Advertisement

ವನಿತಾ ಬಿಗ್‌ ಬಾಶ್‌ ಲೀಗ್‌ ಗ್ರೇಸ್‌ ಹ್ಯಾರಿಸ್‌ ಅತೀ ವೇಗದ ಶತಕ

06:00 AM Dec 20, 2018 | Team Udayavani |

ಬ್ರಿಸ್ಬೇನ್‌: “ವನಿತಾ ಬಿಗ್‌ ಬಾಶ್‌ ಕ್ರಿಕೆಟ್‌ ಲೀಗ್‌’ನಲ್ಲಿ ಬ್ರಿಸ್ಬೇನ್‌ ಹೀಟ್‌ ತಂಡದ ಆರಂಭಿಕ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌ ಅತೀ ವೇಗದ ಶತಕದ ದಾಖಲೆ ನಿರ್ಮಿಸಿದ್ದಾರೆ.

Advertisement

ಬುಧವಾರ ನಡೆದ ಬ್ರಿಸ್ಬೇನ್‌ ಹೀಟ್‌-ಮೆಲ್ಬರ್ನ್ ಸ್ಟಾರ್ ನಡುವಿನ ಪಂದ್ಯದ ವೇಳೆ ಗ್ರೇಸ್‌ ಹ್ಯಾರಿಸ್‌ ಕೇವಲ 42 ಎಸೆತಗಳಲ್ಲಿ ಶತಕ ಬಾರಿಸಿದರು. ಅವರ ಅಜೇಯ 101 ರನ್ನುಗಳ ಈ ಸ್ಫೋಟಕ ಇನ್ನಿಂಗ್ಸ್‌ ವೇಳೆ 19 ಬೌಂಡರಿ, 6 ಸಿಕ್ಸರ್‌ಗಳು ಸಿಡಿದವು. ಅವರ “ವಿನ್ನಿಂಗ್‌ ಶಾಟ್‌’ ಸಿಕ್ಸರ್‌ ಮೂಲಕ ಬಂತು.

ಗ್ರೇಸ್‌ ಹ್ಯಾರಿಸ್‌ ಸಾಹಸದಿಂದ ಬ್ರಿಸ್ಬೇನ್‌ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. 132 ರನ್‌ಗಳ ಗುರಿ ಪಡೆದ ಬ್ರಿಸ್ಬೇನ್‌ ಹೀಟ್‌ ತಂಡ ಯಾವುದೇ ವಿಕೆಟ್‌ ನಷ್ಟವಿಲ್ಲದೆ 10.5 ಓವರ್‌ಗಳಲ್ಲಿ 138 ರನ್‌ ಬಾರಿಸಿತು.

ಎರಡು ಶತಕಗಳ ದಾಖಲೆ
ಹ್ಯಾರಿಸ್‌ ಅವರ ಅರ್ಧ ಶತಕ 23 ಎಸೆತಗಳಲ್ಲಿ ಬಂದಿತ್ತು. ಇದು ಟೂರ್ನಿಯ 3ನೇ ಅತೀ ವೇಗದ ಫಿಫ್ಟಿ ಆಗಿದೆ. ಕಳೆದ ವಾರವಷ್ಟೇ ಬ್ರಿಸ್ಬೇನ್‌ ಹೀಟ್‌ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ 23 ಎಸೆತದಲ್ಲಿ ಅರ್ಧ ಶತಕ ಹೊಡೆದಿದ್ದರು. ಹ್ಯಾರಿಸ್‌ ಬಿಗ್‌ ಬಾಶ್‌ ಲೀಗ್‌ನಲ್ಲಿ 2 ಶತಕ ಬಾರಿಸಿದ ಏಕೈಕ ಆಟಗಾರ್ತಿ. ಅವರ ಮೊದಲ ಸೆಂಚುರಿ ಮೊದಲ ಆವೃತ್ತಿಯಲ್ಲಿ ದಾಖಲಾಗಿತ್ತು (55 ಎಸೆತಗಳಲ್ಲಿ 103 ರನ್‌).

ವನಿತಾ ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ ಶತಕ ಬಾರಿಸಿದ ಆಟಗಾರ್ತಿಯರ ಯಾದಿಯಲ್ಲಿ ಗ್ರೇಸ್‌ ಹ್ಯಾರಿಸ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ವೆಸ್ಟ್‌ಇಂಡೀಸ್‌ ತಂಡದ ಅಲ್‌ರೌಂಡರ್‌ ಡಿಯೆಂಡ್ರಾ ಡಾಟಿನ್‌ಗೆ ಮೊದಲ ಸ್ಥಾನ. ಅವರು 2010ರ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 38 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next