ಸುಳ್ಯ: ಇಲ್ಲಿಗೆ ಸಮೀಪದ ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ಗೋಣಿ ಚೀಲದಲ್ಲಿ ಯುವತಿಯ ಮೃತ ದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮೃತ ಯುವತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಪುತ್ತೂರು ಉಪವಿಭಾಗ ಡಿ.ವೈ.ಎಸ್.ಪಿ. ನೇತೃತ್ವದಲ್ಲಿ ನಾಲ್ಕು ತಂಡಗಳ ರಚಿಸಲಾಗಿ ಆ ಮೂಲಕ ತನಿಖೆ ನಡೆಸಲಾಗುತ್ತಿದೆ. ಕೃತ್ಯ ಎಸಗಿದ ಆರೋಪಿ ಎನ್ನಲಾಗಿರುವ ಇಮ್ರಾನ್ ಶೇಕ್ ಪತ್ತೆಗೆ ಹಾಗೂ ಕೊಲೆಗೀಡಾದ ಯುವತಿಯ ಗುರುತು ಪತ್ತೆಗೆ ಪೊಲೀಸರು ವಿವಿಧ ಮೂಲಗಳಿಂದ ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಕುರಿತಂತೆ ಸಂತೋಷ್ ಅವರು ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 8 ತಿಂಗಳಿನಿಂದ ಇಮ್ರಾನ್ ಶೇಕ್ ಹೆಲ್ಪರ್‌ಆಗಿ ಕೆಲಸ ಮಾಡಿಕೊಂಡಿದ್ದು, ಬೀರಮಂಗಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೆಲಸಕ್ಕೆ ಸೇರಿದ ಹದಿನೈದು ದಿನಗಳಲ್ಲಿ ತನ್ನ ಊರಾದ ಪಶ್ಚಿಮ ಬಂಗಾಳಕ್ಕೆ ಹೋಗಿ ಮದುವೆಯಾಗಿ ತನ್ನ ಹೆಂಡತಿಯೊಂದಿಗೆ ಬಂದವನು ಬಾರ್‌ಇರುವ ಕಾಂಪ್ಲೆಕ್ಸ್ ನಲ್ಲಿಯೇ ರೂಮಿನಲ್ಲಿ ಹೆಂಡತಿ ಜೊತೆ 15 ದಿವಸ ಇದ್ದ. ಆತನ ಹೆಂಡತಿ ಅಂಗವಿಕಲೆಯಾಗಿದ್ದು ಊರುಗೋಲಿನ ಸಹಾಯದಲ್ಲಿ ನಡೆದಾಡುತ್ತಿದ್ದು, ಕಪ್ಪು ಬಣ್ಣದ ಬುರ್ಖಾವನ್ನು ಧರಿಸುತ್ತಿದ್ದಳು. ಬಳಿಕ ಇಮ್ರಾನ್ ಶೇಕ್ ಹೆಂಡತಿ ಜತೆ ಮೊದಲಿದ್ದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ಬಾರ್ ಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ.
ತಿಂಗಳ ಹಿಂದೆ ಇಮ್ರಾನ್ ಶೇಕ್ ಬಾರ್‌ಮಾಲಕರಲ್ಲಿ ತನ್ನ ಪತ್ನಿ ಗರ್ಭಿಣಿಯಾಗಿದ್ದು ಆಕೆಗೆ ಯಾರೂ ಇಲ್ಲದೇ ಇರುವುದರಿಂದ ತನ್ನ ಊರಿನ ಮನೆಯಲ್ಲಿ ಬಿಟ್ಟು ವಾಪಾಸು ಕೆಲಸಕ್ಕೆ ಬರುವುದಾಗಿ ಹೇಳಿದ್ದು, ನ. 19ರಂದು ಸಂಬಳ ಪಡೆದು ಹೋಗಿದ್ದ. ಇಮ್ರಾನ್ ಶೇಕ್‌ನನ್ನು ಹೆಚ್ಚಾಗಿ ಬಾರ್ ನಲ್ಲಿ ವೈಟರ್‌ಆಗಿ ಕೆಲಸ ಮಾಡುವ ಬೆಟ್ಟಂಪಾಡಿಯ ನಿವಾಸಿ ಕೀರ್ತನ್ ಎಂಬವರು ಅವರ ಬೈಕಿನಲ್ಲಿ ರಾತ್ರಿ ಬಾಡಿಗೆ ಮನೆಗೆ ಬಿಡುತ್ತಿದ್ದರು. ನ.21ರಂದು ಕೀರ್ತನ್ ಸಂತೋಷ್ ಅವರಲ್ಲಿ, ಇಮ್ರಾನ್ ಶೇಕ್ ನ ಬಾಡಿಗೆ ಮನೆಯ ಪಕ್ಕದ ಬಾಡಿಗೆ ಮನೆಯಲ್ಲಿ ವಾಸವಿರುವ ರೋಹಿತ್‌ರವರು ಇಮ್ರಾನ್‌ನ ಮನೆಯಿಂದ ನ.20ರಂದು ರಾತ್ರಿ 7.30 ಗಂಟೆಗೆ ಜೋರಾಗಿ ಹೆಂಗಸು ಕಿರುಚಿದ ಶಬ್ದ ಕೇಳಿಸಿದ್ದು, ಅವರ ಮನೆಗೆ ಹೋದ ರೋಹಿತ್ ಬಾಗಿಲು ತಟ್ಟಿದಾಗ ಅಲ್ಲಿದ್ದ ಇಮ್ರಾನ್ ಶೇಕ್ ಹೆಂಡತಿಯು ಶೌಚಾಲಯದಲ್ಲಿ ಬಿದ್ದರು ಎಂದು ಹೇಳಿರುವುದಾಗಿ ತನಗೆ ಹೇಳಿದ್ದರು” ಎಂಬ ಮಾಹಿತಿ ನೀಡಿದರು.
ಈ ವಿಚಾರ ಗೊತ್ತಾದ ಸಂತೋಷ್ ಅವರು ಮಂಗಳವಾರ ಬೆಳಿಗ್ಗೆ ಇಮ್ರಾನ್ ಗೆ ಕರೆ ಮಾಡಿದಾಗ ಸ್ವಿಚ್ ಅಫ್ ಬರುತ್ತಿತ್ತು. ಸಂಜೆ ಕೀರ್ತನ್ ಜೊತೆ ಬೀರಮಂಗಲದ ಇಮ್ರಾನ್ ಶೇಕ್ ನ ಬಾಡಿಗೆ ಮನೆಗೆ ಬಂದು ನೋಡಿದಾಗ ಬಾಗಿಲು ಮುಚ್ಚಿಕೊಂಡಿದ್ದು, ಕಿಟಕಿ ತೆರೆದಿತ್ತು. ಒಳಗಡೆ ವಿದ್ಯುತ್ ದೀಪ ಉರಿಯುತ್ತಿತ್ತು, ಕಿಟಕಿಯಲ್ಲಿ ನೋಡಿದಾಗ ಮೊಬೈಲ್ ಫೋನ್ ಟೇಬಲ್‌ನ ಮೇಲಿದ್ದು, ಶೌಚಾಲಯದಲ್ಲಿ ಲೈಟ್ ಹಾಕಲಾಗಿತ್ತು, ಅದರೊಳಗೆ ಪ್ಲಾಸ್ಟಿಕ್ ಗೋಣಿ ಚೀಲ ಕಟ್ಟಿ ಇಟ್ಟದ್ದು ಕಂಡು ಬಂದಿದ್ದು, ಅದನ್ನು ನೋಡಿ ಸಂಶಯ ಬಂದು ಸಂತೋಷ್ ರೋಹಿತ್‌ರಲ್ಲಿ ವಿಚಾರಿಸಿದಾಗ ನ.20 ರಂದು ರಾತ್ರಿ 8.30 ಗಂಟೆ ಸಮಯಕ್ಕೆ ಇಮ್ರಾನ್ ಶೇಕ್ ಮಾತ್ರ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಹೋಗಿರುವುದನ್ನು ನೋಡಿರುವುದಾಗಿಯೂ ಆತನ ಜೊತೆ ಆತನ ಹೆಂಡತಿ ಹೋಗಿಲ್ಲ ಎಂದೂ ಮಾಹಿತಿ ನೀಡಿದರು. ಇಮ್ರಾನ್ ಶೇಕ್ ಆತನ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಮನೆಗೆ ಬೀಗ ಹಾಕಿ ಹೋಗಿರುವ ಸಂಶಯದ ಹಿನ್ನೆಲೆಯಲ್ಲಿ ಸಂತೋಷ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಡಿಗೆ ಮನೆ ಬಾಗಿಲು ಒಡೆದು ಪರಿಶೀಲಿಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮೃತ ಯುವತಿಯ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯ ಶೈತ್ಯಾಗಾರದಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.