ಕೊಳ್ಳೇಗಾಲ: ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗ ಬಾರದು. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಅರಿವನ್ನು ಪಡೆದುಕೊಂಡು ಅವುಗಳ ಸದ್ಬಳಕೆ ಮಾಡಿ ಕೊಂಡು ಸದೃಢರಾಗ ಬೇಕು ಎಂದು ಸಂಪನ್ಮೂಲ ವ್ಯಕ್ತಿ, ವಕೀಲೆ ನಿರ್ಮಲಾ ತಿಳಿಸಿದರು.
ನಗರದ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಂದೆ-ತಾಯಿ ಆಶ್ರಯದಲ್ಲಿ ಮಗಳಾಗಿ, ಗಂಡನ ಆಶ್ರಯದಲ್ಲಿ ಹೆಂಡತಿಯಾಗಿ, ಮಕ್ಕಳ ಆಶ್ರಯದಲ್ಲಿ ತಾಯಿಯಾಗಿ, ಹೆಣ್ಣು ಬದುಕಿನುದ್ದಕ್ಕೂ ಅವಲಂಬಿತ ಜೀವನ ನಡೆಸುತ್ತಾ ಬಂದಿದ್ದಾಳೆ. ಆದರೆ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯರು ಮುಂಚೂಣಿಯಲ್ಲಿದ್ದು, ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಮಹಿಳೆಯರನ್ನು ಅಪಹಾಸ್ಯ ಮಾಡುತ್ತಿರುವುದು ನಡೆಯುತ್ತಲೇ ಇದೆ. ಇದು ನಿಲ್ಲಬೇಕು. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರ ಬೇಕು. ಕಾಲಹರಣ ಮಾಡದೇ ಪರಿಶ್ರಮ ದಿಂದ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮಹಿಳೆಯರು ಈ ದೇಶದ ಆಸ್ತಿಗಳು, ಮಹಿಳಾ ಸಬಲೀಕರಣ ದಿಂದ ರಾಷ್ಟ್ರದ ಸಬಲೀಕರಣ ಎಂಬ ಅಂತಿಮ ಸತ್ಯವನ್ನು ಎಲ್ಲರೂ ಅರಿತು ಮಹಿಳೆಯರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ವಾಗಿ ಕಾರ್ಯ ಪ್ರವೃತ್ತರಾಗಬೇಕು. ಮಹಿಳೆಯರ ಬಗ್ಗೆ ಅನುಕಂಪಕ್ಕಿಂತ ಅವರ ಅಭಿವೃದ್ಧಿಗೆ ಪೂರಕವಾದ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸೀಗನಾಯಕ, ಉಪನ್ಯಾಸಕಿ ಪ್ರೊ. ಸರಳಾದೇವಿ, ಬೇಬಿ ಪ್ರೇಮಲತಾ, ದೀಪಾ, ದೈಹಿಕ ಶಿಕ್ಷಣ ನಿರ್ದೇಶಕ ಮೋಸೆಸ್, ಮಹೇಶ್ ಕುಮಾರ್ ಇತರರು ಉಪಸ್ಥಿತರಿದ್ದರು.