ಮುಂಬೈ : ವಿಶ್ವವನ್ನೇ ನಿದ್ದೆಗೆಡಿಸಿರುವ ಕೋವಿಡ್ 19 ಸೋಂಕು ಏರುಗತಿಯಲ್ಲಿ ಸಾಗುತಿದೆ. ಇದೇ ಹಿನ್ನೆಲೆಯಲ್ಲಿ ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಸಿರೋ ಸಮೀಕ್ಷೆ ಮಾಡಿದ್ದು ಅದರ ವರದಿ ಶನಿವಾರ (ಏಪ್ರಿಲ್ 24) ಬಿಡುಗಡೆಯಾಗಿದೆ. ಈ ಸಮೀಕ್ಷೆ ಪ್ರಕಾರ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಕೋವಿಡ್ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ (ಸಿರೋ ಪಾಸಿಟಿವಿಟಿ) ಹೆಚ್ಚಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಮುಂಬೈನಲ್ಲಿ ಎರಡು ಬಾರಿ ಸಿರೋ ಸಮೀಕ್ಷೆಯನ್ನು ಮಾಡಲಾಗಿತ್ತು. ಇದೀಗ ಮೂರನೇ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಈ ವರದಿಯ ಪ್ರಕಾರ ಸ್ಲಮ್ ಪ್ರದೇಶದಲ್ಲಿ ರೋಗ ನಿರೋಧಕ ಶಕ್ತಿ (ಸಿರೋ ಪಾಸಿಟಿವಿಡಿ) ಕಡಿಮೆಯಾಗುತ್ತಿದ್ದು, ನಾನ್-ಸ್ಲಮ್ ಪ್ರದೇಶದಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ.
ಮುಂಬೈ ಮಹಾನಗರ ಪಾಲಿಕೆ ಹೊರ ತಂದಿರುವ ವರದಿಯಲ್ಲಿ ಮಹಿಳೆಯರು ಶೇ.37.12 ರಷ್ಟು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದರೆ, ಇದರ ಪ್ರಮಾಣ ಪುರುಷರಲ್ಲಿ 35.02 ಇದೆ ಎಂದು ತಿಳಿಸಿದೆ
ಇನ್ನು ಮುಂಬೈನ್ ಸ್ಲಮ್ ಪ್ರದೇಶದಲ್ಲಿ ನಡೆಸಿದ ರಕ್ತ ಪರೀಕ್ಷೆಗಲ್ಲಿ ಶೇ 41.61 ರಷ್ಟು ಕೋವಿಡ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದರೆ, ಇಡೀ ಮುಂಬೈನ 24 ವಾರ್ಡ್ ಗಳಲ್ಲಿ ಪರೀಕ್ಷೆ ನಡೆಸಿದಾದ ಇದರ ಪ್ರಮಾಣ ಶೇ 36.30 ಇದೆ.
ಕಳೆದ ವರ್ಷ ಜುಲೈನಲ್ಲಿ ಮುಂಬೈನ ಮೂರು ಸ್ಲಮ್ ಪ್ರದೇಶದಲ್ಲಿ ರಕ್ತ ಪರೀಕ್ಷೆ ಮಾಡಿದಾಗ ಅವರಲ್ಲಿ ಶೇ 57ರಷ್ಟು ಸಿರೋ ಪಾಸಿಟಿವಿಟಿ ಇತ್ತು. ನಂತರ ಆಗಷ್ಟ್ ನಲ್ಲಿ ಅದೇ ಮೂರರ ಒಂದು ಪ್ರದೇಶದಲ್ಲಿ ಸಿರೋ ಪಾಸಿಟಿವಿಡಿ ಪ್ರಮಾಣ ಶೇ45ಕ್ಕೆ ಇಳಿಕೆಯಾಯಿತು ಎಂದು ತಿಳಿದು ಬಂದಿದೆ.