ಕುಂದಾಪುರ: ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯು ಕೇಂದ್ರ ಸರಕಾರದ ಸಾಮಾಜಿಕ ಬದ್ಧತೆಯ ಕಾರ್ಯಕ್ರಮವಾಗಿದೆ. ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಜ್ಯಾರಿಗೆ ತಂದಿದ್ದಾರೆ. ದೇಶದ 24 ಕೋಟಿ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವರ ಕುಟುಂಬಗಳಲ್ಲಿ 10 ಕೋಟಿ ಕುಟುಂಬಗಳು ಇನ್ನೂ ಎಲ್‌ಪಿಜಿ ಸಿಲಿಂಡರ್ ಹೊಂದಿರುವುದಿಲ್ಲ ಹಾಗೂ ಕರ್ನಾಟಕದಲ್ಲಿ ಸುಮಾರು 35 ಸಾವಿರ ಕುಟುಂಬಗಳಿಗೆ ಇನ್ನೂ ಗ್ಯಾಸ್ ವಿತರಣೆಯಾಗಿಲ್ಲ. 2011ರಲ್ಲಿ ನಡೆದ ಸೋಶಿಯೋ-ಇಕಾನಮಿ ಸರ್ವೆಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಸುಮಾರು 46 ಸಾವಿರ ಕುಟುಂಬಗಳು ಈ ಉಚಿತ ಎಲ್‌ಪಿಜಿ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕುಂದಾಪುರ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಉಚಿತ ಸಿಲಿಂಡರ್ ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಮಹಿಳೆ ಹಾಗೂ ಮಕ್ಕಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ ನೀಡಲಾಗುವ ಗ್ಯಾಸ್‌ನ್ನು ಫಲಾನುಭವಿಗಳ ಮನೆಗೆ ತೆರಳಿ ಜೋಡಣೆ ಮಾಡಲಾಗುತ್ತದೆ. ಈ ಜೋಡಣೆಯ ಮಾಹಿತಿಯನ್ನು ಆಯಾ ವಿತರಕರು ಮಾಡಲಿದ್ದಾರೆ. ಈ ಗ್ಯಾಸ್ ಜೋಡಣೆಗೆ ಯಾವುದೇ ಹಣ ನೀಡಬೇಕಾಗಿಲ್ಲ. ಒಂದು ವೇಳೆ ಮಧ್ಯವರ್ತಿಗಳು ಹಣ ನೀಡಬೇಕು ಎಂದು ಒತ್ತಾಯಿಸಿದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ, ಉಪಾಧ್ಯಕ್ಷ ರಾಜೇಶ್ ಕಾವೇರಿ, ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಅಧಿಕಾರಿ ಮನೀಷ್ ತ್ಯಾಗಿ, ತಿಂಗಳೆೆ ವಿಕ್ರಮಾರ್ಜುನ ಹೆಗ್ಡೆ, ಕಾಡೂರು ಸುರೇಶ್ ಶೆಟ್ಟಿ, ಗ್ಯಾಸ್ ವಿತರಕರಾದ ದಿನೇಶ್ ಪುತ್ರನ್, ನಿತ್ಯಾನಂದ ಪೈ, ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಫಲಾನುಭವಿಗಳನ್ನು ಗುರುತಿಸಿದ ಸುರಕ್ಷಾ ಗ್ಯಾಸ್ ವಿತರಕ ಸತೀಶ್ ಶೇರೆಗಾರ್ ಅವರನ್ನು ಸಮ್ಮಾನಿಸಲಾಯಿತು.
ಪ್ರವೀಣ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.
ಸಿಗರೇಟ್‌ನ ಪ್ಯಾಕೆಟ್ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರುತ್ತದೆ. ಸಿಗರೇಟ್ ಸೇದಿದರೆ ಶ್ವಾಸ ಕೋಶದ ಕಾಯಿಲೆ ಹಾಗೂ ಕಣ್ಣು ನೋವು ಮೊದಲಾದ ಬೇರೆ ಬೇರೆ ಕಾಯಿಲೆಗಳು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಒಂದು ವರದಿಯ ಪ್ರಕಾರ ಒರ್ವ ಮಹಿಳೆ ಮೂರು ಹೊತ್ತು ಒಲೆಯ ಮುಂದೆ ಸೌದೆ ಮೊದಲಾದ ಉರುವಲುಗಳ ಮೂಲಕ ಕೂತು ಅಡುಗೆ ಮಾಡಿದರೆ ದಿನಕ್ಕೆ ನಾಲ್ಕು ನೂರು ಸಿಗರೇಟ್ ಸೇದಿದಷ್ಟು ದುಷ್ಪರಿಣಾಮ ಆಗುತ್ತದೆ ಎಂದು ವೈದ್ಯರ ವರದಿಗಳು ತಿಳಿಸುತ್ತವೆೆ. ಇದನ್ನು ಅರಿತ ಪ್ರಧಾನಿಯವರು ಯಾರು ಉಳ್ಳವರೋ ಗ್ಯಾಸ್ ಸಬ್ಸಿಡಿಯನ್ನು ಬಿಟ್ಟು ಬಿಡಲು ಹೇಳಿದ್ದರು. ಆ ಸಬ್ಸಿಡಿಯಲ್ಲಿ ಗ್ಯಾಸ್ ಇಲ್ಲದವರಿಗೆ ಗ್ಯಾಸ್ ಸಂಪರ್ಕವನ್ನು ನೀಡುವ ಬಗ್ಗೆ ಸಂಕಲ್ಪ ಮಾಡಿದ್ದರು. ಅದೇ ಈ ಪ್ರಧಾನಮಂತ್ರಿ ಉಜ್ವಲ್ ಯೋಜನೆಯ ಆರಂಭಕ್ಕೆ ನಾಂದಿಯಾಗಿದೆ.
– ಶೋಭಾ ಕರಂದ್ಲಾಜೆ