ರಾಯಚೂರು: ಹಿರಿಯರು ಮತ್ತು ಮಹಿಳೆಯರು ಸಮಾಜದ ಆಧಾರಸ್ತಂಭಗಳಿದ್ದಂತೆ. ಅವರನ್ನು ಗೌರವದಿಂದ ಕಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದರೆ, ಇಂದು ಹೆತ್ತವರನ್ನು ಅಗೌರವದಿಂದ ಕಾಣುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಡಾ| ಜಿ.ಜಿ.ನಂದೂರಕರ್ ಕಳವಳ ವ್ಯಕ್ತಪಡಿಸಿದರು.
ನಗರದ ಲಲಿತ ಹಿರಿಯ ನಾಗರಿಕರ ಮನೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಾಮಾಜಿಕ ಸೈನಿಕರು, ಐಕ್ಯೂಎಸಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಆಪ್ತ ಸಮಾಲೋಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಲಿಂಗ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಸಮಸಮಾಜ ನಿರ್ಮಿಸುವ ಹೊಣೆ ಎಲ್ಲರ ಮೇಲಿದೆ. ಎಲ್ಲರಿಂದಲೇ ಈ ವ್ಯವಸ್ಥೆ ರೂಪುಗೊಂಡಿದ್ದು, ಪ್ರತಿಯೊಬ್ಬರಿಗೂ ತಮ್ಮದೇ ಹಕ್ಕಗಳಿರುತ್ತವೆ ಎಂದರು.
ಕೆಆರ್‌ಐಡಿಎಲ್‌ನ ಸಹಾಯಕ ಕಾರ್ಯನಿರ್ವಹಕ ಇಂಜನಿಯರ್ ಅನಿಲ್ ಕುಮಾರ ಗೋಗಲೆ ಮಾತನಾಡಿ, ಸಮಾಜದಲ್ಲಿ ಹೆತ್ತವರನ್ನು ದೇವರೆಂದು ಪೂಜಿಸುವ ದೇಶ ನಮ್ಮದು. ಕಾಲ ಬದಲಾದಂತೆ ಸಮಾಜದಲ್ಲಿ ಹಿರಿಯರು ಎನ್ನುವ ಗೌರವ ಕ್ಷೀಣಿಸುತ್ತಿದೆ. ಹಿರಿಯರಲ್ಲಿ ಅನಾಥ ಪ್ರಜ್ಞೆ ಹೆಚ್ಚುವಂತೆ ಮಾಡುತ್ತಿರುವುದು ದುಃಖದ ವಿಷಯ. ಯುವ ಪೀಳಿಗೆ ಹಿರಿಯರ ಶ್ರಮಕ್ಕೆ ತಕ್ಕೆ ಗೌರವ ನೀಡಬೇಕು ಎಂದರು.
ಉಪನ್ಯಾಸಕ ಡಾ| ಜೆ.ಎಲ್. ಈರಣ್ಣ ಮಾತನಾಡಿ, ಕಾಲ ಬದಲಾದಂತೆ ಸಂಬಂಧಗಳು ಬದಲಾಗುತ್ತಿವೆ. ಹಿಂದಿನ ಕಾಲದಲ್ಲಿ ಜನ ನಾವು ಎನ್ನುತ್ತಿದ್ದರು. ಇಂದಿನ ಜನರು ನಾನು ಎನ್ನುತ್ತೇವೆ ಎಂದು ವಾತಾವರಣ ಸೃಷ್ಟಿಯಾಗಿದೆ ಎಂದರು. ಪ್ರಾಚಾರ್ಯ ಡಾ| ಯಂಕಣ್ಣ ಮಾಥನಾಡಿ ಅಧ್ಯಕ್ಷತೆ ವಹಿಸಿದ್ದರು. ಲಲಿತ ಹಿರಿಯ ನಾಗರಿಕ ಮನೆಯ ಎಲ್ಲ ಹಿರಿಯರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಹನುಮಂತು ಕೋರಾಪುರ್, ಐಕ್ಯೂಎಸಿ ಸಂಚಾಲಕ ಮಹಾಂತೇಶ್ ಅಂಗಡಿ, ಮಹದೇವಪ, ರಾಜಶೇಖರ್, ಲಕ್ಷ್ಮಣ ಯಾದವ್, ಮನೆಯ ಮೇಲ್ವಿಚಾರಕ ವಿನೋದ ರಾಜ್, ಮರಿಯಪ್ಪ, ಸುನಿಲ್ ಕುಮಾರ್ ಇದ್ದರು.