Advertisement

BJP: ಮಹಿಳೆ ವಿವಸ್ತ್ರ ಪ್ರಕರಣ: ಸರಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ

11:17 PM Dec 15, 2023 | Team Udayavani |

ಬೆಳಗಾವಿ: ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿದ್ದನ್ನು ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದೆ. ಜತೆಗೆ ಡಿ.16ರಂದು ರಾಜ್ಯಾದ್ಯಂತ ಧರಣಿ ನಡೆಸುವುದಾಗಿ ಘೋಷಿಸಿದೆ.

Advertisement

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಂದು ರಾಜ್ಯಾದ್ಯಂತ ಪ್ರತಿಭಟನೆ
ಬಿ.ವೈ. ವಿಜಯೇಂದ್ರ ಮಾತನಾಡಿ, ಹೊಸವಂಟಮೂರಿ ಗ್ರಾಮದಲ್ಲಿ ನಡೆದಿರುವ ಘಟನೆ ಕರ್ನಾಟಕ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ಮುಖ್ಯಮಂತ್ರಿ ಸಹಿತ ಇಡೀ ಸರಕಾರವೇ ಇಲ್ಲೇ ಇದ್ದರೂ ಪರಿಶಿಷ್ಟ ಪಂಗಡದ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವುದು ಖಂಡನೀಯ. ಈ ಘಟನೆ ಇಡೀ ದೇಶದಲ್ಲಿ ಚರ್ಚೆ ಆಗುತ್ತಿದೆ. ಆದರೆ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಮೊಸಳೆ ಕಣ್ಣೀರು ಹಾಕುತ್ತಿದೆ. ಸಿಎಂ ಸಿದ್ದರಾಮಯ್ಯ ಇಲ್ಲೇ ಇದ್ದರೂ ಮಹಿಳೆಗೆ ಸಾಂತ್ವನ ಹೇಳಲು ಹೋಗದಿರುವುದು ನಾಚಿಕೆಗೇಡಿನ ಸಂಗತಿ. ಆದ್ದರಿಂದ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಡಿ.16ರಂದು ಪ್ರತಿಭಟನೆ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದರು.

ಬಿಜೆಪಿಯಿಂದ ಸತ್ಯಶೋಧನೆ ಸಮಿತಿ
ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಈ ಘಟನೆಯ ಸತ್ಯಾಸತ್ಯತೆಯನ್ನು ತಿಳಿಯಲು ಐವರು ಸದಸ್ಯರ ಸತ್ಯಶೋಧನೆ ಸಮಿತಿಯನ್ನು ರಚಿಸಿದ್ದಾರೆ.

ಡಿ.16ರಂದು ಸಮಿತಿಯು ವಂಟಮೂರಿ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಸಮಗ್ರ ಮಾಹಿತಿ ಕಲೆ ಹಾಕಲಿದೆ. ಸಮಿತಿಯಲ್ಲಿ ಸಂಸತ್‌ ಸದಸ್ಯರಾದ ಅಪರಾಜಿತಾ ಸಾರಂಗಿ, ಸುನಿತಾ ದುಗ್ಗಲ್‌, ಲಾಕೆಟ್‌ ಚಟರ್ಜಿ, ರಂಜಿತಾ ಕೋಲಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಾ| ಆಶಾ ಲಕ್ರಾ ಇದ್ದಾರೆ ಎಂದು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ತಿಳಿಸಿದ್ದಾರೆ.c

Advertisement

ದಿಲ್ಲಿಯಲ್ಲಿ ಸಂಸದರ ಪ್ರತಿಭಟನೆ
ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಸಂಸತ್ತಿನ ಗಾಂಧಿ  ಪ್ರತಿಮೆ ಬಳಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹಾಗೂ ರಾಜ್ಯದ ಬಿಜೆಪಿ ಸಂಸದರು ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ನಳಿನ್‌ಕುಮಾರ್‌ ಕಟೀಲು, ಸದಾನಂದ ಗೌಡ, ಪಿ.ಸಿ ಮೋಹನ, ಕೆ. ನಾರಾಯಣ, ರಮೇಶ ಜಿಗಜಿಣಗಿ, ಜಿ.ಎಂ.ಸಿದ್ದೇಶ್ವರ್‌, ವೈ.ದೇವೇಂದ್ರಪ್ಪ, ಜಿ.ಎಸ್‌.ಬಸವರಾಜ ಸಹಿತ ರಾಜ್ಯದ ಹೆಚ್ಚಿನ ಸಂಸದರು ಉಪಸ್ಥಿತರಿದ್ದರು.

ಸಂತ್ರಸ್ತೆಗೆ 5 ಲಕ್ಷ ರೂ. ಪರಿಹಾರ: ಸತೀಶ
ಸಂತ್ರಸ್ತ ಮಹಿಳೆಗೆ ರಾಜ್ಯ ಸರಕಾರದಿಂದ 5 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಅಲ್ಲದೇ ನೊಂದ ಮಹಿಳೆಗೆ ಜಿಲ್ಲಾ ಕಾನೂನು ಸೇವಾ ಪ್ರಾ ಧಿಕಾರ ವತಿಯಿಂದಲೂ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next