Advertisement

ಮಹಿಳಾ ದಿನಾಚರಣೆ ವಿಶೇಷ: ಸಾವಯವ ಕೃಷಿ ಸಾಧಕಿ ಲಕ್ಷ್ಮೀ ಶಿರಮಗೊಂಡ

12:27 PM Mar 08, 2022 | Team Udayavani |

ವಿಜಯಪುರ: ಕುಟುಂಬದ ಸಹಕಾರ ಇದ್ದಲ್ಲಿ ಮಹಿಳೆ ಕೃಷಿಯಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ಬಬಲೇಶ್ವರ ಪಟ್ಟಣದ ಲಕ್ಷ್ಮಿ ಬಸಗೊಂಡ ಶಿರಮಗೊಂಡ ನಿದರ್ಶನವಾಗಿ ನಿಂತಿದ್ದಾರೆ.

Advertisement

ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಲಕ್ಷ್ಮೀ, ತಮ್ಮ ದ್ರಾಕ್ಷಿ ತೋಟಕ್ಕೆ ಭೇಟಿ ನೀಡುವ ರೈತರಿಗೆ ಪ್ರಾತ್ಯಕ್ಷಿಗೆ ನೀಡುತ್ತಾರೆ. ಇದಕ್ಕಾಗಿ ರಸಾಯನಿಕ ಗೊಬ್ಬರ ಹಾಗೂ ಸಾವಯವ ಗೊಬ್ಬರ ಹಾಕಿ ಬೆಳೆದ ದ್ರಾಕ್ಷಿ ಬೆಳೆದಿದ್ದಾರೆ.

ಸಾವಯವ ಕೃಷಿಗೆ ಅಗತ್ಯವಾಗಿರುವ ದೇಶಿ ಗೋ ತಳಿ ಸಂರಕ್ಷಣೆಗಾಗಿ 10 ಗೀರ್ ತಳಿ ಆಕಳು ಸಾಕಿದ್ದಾರೆ. ಇದರಿಂದ ಬರುವ ಹಾಲು, ಮೊಸರು, ಬೆಣ್ಣೆ, ತುಪ್ಪ, ಸಗಣಿ, ಕುರುಳು, ವಿಭೂತಿ, ಪ್ರಣತಿ, ಗೋಮೂತ್ರ, ಆರ್ಕ, ಪಂಚಗವ್ಯ ಹೀಗೆ ಗೋವುಗಳಿದ ದೊರೆಯುವ ಹಾಲು, ಮೂತ್ರ, ಸಗಣೆಯಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಇದಲ್ಲದೇ ಸಾವಯವ ಕೃಷಿಯಲ್ಲಿ ಕ್ರಿಮಿನಾಶಕ ಹಾಗೋ ರೋಗ ನಾಶಕ್ಕಾಗಿ ಸಸ್ಯಜನ್ಯ ಕ್ರಿಮಿನಾಶಕ, ಜೀವಾಮೃತ, ಗೋ ಉತ್ಪನ್ನಗಳು ಹೀಗೆ ತಾವು ತಯಾರಿಸುವ ಎಲ್ಲ ಉತ್ಪನ್ನಗಳಿಗೆ ಸ್ಥಾನಿಕ ಮಾರುಕಟ್ಟೆ  ಕಂಡುಕೊಂಡಿದ್ದಾರೆ. ಗ್ರಾಹಕರು ಅವರ ತೋಟಕ್ಕೆ ಬಂದು ಇವರ ಉತ್ಪನ್ನಗಳನ್ನು ಖರೀದಿಸುವ ಮಟ್ಟಿಗೆ ವಿಶ್ವಾಸಾರ್ಹತೆಯನ್ನು ವೃದ್ಧಿಸಿಕೊಂಡಿದ್ದಾರೆ.

Advertisement

ಇದಲ್ಲದೇ ನಿತ್ಯವೂ ತಮ್ಮ ತೋಟಕ್ಕೆ ಭೇಟಿ ನೀಡುವ ಸಾವಯವ ಕೃಷಿ ಆಸಕ್ತ ರೈತರಿಗೆ ಸಮಾಧಾನದಿಂದಲೇ ದೇಶಿ ಗೋತಳಿ ಆಧಾರಿತ ಸಾವಯವ ಕೃಷಿ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ಮಾಡುವ ಲಕ್ಷ್ಮೀ ಅವರಿಗೆ ತಮ್ಮ ಭಾಗದ ರೈತರು ವಿಷಮುಕ್ತ ಆಹಾರ ಉತ್ಪಾದಿಸಬೇಕು. ಸ್ವಾವಲಂಬಿ ಜೀವನಕ್ಕಾಗಿ ಸಾವಯವ ಕೃಷಿಯಲ್ಲಿ ತೊಡಗಬೇಕು ಎಂಬ ಕಾರಣಕ್ಕೆ ನಿರಂತರ ಜಾಗೃತಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಾವಕೃಷಿಯಲ್ಲಿ ತಾವು ಮಾಡುವ ಸಾಧನೆಯ ಹಿಂದೆ ಪತಿ ಹಾಗೂ ಅವರ ಕುಟುಂಬದ ಹಿರಿಯರ ಸಹಕಾರವೂ ಪ್ರಮುಖ ಎನ್ನುವ ಲಕ್ಷ್ಮೀ ಅವರಿಗೆ, ಕೃಷಿಯಲ್ಲಿ ತೊಡಗುವ ಯುವ ಪೀಳಿಗೆ ಸಾವಯವ ಕೃಷಿ ಮಾಡಿದಲ್ಲಿ ಉತ್ತಮ ಆರ್ಥಿಕ ಆದಾಯ ಗಳಿಸುವ ಜೊತೆಗೆ,  ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂದು ಹೇಳುತ್ತಾರೆ.

 

-ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next