಗೆ ಪೊಲೀಸ್‌ ಅಧಿಕಾರಿಗಳು ಒಪ್ಪಿಕೊಂಡಿದ್ದರು.

ಕಳ್ಳ ಸಾಗಣೆ ಪ್ರಕರಣ ತಡೆಗಟ್ಟಲು ಬೆಂಗಳೂರು ನಗರ, ಹುಬ್ಬಳ್ಳಿ-ಧಾರವಾಡ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಕಲಬುರಗಿ, ರಾಯಚೂರು, ವಿಜಾಪುರ, ದಾವಣೆಗೆರೆ ಜಿಲ್ಲೆಗಳಲ್ಲಿ ಕಳ್ಳ ಸಾಗಣೆ ನಿಷೇಧ ಘಟಕ ಸ್ಥಾಪಿಸಿ ಮೇಲ್ವಿಚಾರಣೆಗಾಗಿ ಎಸ್‌ಪಿ ದರ್ಜೆಯ
ಅಧಿಕಾರಿಯನ್ನು ಸಿಐಡಿ ಘಟಕದಲ್ಲಿ ನೇಮಿಸಲಾಗಿದೆ. ಜಿಲ್ಲಾ ಹಾಗೂ ನಗರ ಮಟ್ಟದಲ್ಲಿ ಮಿಸ್ಸಿಂಗ್‌ ಬ್ಯೂರೋ ಸ್ಥಾಪಿಸಲಾಗಿದೆ. ಇಷ್ಟಾದರೂ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ನಾಪತ್ತೆ ಪ್ರಕರಣಗಳು ದಾಖಲಾಗುತ್ತಲೇ ಇವೆ.  

ಲೈಂಗಿಕ ಕಿರುಕುಳ ಪ್ರಕರಣವೂ ಹೆಚ್ಚು:

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಬೆಂಗಳೂರು 
ಮುಂದಿದೆ. ನೆಟ್ರಿಕ ಕನ್ಸಲ್ಟಿಂಗ್‌ ಅಂಡ್‌ ಇನ್ವೆಸ್ಟಿಗೇಷನ್‌ ಹಾಗೂ ಇಂಡಿಯನ್‌ ನ್ಯಾಷನಲ್‌ ಬಾರ್‌ ಅಸೋಸಿಯೇಷನ್‌ ಜತೆಗೂಡಿ ರಾಜಧಾನಿ ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಹಿಳೆಯರ ಮೇಲೆ ಶೇ.38 ರಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೆಲಸದ ಸ್ಥಳಗಳಲ್ಲಿ ನಡೆಯುತ್ತವೆ. ಅದರಲ್ಲೂ ಶೇ.68 ರಷ್ಟು ಪ್ರಕರಣಗಳಲ್ಲಿ ಮೇಲಧಿಕಾರಿಗಳಿಗೆ
ದೂರೇ ಸಲ್ಲಿಕೆಯಾಗಿಲ್ಲ ಎಂಬುದು  ಬಹಿರಂಗಗೊಂಡಿದೆ. ಸಮೀಕ್ಷೆಯಲ್ಲಿ 6047 ಮಂದಿಯನ್ನು ಸಂದರ್ಶಿಸಿದ್ದು, ಕೆಲಸದ ಅನಿವಾರ್ಯತೆಯಿಂದಾಗಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಾಗ ದೂರು ನೀಡಲು ಹೋಗಿಲ್ಲ. ಒಂದೊಮ್ಮೆ ದೂರು ಕೊಟ್ಟರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿಯಿಂದ ಹಿಂದೇಟು ಹಾಕುತ್ತಾರೆ ಎಂಬುದು ವರದಿಯಲ್ಲಿದೆ. ಐಟಿ, ಬಿಪಿಓ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಬಳಿ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಜಯ್‌ ಕೌಶಿಕ್‌ ತಿಳಿಸಿದ್ದಾರೆ.

Advertisement

ಹಲವು ವರ್ಷಗಳಿಂದ ರಾಜ್ಯದಲ್ಲಿ ಮಾನವಕಳ್ಳ ಸಾಗಾಣಿಕೆ ಸಂಬಂಧ ಎಷ್ಟು ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂಬುದನ್ನು ಪರಿಶೀಲನೆ ನಡೆಸುತ್ತೇನೆ. ಅಲ್ಲದೆ ರಾಜ್ಯದಲ್ಲಿ ಮಾನವ ಕಳ್ಳಸಾಗಾಣಿಕೆಗೆ ಕಟ್ಟುನಿಟ್ಟಾಗಿ ತಡೆಗಟ್ಟುವ ಉದ್ದೇಶದಿಂದ ಮತ್ತಷ್ಟು
ಕಠಿಣ ಕ್ರಮಗಳ ಬಗ್ಗೆ ನಿಯಮಾವಳಿ ರೂಪಿಸಲು ನಿರ್ಧರಿಸಲಾಗಿದೆ.
ಆರ್‌.ಕೆ ದತ್ತಾ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ

ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next