Advertisement

ಮಹಿಳೆಯರು ಪುರುಷರಿಗೆ ಸರಿಸಮಾನ: ನೀಲಾ

03:17 PM Mar 25, 2017 | Team Udayavani |

ಕಲಬುರಗಿ: ಮಹಿಳೆಯರು ಇಂದು ಸೇವಾ ಕ್ಷೇತ್ರದಲ್ಲೂ ಪುರುಷರಿಗೆ ಸಮಾನಾಗಿ ಕಾಣಿಸಿಕೊಳ್ಳುತ್ತಿರುವುದು ಸಮಾನತೆ ಸಂಕೇತವನ್ನು ಮತ್ತೂಮ್ಮೆ ಸಾಬೀತು ಪಡಿಸುತ್ತಿದೆ ಎಂದು ಜನಾವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಹಾಗೂ ಸಾಹಿತ್ಯ ಅಕಾಡೆಮಿ ಸದಸ್ಯೆ ಕೆ. ನೀಲಾ ಹೇಳಿದರು. 

Advertisement

ಗುಲಬರ್ಗಾ ವಿಶ್ವ ವಿದ್ಯಾಲಯದ ಅಂಬೇಡ್ಕರ್‌ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ ಅಂಬೇಡ್ಕರ್‌ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಕೆಲಸ ಮಾಡದೇ ಇರುವ ಕ್ಷೇತ್ರಗಳೇ ಉಳಿದಿಲ್ಲ.

ಆದರೂ ಸಮಾನತೆಯ ವಿಚಾರದಲ್ಲಿ ಇನ್ನೂ ಸಮಾಜದಲ್ಲಿ ತಾರತಮ್ಯವಿದೆ. ಭಾಷಣಗಳಲ್ಲಿ, ಬರಹಗಳಲ್ಲಿ ಸಮಾನತೆ ಕಾಣುವ ಮಹಿಳೆ ವಾಸ್ತವದಲ್ಲಿ ಸಮಾನತೆಗಾಗಿ ಹೋರಾಟ ಮಾಡಬೇಕು. ತನ್ನ ಸಾಮರ್ಥ್ಯ ಸಾಬೀತು ಮಾಡಬೇಕಾದ ಅನಿವಾರ್ಯತೆಯೂ ಇದೆ ಎಂದು ಕಳವಳ ವ್ಯಕ್ತಪಡಿಸಿದರು. 

ಬಹುತೇಕ ಮಹಿಳಾ ವಿಚಾರವಾದಿಗಳು, ಹೋರಾಟಗಾರರು, ಪ್ರಗತಿಪರ ಚಿಂತಕರು ಅಂಬೇಡ್ಕರ್‌ ಅವರನ್ನು ಓದಿದ್ದರೂ, ಅವರ ವಿಚಾರಗಳನ್ನು ಆಚರಣೆಯಲ್ಲಿ ತರಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಅಂತಹದೊಂದು ವಿವೇಚನಾ ರಹಿತ ಆಲೋಚನೆಯಿಂದ ಹೊರ ಬರಬೇಕು ಎಂದರು. 

ಕೇಂದ್ರೀಯ ವಿವಿ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಅಪ್ಪುಗೆರೆ ಸೋಮಶೇಖರ ಮಾತನಾಡಿ, ಇವತ್ತಿನ ನಮ್ಮ ಯುವಕರು ಮಾಯದ ಹಾಗೂ ಅತಿರೇಕದ ಮಾತುಗಳಿಗೆ ಒಳಗಾಗಿ ಜಾತಿ, ಕೋಮುವಾದದ ಬೆನ್ನು ಹತ್ತುತ್ತಿದ್ದಾರೆ. ಇದರಿಂದ ವಿನಾಶವೇ ಹೊರತು ಅಭಿವೃದ್ಧಿ ಮತ್ತು ಸಮಾಜ ರಕ್ಷಣೆ ಮಾತೆಲ್ಲವೂ ಸುಳ್ಳು.

Advertisement

ಅಂಬೇಡ್ಕರ್‌ ಬರೆದ ಮೂರು ಮುಖ್ಯ ಪುಸ್ತಕಗಳಾದ ಪ್ರಾಚೀನ ಭಾರತದ ಇತಿಹಾಸ, ಜಾತಿ ವಿನಾಶ ಮತ್ತು ಸ್ಟೇಟ್ಸ್‌ ಆ್ಯಂಡ್‌ ಮೈನಾರಿಟಿ ಇಂದಿನ ಯುವಕರಿಗೆ ಓದಲು ದೊರಕುವಂತೆ ಮಾಡುವುದು ನಮ್ಮ ಕೆಲಸವಾಗಿಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗುವಿವಿ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಮಾತನಾಡಿ, ಬಹಳಷ್ಟು ವಿದ್ಯಾರ್ಥಿಗಳು ಕೇವಲ ಪ್ರಮಾಣ ಪತ್ರಗಳಿಗಾಗಿ ಎನ್‌ಎಸ್‌ಎಸ್‌ ಸೇರುವುದು ಮಾಡುತ್ತಿದ್ದಾರೆ. 

ಹೀಗೆ ಮಾಡುವುದರಿಂದ ಕೇವಲ ಒಂದು ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಆದರೆ, ಜೀವನಕ್ಕೆ ಬೇಕಾಗಿರುವ ಅಗತ್ಯ ಅನುಭವ ಮತ್ತು ತಿಳಿವಳಿಕೆ ಸಂಪಾದಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಪ್ರಮಾಣ ಪತ್ರಕ್ಕಾಗಿ ಸ್ವಯಂ ಸೇವಕರಾಗುವುದಕ್ಕಿಂತ ಜೀವನದಲ್ಲಿ ಸಾಧನೆ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಸೇವೆ ಮಾಡುವುದನ್ನು ಕಲಿಯಬೇಕು ಎಂದು ಹೇಳಿದರು.

ಗುವಿವಿ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಪ್ರೊ| ರಮೇಶ ಲಂಡನಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ| ದಯಾನಂದ ಅಗಸರ್‌, ಸಿಂಡಿಕೇಟ್‌ ಸದಸ್ಯ ಇಶ್ವರ್‌ ಇಂಗಿನ್‌, ಸತೀಸ ಅಲ್ಲೊಳ್ಳಿ, ನಾಗೇಶ ಕೊಳ್ಳಿ ಹಾಜರಿದ್ದರು. ಸಂಶೋಧನಾ ವಿದ್ಯಾರ್ಥಿನಿ ಅಮರವಾಣಿ ಕಣಜೀಕರ್‌ ನಿರೂಪಿಸಿದರು. ಅರುಣಾ ಹೂಗಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next