ಎಚ್.ಡಿ.ಕೋಟೆ: ಮಹಿಳೆಯರು ಮನೆಗಷ್ಟೇ ಸೀಮಿತರಾಗದೆ ಹೊರಬಂದು ಸಬಲೀಕರಣರಾಗುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಆಶಾ ಹೇಳಿದರು.
ತಾಲೂಕಿನ ಮುಳ್ಳೂರು ಗ್ರಾಮದ ಸಮುದಾಯ ಭವನದಲ್ಲಿ ತಾಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೆ ಹೆಣ್ಣು ಗಂಡೆಂಬ ತಾರತಮ್ಯತೆ ಇತ್ತು. ಈಗ ಕಾಲ ಬದಲಾಗಿದೆ, ಗಂಡಿಗೆ ಸರಿಸಮಾನಳಾಗಿ ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ ಎಂದರು.
ಕೌಟುಂಬಿಕ ಕಲಹಗಳು ದೌರ್ಜನ್ಯಗಳು ನಡೆದಾಗ ನೆರೆ ಹೊರೆಯವರು ಹಾಗೂ ಸ್ತ್ರೀ ಶಕ್ತಿ ಮಹಿಳಾ ಸಂಘಟನೆಗಳ ಮಹಿಳೆಯರು ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹಾರ ಮಾಡುವ ಸೌಹಾರ್ದತೆ ಬೆಳೆಸಿಕೊಳ್ಳುವ ಮೂಲಕ ಸಮಾಜದ ಕಳಂಕಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗುವಂತೆ ಮನವಿ ಮಾಡಿಕೊಂಡ ಅವರು ಬಾಲ್ಯವಿವಾಹ ಕಾನೂನು ಬಾಹಿರ ಅಪರಾಧ. ಬಾಲ್ಯವಿವಾಹ ನೆರವೇರಿಸುವುದು ಪ್ರೋತ್ಸಾಹಿಸುವುದಕ್ಕೆ 2 ಲಕ್ಷ ದಂಡದ ಜೊತೆಗೆ ಕಾರಾಗೃಹ ಶಿಕ್ಷೆ ಇದೆ.ಸಾರ್ವಜನಿಕರು ಬಾಲ್ಯವಿವಾಹ ಪ್ರೋತ್ಸಾಹಿಸದೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡರು.
ಮುಳ್ಳೂರು ಗ್ರಾಪಂ ಅಧ್ಯಕ್ಷ ಗೋವಿಂದಾ ಚಾರಿ ಮಾತನಾಡಿ, ಹಿಂದೆ ಮಹಿಳಾ ದಿನಾಚರಣೆಗಳು ಜಿಲ್ಲೆ ತಾಲೂಕು ಮಟ್ಟಗಳಿಗಷ್ಟೇ ಸೀಮಿತಗಾಗಿತ್ತು. ಆದರೆ ಈಗ
ಗ್ರಾಮೀಣ ಭಾಗಗಳಲ್ಲಿಯೂ ಮಹಿಳೆಯರನ್ನು ಸಂಘಟಿಸಿ ಹೆಣ್ಣು ಗಂಡೆಂಬ ತಾರತಮ್ಯತೆ ಹೋಗಲಾಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆ. ಇಂಥ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಆಚರಿಸುವ ಮೂಲಕ ಮಹಿಳೆಯರ ಜವಾಬ್ದಾರಿ ಜೊತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಚನ್ನಮ್ಮ, ತಾಲೂಕು ಮಹಿಳಾ ಒಕ್ಕೂಟಗಳ ಅಧ್ಯಕ್ಷೆ ಶೈಲಸುಧಾಮಣಿ, ಕಾರ್ಯದರ್ಶಿ ರುಕ್ಮಿàಣಿ, ಸುನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರಾದ ಚಿನ್ನಮ್ಮ, ಇಂದುಶ್ರೀ, ಗ್ರಾಮದ ಮುಖಂಡರಾದ ಚನ್ನಪ್ಪ, ರವಿ, ಮಹೇಶ್ ಜೀವ ಇತರರು ಇದ್ದರು.